ADVERTISEMENT

ಗುರುಮಠಕಲ್: ಅಕ್ರಮ ಚಟುವಟಿಕೆಗಳ ಕೇಂದ್ರವಾದ ಸರ್ಕಾರಿ ಕಟ್ಟಡಗಳು

ಮಧ್ಯ, ಗಾಂಜಾ, ಇಸ್ಪಿಟ್ ಅಡ್ಡೆಯಾದ ಸರ್ಕಾರಿ ಸ್ಥಳಗಳು

ಎಂ.ಪಿ.ಚಪೆಟ್ಲಾ
Published 20 ಮಾರ್ಚ್ 2024, 7:51 IST
Last Updated 20 ಮಾರ್ಚ್ 2024, 7:51 IST
ಗುರುಮಠಕಲ್ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹಿಂದಿನ ಕಟ್ಟಡದ ಮುಂದೆ ಮದ್ಯದ ಖಾಲಿ ಬಾಟಲಿ ಮತ್ತು ಪ್ಯಾಕ್‌ಗಳು ಬಿದ್ದಿರುವುದು
ಗುರುಮಠಕಲ್ ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಹಿಂದಿನ ಕಟ್ಟಡದ ಮುಂದೆ ಮದ್ಯದ ಖಾಲಿ ಬಾಟಲಿ ಮತ್ತು ಪ್ಯಾಕ್‌ಗಳು ಬಿದ್ದಿರುವುದು   

ಗುರುಮಠಕಲ್: ಪಟ್ಟಣದಲ್ಲಿನ ಹಳೇ ಸರ್ಕಾರಿ ಕಟ್ಟಡಗಳು ಬಳಕೆ ಮತ್ತು ನಿರ್ವಹಣೆಯ ಕೊರತೆಯಿಂದ ಪಾಳುಬಿದ್ದಿದ್ದು ಅಕ್ರಮ ಚಟುವಟಿಕೆಗಳ ಕೇಂದ್ರಗಳಾಗಿವೆ.

ಪಟ್ಟಣದ ಪ್ರಮುಖ ಪ್ರದೇಶವಾದ ಬಸ್ ನಿಲ್ದಾಣದ ಪಕ್ಕದಲ್ಲಿರುವ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢ ಶಾಲಾ ವಿಭಾಗ, ಸರ್ಕಾರಿ ಪ್ರಾಥಮಿಕ ಶಾಲೆ, ಸರ್ಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯ ಕಟ್ಟಡಗಳ ಹಿಂದಿನ ಶಿಕ್ಷಣ ಇಲಾಖೆಯ ಸಿಆರ್‌ಪಿ ಕಚೇರಿ ಕಟ್ಟಡ ಬಳಕೆಯಿಲ್ಲದೆ ಪಾಳು ಬಿದ್ದಿದೆ.

‘ಕಟ್ಟಡಗಳು ಮದ್ಯ, ಗಾಂಜಾ ಸೇವನೆಗೆ ಆಸರೆಯಾಗಿದ್ದು, ಸರ್ಕಾರಿ ನಿವೇಶನಗಳು ಹೀಗಾಗುತ್ತಿದ್ದರೂ ಯಾರೂ ಕ್ರಮವಹಸದಿರಲು ಕಾರಣವೇನು’ ಎಂದು ವಿದ್ಯಾರ್ಥಿನಿ ಅನುಪಮಾ ಪ್ರಶ್ನಿಸಿದರು.

ADVERTISEMENT

ತಾಲ್ಲೂಕು ಕೇಂದ್ರವಾಗಿ ಘೋಷಿಸಿ ಈಗಾಗಲೇ ಹಲವು ವರ್ಷಗಳು ಸಂದಿವೆ. ತಾಲ್ಲೂಕು ಮಟ್ಟದ ಕಚೇರಿಗಳನ್ನು ಸ್ಥಾಪಿಸಲು ಹಲವು ಬಾರಿ ಮನವಿ ಮಾಡಲಾಗಿದೆ. ಕಟ್ಟಡಗಳ ಕೊರತೆಯ ನೆಪ ಹೇಳುವ ಸರ್ಕಾರ, ಈಗಾಗಲೇ ಇರುವ ಸರ್ಕಾರಿ ಕಟ್ಟಡಗಳ ದುರಸ್ತಿ ಅಥವಾ ನೆಲಸಮ ಮಾಡಿ ಮರು ನಿರ್ಮಾಣ ಮಾಡಿದರೆ ಎರಡು ತಾಲ್ಲೂಕುಗಳಿಗೆ ಬೇಕಾದಷ್ಟು ಕಚೇರಿಗಳನ್ನು ಆರಂಭಿಸಬಹುದು ಎನ್ನುವುದು ಬಸಪ್ಪ ಅವರ ಮಾತು.

