ADVERTISEMENT

ಮಾನಸಿಕ ಅಸ್ವಸ್ಥರನ್ನು ಆರೈಕೆ ಕೇಂದ್ರಕ್ಕೆ ಸ್ಥಳಾಂತರ

ಮನೋವೃಕ್ಷ ಆಲದ ಮರ ಸಂಸ್ಥೆಯಿಂದ ಅಗತ್ಯ ಉಪಚಾರ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2025, 7:38 IST
Last Updated 7 ನವೆಂಬರ್ 2025, 7:38 IST
ಗುರುಮಠಕಲ್‌ ಪಟ್ಟಣದಲ್ಲಿದ್ದ ನಿರಾಶ್ರಿತ ಮಾನಸಿಕ ಅಸ್ವಸ್ಥರನ್ನು ಗುರುವಾರ ಜಿಲ್ಲಾಸ್ಪತ್ರೆಯ ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು
ಗುರುಮಠಕಲ್‌ ಪಟ್ಟಣದಲ್ಲಿದ್ದ ನಿರಾಶ್ರಿತ ಮಾನಸಿಕ ಅಸ್ವಸ್ಥರನ್ನು ಗುರುವಾರ ಜಿಲ್ಲಾಸ್ಪತ್ರೆಯ ಮಾನಸಿಕ ಚಿಕಿತ್ಸಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು   

ಗುರುಮಠಕಲ್‌: ಅಸೋಸಿಯೇಶನ್‌ ಆಫ್‌ ಪೀಪಲ್ಸ್‌ ವಿಥ್‌ ಡಿಸಬಿಲಿಟಿ (ಎಪಿಡಿ) ಸಂಸ್ಥೆಯ ಸಹಯೋಗದಲ್ಲಿ ಗುರುವಾರ ಮನೋವೃಕ್ಷ ಆಲದಮರ ಫೌಂಡೇಶನ್‌ನ ವತಿಯಿಂದ ಪಟ್ಟಣದ ನಿರಾಶ್ರಿತ ಮಾನಸಿಕ ಅಸ್ವಸ್ಥರನ್ನು ವೈದ್ಯಕೀಯ ಆರೈಕೆಗಾಗಿ ಜಿಲ್ಲಾಸ್ಪತ್ರೆಯ (ಯಿಮ್ಸ್‌) ಮನೋವೈದ್ಯಶಾಸ್ತ್ರ ವಿಭಾಗದ ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು.

ಪಟ್ಟಣದಲ್ಲಿ ಬಿಕ್ಷಾಟನೆಯಲ್ಲಿ ತೊಡಗಿದ್ದ, ಮಾನಸಿಕ ‍ಅಸ್ವಸ್ಥರಾದ ಹಣಮಂತ (45) ಮತ್ತು ಸತ್ಯನಾರಾಯಣ (48) ಅವರನ್ನು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಜಿಲ್ಲಾಸ್ಪತ್ರೆ) ಗೆ ಸ್ಥಳಾಂತರಿಸಲಾಯಿತು.

ಮಾನಸಿಕ ಆರೋಗ್ಯ ಸರಿಯಿಲ್ಲದ ಮತ್ತು ನಿರಾಶ್ರಿತರ ಕುರಿತು ಎಪಿಡಿ ಸಂಸ್ಥೆಯವರು ಮನೋವೃಕ್ಷ ಆಲದಮರ ಫೌಂಡೇಶನ್‌ಗೆ ಸಂಪರ್ಕಿಸಿದ್ದರು. ಅದರಂತೆ ಗುರುವಾರ ಸ್ಥಳಾಂತರ ಕಾರ್ಯಾಚರಣೆ ಜರುಗಿದೆ.

ADVERTISEMENT

ಪಟ್ಟಣದಲ್ಲಿ ಭಿಕ್ಷಾಟನೆಯಲ್ಲಿ ತೊಡಗಿದ್ದ 9 ರಿಂದ ಹತ್ತು ಜನ ನಿರಾಶ್ರಿತ ಮಾನಸಿಕ ಅಸ್ವಸ್ಥರಿದ್ದು, ಅವರಿಗೆ ಅವಶ್ಯಕ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಯಲ್ಲಿನ ಆಲದಮರ ಫೌಂಡೇಶನ್‌ನವರನ್ನು ಸಂಪರ್ಕಿಸಿ ಕಾರ್ಯಾಚರಣೆ ನಡೆಸಿದ್ದೇವೆ. ಇಂದು ಇಬ್ಬರನ್ನು ಆರೈಕೆ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು ಎಂದು ಎಪಿಡಿ ಸಂಸ್ಥೆಯ ಸಂಯೋಜಕ ವಿರೂಪಾಕ್ಷ ಮಾಲಿಪಾಟೀಲ ತಿಳಿಸಿದರು.

ನಮ್ಮ ಸಂಸ್ಥೆಯು ಅಂಗವಿಕಲರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಮಾನಸಿಕ ಅಸ್ವಸ್ಥತೆಯೂ ಒಂದು ವೈಕಲ್ಯವಾಗಿದೆ. ಅಗತ್ಯ ಚಿಕಿತ್ಸೆ ಮತ್ತು ಸಹಕಾರ ಸಿಕ್ಕರೆ ಅವರೂ ಮುಖ್ಯವಾಹಿನಿಗೆ ಬರುತ್ತಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿನ ಉಳಿದ ನಿರಾಶ್ರಿತ ಮಾನಸಿಕ ಅಸ್ವಸ್ಥರನ್ನೂ ಸ್ಥಳಾಂತರಿಸುವ ಕೆಲಸ ಮಾಡಲಾಗುತ್ತದೆ ಎಂದು ಹೇಳಿದರು.

ಮನೋವೃಕ್ಷ ಆಲದಮರ ಫೌಂಡೇಶನ್‌ನ ಜಿಲ್ಲಾ ಸಂಯೋಜಕ ಶೇಖರ ಕಟ್ಟಿಮನಿ, ಸಿಎಚ್‌ಸಿ ವೈದ್ಯಾಧಿಕಾರಿ ಡಾ.ಮಹೇಶ ಸಜ್ಜನ, 108 ಸಿಬ್ಬಂದಿ ಪವನಕುಮಾರ ಚಂದಾಪುರ ಮತ್ತು‍ ಶ್ರೀನಿವಾಸ ಸೇರಿದಂತೆ ಪೊಲೀಸ್‌, ಅಂಬ್ಯೂಲೆನ್ಸ್‌ ಮತ್ತು ವೈದ್ಯಕೀಯ ಸಿಬ್ಬಂದಿ ಕಾರ್ಯಚರಣೆಯ ತಂಡದಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.