ADVERTISEMENT

ಮುಂಗಾರಿ ಮುತ್ತಾಯಿತು ಹಿಂಗಾರಿ ಹವಳಾಯಿತು: ದೇವರ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 7:00 IST
Last Updated 17 ಜನವರಿ 2026, 7:00 IST
ವಡಗೇರಾ ತಾಲ್ಲೂಕಿನ ಹೈಯ್ಯಾಳ (ಬಿ) ಗ್ರಾಮದ ಹೈಯ್ಯಾಳಲಿಂಗೇಶ್ವರ ಜಾತ್ರಾ ಮಹೋತ್ಸವದ ಪಲ್ಲಕ್ಕಿ ಉತ್ಸವವು ಸಂಭ್ರಮದಿಂದ ಜರಗಿತು
ವಡಗೇರಾ ತಾಲ್ಲೂಕಿನ ಹೈಯ್ಯಾಳ (ಬಿ) ಗ್ರಾಮದ ಹೈಯ್ಯಾಳಲಿಂಗೇಶ್ವರ ಜಾತ್ರಾ ಮಹೋತ್ಸವದ ಪಲ್ಲಕ್ಕಿ ಉತ್ಸವವು ಸಂಭ್ರಮದಿಂದ ಜರಗಿತು   

ವಡಗೇರಾ: ತಾಲ್ಲೂಕಿನ ಹೈಯ್ಯಾಳ (ಬಿ) ಗ್ರಾಮದಲ್ಲಿ ಮಕರ ಸಂಕ್ರಮಣದ ನಿಮಿತ್ತ ಸಗರನಾಡಿನ ಆರಾಧ್ಯದೈವ ಹೈಯ್ಯಾಳಲಿಂಗೇಶ್ವರ ಜಾತ್ರಾ ಮಹೋತ್ಸವದ ಪಲ್ಲಕ್ಕಿ ಉತ್ಸವವು ಗುರುವಾರದಂದು ಅತ್ಯಂತ ಸಂಭ್ರಮದಿಂದ ಜರಗಿತು.

ಗುರುವಾರ ನಸುಕಿನ ಜಾವ ಗ್ರಾಮದ ಆಳ ಮೆಲ್ ಹತ್ತಿರ ದೇವಸ್ಥಾನದ ಸಕ್ರೆಪ್ಪ ಪೂಜಾರಿಯಿಂದ ದೇವರ ಹೇಳಿಕೆ ಜರುಗಿತು. ‘ಹಯ್ಯಾಳಿ ಮಾನಭಿಮಾನ ನಿನ್ನದು ತರ‍್ತು ಮುಂಗಾರಿ ಮಿಂಚಿತು ಮುಂಗಾರಿ ಮುತ್ತಾಯ್ತು ಹಿಂಗಾರಿ ಹವಳಾಯಿತು ಸಪ್ಪನ್ನಾರ್ ದೇಶಕ್ಕೆ ಸರವು ಮಳೆ ಇಡು ಏಳು ಕೋಟಿಗಿ ಏಳು ಕೋಟಿಗೆ’ ಎಂದು ನುಡಿದರು.

ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪಿಸಿದ್ದ ದೇವರ ಮೂರ್ತಿಗಳನ್ನು ಕೃಷ್ಣಾ ನದಿಯಲ್ಲಿ ಗಂಗಾ ಸ್ನಾನ ಮಾಡಿಸಿದ ನಂತರ ಡೊಳ್ಳಿನ ಪದ, ಡೊಳ್ಳಿನ ಕುಣಿತ ಹಾಗೂ ಭಜನಾ ಕಾರ್ಯಕ್ರಮಗಳೊಂದಿಗೆ ಮೇರವಣಿಗೆಯು ಪ್ರಮುಖ ಬೀದಿಗಳಲ್ಲಿ ಸಾವಿರಾರು ಭಕ್ತರೊಂದಿಗೆ ಸಕಲ ಮಂಗಲವಾದ್ಯಗಳೊಂದಿಗೆ ಹಾಗೂ ದೇವರ ಆಳು ಮಕ್ಕಳ ಕುಣಿತದೊಂದಿಗೆ ದೇವಸ್ಥಾನ ತಲುಪಿತು. ಗುಡಿಯ ಸುತ್ತಲು ಪಲ್ಲಕ್ಕಿಯನ್ನು ಹೊತ್ತು ಆಳ ಮಕ್ಕಳು ದೇವರ ಸೇವೆ ಮಾಡಿದರು.

ADVERTISEMENT

ಪಲ್ಲಕ್ಕಿಯನ್ನು ದೇವಾಲಯದ ಗದ್ದುಗೆಯಲ್ಲಿ ಪ್ರತಿಷ್ಠಾಪಿಸಲಾಯಿತು. ಜಾತ್ರೆಗೆ ಬಂದ ಭಕ್ತರು ಕೃಷ್ಣಾ ನದಿಯಲ್ಲಿ ಪುಣ್ಯ ಸ್ನಾನ ಗೈದು ದೇವರ ದರ್ಶನ ಪಡೆದುಕೊಂಡರು. ನಂತರ ಈ ಭಾಗದ ಪ್ರಸಿದ್ಧ ತಿಂಡಿಗಳಾದ ಮಿರ್ಚಿ ಭಜಿ, ಜಿಲೇಬಿ, ಖಾರಾವನ್ನು ಖರೀದಿಸಿ ಕುಟುಂಬ ಹಾಗೂ ಗೆಳೆಯರೊಂದಿಗೆ ಸವಿದರು. ಜಾತ್ರೆಯಲ್ಲಿ ಲಡ್ಡು, ಬೆಂಡು, ಬತಾಸು, ಖಾರ, ಮಂಡಾಳ, ವಿಭೂತಿ ,ಕುಂಕುಮ, ಭಂಡಾರ ಮಕ್ಕಳ ಆಟೀಕೆ ಸಾಮಾನುಗಳ ಖರೀದಿ ಬಲು ಜೋರಾಗಿತ್ತು.

ಜಾತ್ರೆಗೆ ಜಿಲ್ಲೆ ಹಾಗೂ ನೆರೆಯ ಜಿಲ್ಲೆಯಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು. ಗ್ರಾಮೀಣ ಕ್ರೀಡೆಗಳಾದ ಭಾರ ಎತ್ತುವುದು ಮತ್ತು ಕೈಕುಸ್ತಿ ಕ್ರೀಡೆಗಳನ್ನು ಆಯೋಜಿಸಲಾಯಿತು.

ಭಕ್ತಾದಿಗಳಿಗೆ ದೇವಸ್ಥಾನದ ವತಿಯಿಂದ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.