ADVERTISEMENT

ಹತ್ರಾಸ್ ಅತ್ಯಾಚಾರ ಪ್ರಕರಣ: ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ನೀಡಲು ಆಗ್ರಹ

ಉತ್ತರ ಪ್ರದೇಶದ ಘಟನೆ ಖಂಡಿಸಿ ಎಐಎಂಎಸ್‍ಎಸ್, ಎಐಡಿಎಸ್‍ಒ, ಎಐಡಿವೈಒದಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 16:18 IST
Last Updated 30 ಸೆಪ್ಟೆಂಬರ್ 2020, 16:18 IST
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ಎಐಎಂಎಸ್‍ಎಸ್, ಎಐಡಿಎಸ್‍ಒ, ಎಐಡಿವೈಒ ವತಿಯಿಂದ ಪ್ರತಿಭಟನೆ ನಡೆಸಲಾಯಿತು
ಯಾದಗಿರಿ ಜಿಲ್ಲಾಧಿಕಾರಿ ಕಚೇರಿ ಬಳಿ ಎಐಎಂಎಸ್‍ಎಸ್, ಎಐಡಿಎಸ್‍ಒ, ಎಐಡಿವೈಒ ವತಿಯಿಂದ ಪ್ರತಿಭಟನೆ ನಡೆಸಲಾಯಿತು   

ಯಾದಗಿರಿ: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಅತ್ಯಾಚಾರದಿಂದ ನರಳಿ ಕೊಲೆಯಾದ 20 ವರ್ಷದ ಯುವತಿಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿ ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್ಎಸ್), ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್‌ಒ) ಹಾಗೂ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಸೇಷನ್ (ಎಐಡಿವೈಒ) ಸಂಘಟನೆಗಳಿಂದ ಜಿಲ್ಲಾಧಿಕಾರಿ ಕಚೇರಿ ಬಳಿ ಬುಧವಾರ ಪ್ರತಿಭಟನೆ ನಡೆಸಲಾಯಿತು.

ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಪ್ರಕರಣದ ವಿಚಾರಣೆಯನ್ನು ಫಾಸ್ಟ್‌ಟ್ರ್ಯಾಕ್ ನ್ಯಾಯಾಲಯದಲ್ಲಿ ನಡೆಸಬೇಕು. ಪ್ರಕರಣ ದಾಖಲು ಮಾಡುವಲ್ಲಿ ವಿಳಂಬ ಮಾಡಿದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆ ವಿಧಿಸಬೇಕು. ಮಾದಕ ವಸ್ತು, ಅಶ್ಲೀಲತೆ, ಮದ್ಯಪಾನ ನಿಷೇಧಿಸಬೇಕು ಎಂದು ಒತ್ತಾಯಿಸಿದರು.
ದಲಿತ ಯುವತಿ ಮೇಲೆ ಸೆಪ್ಟೆಂಬರ್ 14 ರಂದು ನಡೆದ ಗುಂಪು ಅತ್ಯಾಚಾರ, ಅಮಾನವೀಯ ಕಿರುಕುಳ ಹಾಗೂ ಕೊಲೆಯನ್ನು ಖಂಡಿಸುತ್ತೇವೆ ಎಂದರು.

ಪೈಶಾಚಿಕ ಕೃತ್ಯ ಎಸಗಿದ ನಾಲ್ವರು ಮೇಲ್ಜಾತಿಯ ಯುವಕರು ಘಟನೆ ನಡೆದ ನಂತರವೂ ಯಾವುದೇ ಅಳುಕಿಲ್ಲದೆ ಸ್ವತಂತ್ರವಾಗಿ ಓಡಾಡಿಕೊಂಡಿದ್ದದ್ದು ನಾಗರಿಕ ಸಮಾಜಕ್ಕೆ ಆಘಾತವನ್ನುಂಟು ಮಾಡುತ್ತದೆ. ಗಾಯಗೊಂಡು ನರಳುತ್ತಿದ್ದ ಸಂತ್ರಸ್ತೆಗೆ ವೈದ್ಯಕೀಯ ನೆರವು ನೀಡದೆ ಪೊಲೀಸ್ ಠಾಣೆಯಲ್ಲಿ ಅಮಾನವೀಯವಾಗಿ ಸತಾಯಿಸಿ, ನಂತರ ಪೋಷಕರೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡುವಂಥ ಪರಿಸ್ಥಿತಿ ನಿರ್ಮಾಣ ಮಾಡಿದ ಪೊಲೀಸರ ನಡವಳಿಕೆಯನ್ನು ಉಗ್ರವಾಗಿ ಖಂಡಿಸುತ್ತೇವೆ ಎಂದರು.

ADVERTISEMENT

5 ದಿನಗಳ ನಂತರ ಅರೆಜ್ಞಾನದಲ್ಲಿದ್ದ ಸಂತ್ರಸ್ತೆಯು ಅತ್ಯಾಚಾರಿಗಳನ್ನು ಹೆಸರಿಸಿದ ಬಳಿಕ ಆರೋಪಿಗಳನ್ನು ಬಂಧಿಸಲಾಯಿತು ಎಂಬುದು ಮತ್ತು 15 ದಿನಗಳ ಕಾಲ ಸಾವು- ಬದುಕಿನ ನಡುವೆ ಹೋರಾಡಿ ಕಡೆಗೆ ಸಂತ್ರಸ್ತೆಯು ಸಾವಿಗೀಡಾಗಿರುವುದು ಇಡೀ ರಾಜ್ಯಾಡಳಿತದ ವೈಫಲ್ಯ ಮತ್ತು ಜನತೆಯ ಬಗ್ಗೆ ನಿಷ್ಕಾಳಜಿಯನ್ನು ಎತ್ತಿ ತೋರುತ್ತದೆ ಎಂದರು.

ಉತ್ತರ ಪ್ರದೇಶದಲ್ಲಿಮಹಿಳಾ ವಿರೋಧಿ, ಸಮಾಜ ವಿರೋಧಿ ಧೋರಣೆಯಿಂದ ಮಹಿಳೆಯರ ಮತ್ತು ಮಕ್ಕಳ ಮೇಲಾಗುತ್ತಿರುವ ಅತ್ಯಾಚಾರ, ಗುಂಪು ಅತ್ಯಾಚಾರ, ಕೊಲೆ, ಅಗೌರವ ಹೆಚ್ಚಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಂತರ ಜಿಲ್ಲಾಧಿಕಾರಿ ಮೂಲಕ ಪ್ರಧಾನಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಎಐಎಂಎಸ್‍ಎಸ್ ಸಂಚಾಲಕಿ ಗೀತಾ, ಎಐಡಿಎಸ್‍ಒ ಜಿಲ್ಲಾಧ್ಯಕ್ಷ ಎಚ್.ಪಿ.ಸೈದಪ್ಪ, ಎಐಡಿವೈಒ ಸಂಚಾಲಕ ಜಮಾಲ್‍ಸಾಬ್, ಡಿ.ಉಮಾದೇವಿ, ಬಿ.ಎನ್‌.ರಾಮಲಿಂಗಪ್ಪ, ಬಿ.ಸಿಂಧು, ಭಾಗ್ಯಶ್ರೀ, ಮೋನಮ್ಮ, ಸಿದ್ದಪ್ಪ, ಶಿವುಕುಮಾರ್, ಹಣಮಂತ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.