ಪಟ್ಟಣದಲ್ಲಿ ಈಗಾಗಲೇ ಪಾಳು ಬಿದ್ದಿರುವ ಸರ್ಕಾರಿ ಕಟ್ಟಡಗಳ, ನಿವೇಶನಗಳ ಮಾಹಿತಿಯನ್ನು ಜಿಲ್ಲಾ ಮಟ್ಟದವರೆಗೂ ನೀಡಿದ್ದು ಸ್ಥಳಾವಕಾಶದ ಸದ್ಬಳಕೆ ಪಡೆಯುವ ನಿಟ್ಟಿನಲ್ಲಿ ಯೋಜನೆ ರೂಪಿಸಲು ಕೋರಲಾಗಿತ್ತು. ಆದರೆ, ಯಾರೊಬ್ಬರಿಗೂ ಇತ್ತ ಮುಖ ಮಾಡುವ ಆಸಕ್ತಿಯಿಲ್ಲ. ಈಗ ಅದೇ ಸರ್ಕಾರಿ ಕಟ್ಟಡಗಳು ಗಾಂಜಾ, ಮದ್ಯ ಸೇವನೆಗೆ ಮತ್ತು ಇಸ್ಪೇಟ್ ಅಡ್ಡೆಯಾಗಿ ಮಾರ್ಪಡುತ್ತಿವೆ. ಈಗಲಾರೂ ಎಚ್ಚೆತ್ತುಕೊಳ್ಳಲಿ ಎಂದು ಸಾಮಾಜಿಕ ಕಾರ್ಯಕರ್ತ ಸಂಜು ಅಳೆಗಾರ ಆಗ್ರಹಿಸುತ್ತಾರೆ.

ಈಚೆಗೆ ಸಿಪಿಎಸ್ ಶಾಲಾ ಕಟ್ಟಡವನ್ನು ಸಿಡಿಪಿಒ ಕಚೇರಿ ಆರಂಭಿಸಲು ಚಿಂತಿಸಲಾಗಿದೆ. ಸರ್ಕಾರಿ ಬಾಲಕರ ಪ.ಪೂ.ಕಾಲೇಜಿನ ಹಿಂದಿನ ಪಾಳುಬಿದ್ದ ಕಟ್ಟಡ ಸರಿಪಡಿಸಿ ತಾಲ್ಲೂಕು ಪಂಚಾಯಿತಿ ಕಚೇರಿಯಾಗಿಸಲು ಬೇಕಾದ ಅನುಮತಿ, ಅನುದಾನ ಲಭಿಸಿದ್ದು, ಇನ್ನೇನು ಕೆಲಸವೂ ಆರಂಭವಾಗಲಿದೆ. ಉಳಿದಂತೆ ಅಕ್ರಮ ಚಟುವಟಿಕೆಗಳ ಅಡ್ಡೆಯಾದ ಸರ್ಕಾರಿ ಕಟ್ಟಡಗಳ ಸದ್ಬಳಕೆಗೆ ಇಲಾಖೆಗಳು ಮುಂದಾಗಲಿ ಎನ್ನುವುದು ಜನರ ಮನವಿ.

