ADVERTISEMENT

ಯಾದಗಿರಿ: ಹಿಜಾಬ್‌ಗೆ ಅವಕಾಶ ನೀಡುವಂತೆ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2022, 8:20 IST
Last Updated 7 ಫೆಬ್ರುವರಿ 2022, 8:20 IST
ಹಿಜಾಬ್‌ಗೆ ಅವಕಾಶ ನೀಡುವಂತೆ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ
ಹಿಜಾಬ್‌ಗೆ ಅವಕಾಶ ನೀಡುವಂತೆ ಮಹಿಳಾ ಸಂಘಟನೆಗಳಿಂದ ಪ್ರತಿಭಟನೆ   

ಯಾದಗಿರಿ: ಉಡುಪಿ ಮತ್ತು ರಾಜ್ಯದ ಇತರೆ ಜಿಲ್ಲೆಗಳಲ್ಲಿ ಹಿಜಾಬ್ ಧರಿಸಿ ಬಂದ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಕಾಲೇಜು ಪ್ರವೇಶ ನಿರಾಕರಿಸಿದ ಕಾಲೇಜು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲೆಯ ಶಹಾಪುರದಲ್ಲಿ ಮಹಿಳಾ ಸಂಘಟನೆಗಳ ಒಕ್ಕೂಟದಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಶಹಾಪುರದ ನಗರದ ಬಸವೇಶ್ವರ ವೃತ್ತದ ಬಳಿ ಜಮಾಯಿಸಿದ ಮಹಿಳೆಯರು ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಹಿಜಾಬ್ ಮುಸ್ಲಿಮರ ಸಂವಿಧಾನಿಕ ಹಕ್ಕು.‌ ಎಲ್ಲ ಧರ್ಮದವರ ಅವರವರ ಧಾರ್ಮಿಕ ವಿಧಿವಿಧಾನದಂತೆ ಜೀವಿಸುವ ಹಕ್ಕನ್ನು ಸಂವಿಧಾನ ನೀಡಿದೆ. ಇದನ್ನು ಬಿಜೆಪಿ ಸಂಘಪರಿವಾರ ಕೋಮು ಧ್ರುವೀಕರಣ ಮಾಡಲು ಹೊರಟಿದೆ‌ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ಮುಸ್ಲಿಂ ಮಹಿಳೆಯನ್ನು ಭಯಭೀತಗೊಳಿಸಿ ಶಿಕ್ಷಣವನ್ನು ಮೊಟಕುಗೊಳಿಸಬೇಕೆಂಬ ದೃಷ್ಟಿಯಿಂದ ಈ ರೀತಿಯ ಅಜೆಂಡಾಗಳನ್ನು ಸೃಷ್ಟಿಸಲಾಗುತ್ತಿದೆ. ಇದರ ಮುಂದುವರಿದ ಭಾಗವಾಗಿ ಉಡುಪಿ, ಕುಂದಾಪುರ, ಕೊಪ್ಪ, ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸೇರಿದಂತೆ ಹಲವಾರು ಕಾಲೇಜುಗಳಲ್ಲಿ ವ್ಯವಸ್ಥಿತ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದರು.

ಮುಸ್ಲಿಮರಿಗೆ ನೀಡಿದ ಹಿಜಾಬ್ ಹತ್ತಿಕ್ಕುವ ಷಡ್ಯಂತರ ರೂಪಿಸಿರುವ ಸಂಘ ಪರಿವಾರ ವಿರುದ್ದ ಪೊಲೀಸ್ ಇಲಾಖೆ, ಜಿಲ್ಲಾಡಳಿತಗಳು ಕ್ರಮ ಕೈಗೊಳ್ಳಬೇಕು. ಹಿಜಾಬ್ ಧರಿಸಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ನಂತರ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

ಈ ವೇಳೆ ಮಹಿಳಾ ಸಂಘಟನೆಗಳ ಒಕ್ಕೂಟದ ಮುಖ್ಯಸ್ಥೆ ಫಿರ್ದೋಸ್ ಖಾತೂನ್‍, ಶಕೀರಾ ಬೇಗಂ, ಕನೀಜ್ ಫಾತಿಮಾ, ರಫತ್ ಅಜ್ಜು, ಆಯೇಷಾ, ಶಾಹೀನ್, ತಸ್ಲೀಮ್, ಶಕೀರಾ ಬೇಗಂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.