
ಯಾದಗಿರಿ: ‘ಜಗತ್ತಿನಲ್ಲಿಯೇ ಧರ್ಮಪ್ರಧಾನವಾದ ಬದುಕನ್ನು ಹೊಂದಿರುವ ಭಾರತದ ನೆಲ ಹಿಂದುತ್ವದ ಮೂಲಮಂತ್ರವಾಗಿದೆ’ ಎಂದು ದೇವಾಲಯ ಸಂವರ್ಧನಾ ಸಮಿತಿ ರಾಜ್ಯ ಸಂಯೋಜಕ ಮನೋಹರ ಮಠದ ಹೇಳಿದರು.
ನಗರದಲ್ಲಿ ಶನಿವಾರ ಹಿಂದೂ ಸಮ್ಮೇಳನ ಆಯೋಜನಾ ಸಮಿತಿ ಯಾದಗಿರಿ ವತಿಯಿಂದ ಆಯೋಜಿಸಿದ್ದ ವಿರಾಟ್ ಹಿಂದೂ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಹಿಂದುತ್ವ ಎಂದರೆ ಕೋಮುವಾದ, ಜಾತಿವಾದ, ಪೂಜಾ ಪದ್ಧತಿ ಅಲ್ಲ. ಹಿಂದುತ್ವದ ಬಗ್ಗೆ ಬಹುತೇಕರು ಅರ್ಥಕ್ಕಿಂತ ಅಪರ್ಥ ಮಾಡಿಕೊಂಡಿದ್ದೆ ಹೆಚ್ಚಿದೆ. ಅವರಿಗೆ ನಿಜವಾದ ಹಿಂದುತ್ವದ ಸಾರ ತಿಳಿಸಬೇಕು. ಹಿಂದುತ್ವದ ನೆಲೆಯಾಗಿರುವ ದೇಶದಲ್ಲಿ ಜಾತಿ, ಭಾಷೆ, ಪಕ್ಷದ ಕಾರಣಕ್ಕೆ ಕಚ್ಚಾಡುವ ಕೀಳು ಮನೋಭಾವದಿಂದ ದೂರಾಗಬೇಕು. ವಿಶ್ವಗುರು ಆಗುವ ದೇಶವನ್ನು ಕಟ್ಟಬೇಕಿದೆ’ ಎಂದರು.
‘ಧರ್ಮ ಎಂದರೆ ಪೂಜೆ ಮಾಡಿ ತೆಂಗಿನಕಾಯಿ ಒಡೆಯುವುದು, ಭಸ್ಮ ಹಚ್ಚಿಕೊಂಡು ಹೋಮ–ಹವನ, ಜಪ ತಪ ಮಾಡುವುದು ಎಂದುಕೊಂಡಿದ್ದಾರೆ. ಧರ್ಮ ಎಂಬುದು ಜೀವನ ಪದ್ಧತಿ. ಇನ್ನೊಬ್ಬರಿಗೆ ಉಪಕಾರ ಮಾಡದಿರುವುದೇ ಧರ್ಮ, ಅನ್ಯಾಯ, ಮೋಸ ಮಾಡುವುದೇ ಅಧರ್ಮ ಎಂದು ನಮ್ಮ ಹಿರಿಯರು ಸರಳವಾಗಿ ಧರ್ಮ–ಅಧರ್ಮದ ವ್ಯಾಖ್ಯಾನಿಸಿದ್ದಾರೆ’ ಎಂದು ಹೇಳಿದರು.
‘ಬದುಕಿನ ಪ್ರತಿಯೊಂದು ಹೆಜ್ಜೆಯೂ ಧರ್ಮದ ಹಾದಿಯಲ್ಲಿ ಸಾಗಬೇಕು ಎಂಬ ವಿಶಾಲ ದೃಷ್ಟಿಯಿಂದಾಗಿ ನಮ್ಮ ಹಿರಿಯರು ಎಲ್ಲ ವೃತ್ತಿ, ಕಾರ್ಯಗಳಲ್ಲಿ ಧರ್ಮವನ್ನು ಜೋಡಿಸಿದ್ದಾರೆ. ಕರ್ತವ್ಯದಿಂದ ಹಿಮ್ಮುಖ ಆಗಬಾರದು ಎಂದ ಚಿಂತನೆಯೂ ಅದರ ಹಿಂದೆ ಇತ್ತು’ ಎಂದರು.