ಈ ಕುರಿತು ಕರೆ ಮಾಡಿದಾಗ ‘ನಾನು ಹೊಸದಾಗಿ ಇಲ್ಲಿಒಗೆ ನಿಯೋಜನೆಗೊಂಡಿದ್ದು, ಬುಧವಾರ ಅಥವಾ ಗುರುವಾರ ಅಂತಹಾ ಕಟ್ಟಡಗಳಿರುವಲ್ಲಿ ಭೇಟಿ ನೀಡಿ ಪರಿಶಿಲಿಸುವೆ ಮತ್ತು ಸರ್ಕಾರಿ ಕಟ್ಟಡಗಳ, ನಿವೇಶನಗಳ ಸದ್ಬಳಕೆಗೆ ಹಾಗೂ ಅನೈತಿಕ ಚಟುವಟಿಕೆಗಳನ್ನು ತಡೆಯುವ ನಿಟ್ಟಿನಲ್ಲಿ ಸೂಕ್ತ ಕ್ರಮಕ್ಕಾಗಿ ಶಿಫಾರಸ್ಸು ಮಾಡುವೆ’ ಎಂದು ತಹಶೀಲ್ದಾರ್ ಶ್ರೀನಿವಾಸ್ ಅವರು ಪ್ರತಿಕ್ರಿಯಿಸಿದರು.

ಗುರುಮಠಕಲ್ ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಲಗೇರಾದ ಅಡುಗೆ ಕೋಣೆಯಾಗಿ ಬಳಕೆಯಾಗುತ್ತಿರುವ ಸಿಆರ್‌ಪಿ ಕಚೇರಿಯ ಗೋಡೆಗಳಲ್ಲಿ ಗಿಡಗಳು ಬೆಳೆದಿರುವುದು
ಸಂಜು ಅಳೆಗಾರ ಸಾಮಾಜಿಕ ಕಾರ್ಯಕರ್ತ
ನಾಗೇಶ ಗದ್ದಿಗಿ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ
ಶರಣಬಸಪ್ಪ ಎಲ್ಲೇರಿ ಕರವೇ ಅಧ್ಯಕ್ಷ

Quote - ಸರ್ಕಾರಿ ಕಟ್ಟಡಗಳನ್ನು ಕೆಲವರು ಗಾಂಜಾ ಮದ್ಯ ಸೇವನೆ ಮತ್ತು ಇಸ್ಪೀಟ್ ಅಡ್ಡೆಯಾಗಿಸುತ್ತಿದ್ದಾರೆ. ಇನ್ನೂ ಕೆಲವು ಶೌಚಕ್ಕೆ ಬಳಕೆಯಾಗುತ್ತಿವೆ ಸಂಜು ಅಳೆಗಾರ ಸಾಮಾಜಿಕ ಕಾರ್ಯಕರ್ತ

Quote - ಸರ್ಕಾರದ ಹಳೇ ಕಟ್ಟಡಗಳು ಅಕ್ರಮ ಕಾರ್ಯಗಳ ಕೇಂದ್ರಗಳಾದರೂ ಸಂಬಂಧಿತರು ಗಮನಹರಿಸುತ್ತಿಲ್ಲ. ಹಲವು ಮನವಿ ಮಾಡಿದರೂ ಉಪಯೋಗವಾಗಿಲ್ಲ. ತಾಲ್ಲೂಕು ಆಡಳಿತ ಶೀಘ್ರ ಕ್ರಮವಹಿಸಲಿ ಇಲ್ಲವಾದರೆ ಹೋರಾಟ ಅನಿವಾರ್ಯ ನಾಗೇಶ ಗದ್ದಿಗಿ ಜಯ ಕರ್ನಾಟಕ ಸಂಘಟನೆ ಅಧ್ಯಕ್ಷ

Quote - ಸರ್ಕಾರಿ ಕಚೇರಿಗಳನ್ನು ಆರಂಭಿಸಲು ನಿವೇಶನದ ಕೊರತೆ ಇದೆ ಎನ್ನಲಾಗುತ್ತಿದೆ. ಆದರೆ ಈಗಾಗಲೇ ಪಾಳು ಬಿದ್ದ ಕಟ್ಟಡಗಳನ್ನು ಅಕ್ರಮ ಕಾರ್ಯಕ್ಕೆ ಕೊಟ್ಟಿರುವರೇ? ಸಂಬಂಧಿತರು ಶೀಘ್ರ ಕ್ರಮವಹಿಸಲಿ. ಲೋಕಸಭಾ ಚುನಾವಣೆ ಬಳಿಕ ಹೋರಾಟಕ್ಕೆ ತಯಾರಿ ಮಾಡಿದ್ದೇವೆ ಶರಣಬಸಪ್ಪ ಎಲ್ಲೇರಿ ಕರವೇ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.