ಸಮ್ಮೇಳನದ ಅಧ್ಯಕ್ಷ ರಾಜಶೇಖರ್ ಬಾಪೂರೆ ಮಾತನಾಡಿ, ‘ಭಾರತ ಮತ್ತು ಹಿಂದೂ ಧರ್ಮ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ವಿಶ್ವಕ್ಕೆ ಶಾಂತಿ, ಯೋಗ, ವೇದ, ಆಯುರ್ವೇದಂತಹ ಅನನ್ಯ ಕೊಡುಗೆಗಳನ್ನು ಭಾರತದ ಕೊಟ್ಟಿದ್ದು, ಭಾರತದ ಏಳಿಗೆಯಲ್ಲಿ ಜಗತ್ತಿನ ಏಳಿಗೆ ಅಡಗಿದೆ’ ಎಂದು ಅಭಿಪ್ರಾಯಪಟ್ಟರು.
‘ಭಾರತದ ಮೇಲೆ ವಿದೇಶಿಗರು ಆಕ್ರಮಣ ಮಾಡಿದರು ನಮ್ಮವರು ಒಂದೂ ರಾಷ್ಟ್ರದ ಮೇಲೆ ಆಕ್ರಮಣ ಮಾಡಲಿಲ್ಲ. ಹೀಗಾಗಿ, ನಮ್ಮ ಹಿರಿಯರ ಬದುಕು ಬಹಳ ಸಂಘರ್ಷಮಯವಾಗಿತ್ತು. ಸಂಘರ್ಷಮಯವಾದ ನಮ್ಮ ಪೂರ್ವಿಕರ ಬಗ್ಗೆ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಹಿಂದೂ ಧರ್ಮದ ರೀತಿ ತಿಳಿದುಕೊಂಡು ರಾಷ್ಟ್ರದ ಭಕ್ತರಾಗಿ ಬದುಕೋಣ’ ಎಂದರು.
ಕಾರ್ಯಕ್ರಮದಲ್ಲಿ ವಿಶ್ವಕರ್ಮ ಏಕದಂಡಗಿ ಮಠದ ರವೀಂದ್ರ ಸ್ವಾಮೀಜಿ, ಸೊಪ್ಪಿ ಬಸವೇಶ್ವರ ಮಠದ ಚನ್ನವೀರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಂಚಾಲಕ ಬಸವಕುಮಾರ ಯಾದವ್, ಉಪಾಧ್ಯಕ್ಷ ವೆಂಕಯ್ಯ ಶೆಟ್ಟಿ, ಕಾರ್ಯದರ್ಶಿ ಆಕಾಶ್ ಬೀರನೂರ, ಕೋರ್ ಕಮಿಟಿ ಸದಸ್ಯರಾದ ಸಾಬು ಚಂಡ್ರಿಕಿ, ಅನ್ನಪೂರ್ಣ ಸಿ.ಪಾಟೀಲ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಪಾಲ್ಗೊಂಡಿದ್ದರು.
ಅಬ್ಬರದ ಶೋಭಾಯಾತ್ರೆ
ವಿರಾಟ್ ಹಿಂದೂ ಸಮ್ಮೇಳನದ ಅಂಗವಾಗಿ ನಗರದ ಮೈಲಾಪುರ ಬೇಸ್‌ನ ಹನುಮಾನ ದೇವಸ್ಥಾನದಿಂದ ಬಾಲಾಜಿ ಮಂದಿರವರೆಗೆ ಅದ್ದೂರಿ ಶೋಭಾಯಾತ್ರೆ ಜರುಗಿತು. ಭಾರತ ಮಾತೆ ಶ್ರೀರಾಮ ಸರ್ವ ಸಮಾಜದ ಮಹಾಪುರುಷರ ಶರಣರ ಭಾವಚಿತ್ರಗಳ ಮೆರವಣಿಗೆ ಮಾಡಲಾಯಿತು. ಶೋಭಯಾತ್ರೆ ಸಾಗುವ ಮಾರ್ಗದ ಉದ್ದಕ್ಕೂ ಕೇಸರಿ ಬಾವುಟಗಳು ರಾರಾಜಿಸಿದವು. ಸಾವಿರಾರು ಕಾರ್ಯಕರ್ತರು ಕೇಸರಿ ಶಾಲು ಕೇಸರಿ ಪೇಟ ಧರಿಸಿ ಭಾಗಿಯಾಗಿದ್ದರು. ತಮಟೆ ಡೊಳ್ಳಿನ ನಾದಕ್ಕೆ ಯುವಕರು ಕುಣಿದು ಸಂಭ್ರಮಿಸಿದರು. ರವೀಂದ್ರ ಸ್ವಾಮೀಜಿ ಚನ್ನವೀರ ಸ್ವಾಮೀಜಿ ಬಿಜೆಪಿ ಮುಖಂಡರಾದ ಲಲಿತಾ ಅನಪುರ ಬಸವರಾಜ ವಿಭೂತಿಹಳ್ಳಿ ಮಹೇಶರೆಡ್ಡಿ ಮುದ್ನಾಳ ರಾಚನಗೌಡ ಮುದ್ನಾಳ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.