ಸುರಪುರ: ನಾಡಿನ ಇತಿಹಾಸದಲ್ಲಿ ರಾಣಿ ಅಬ್ಬಕ್ಕ, ಕಿತ್ತೂರು ಚನ್ನಮ್ಮ, ಕೆಳದಿ ಚನ್ನಮ್ಮನಂತಹ ಅನೇಕ ರಾಣಿಯರು ತಮ್ಮ ಪ್ರಜೆಗಳ ಮತ್ತು ಸಂಸ್ಥಾನದ ರಕ್ಷಣೆಗೆ ಯುದ್ಧದಲ್ಲಿ ಹೋರಾಟ ಮಾಡಿ, ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೇ ಉಳಿದಿದ್ದಾರೆ.
ಸುರಪುರದಲ್ಲೂ ಇಂತಹ ಕೆಚ್ಚೆದೆಯ ಅರಸಿಯರು ಇದ್ದರು. ಮೊಘಲರು, ಆಂಗ್ಲರೊಡನೆ ಕಾದಾಡಿ, ಪ್ರಜೆಗಳನ್ನು ರಕ್ಷಿಸಿದ್ದಾರೆ. ಆದರೆ, ಇತಿಹಾಸಕಾರರ ನಿರ್ಲಕ್ಷ್ಯದಿಂದ ಎಲೆಮರೆಯ ಕಾಯಿಯಂತೆ ಉಳಿದು ಬಿಟ್ಟಿದ್ದಾರೆ ಎಂಬುದು ವಿದ್ವಾಂಸರ ಅಭಿಪ್ರಾಯ. ಈಗಿನ ಮಹಾರಾಣಿ ಅನುರಾಧಾ ರಾಜಾ ಕೃಷ್ಣಪ್ಪನಾಯಕ ಅವರು ಈಚೆಗೆ ಬರೆದ ‘ಸುರಪುರ ಸಂಸ್ಥಾನ ಕೈಪಿಡಿ’ ಚಿತ್ರಗಳೊಂದಿಗೆ ಇತಿಹಾಸದ ಮಾಹಿತಿ ಒದಗಿಸುತ್ತದೆ. ಹಂಪಿಯ ಕನ್ನಡ ವಿವಿಯ ಅಧ್ಯಯನಾಂಗದ ನಿರ್ದೇಶಕ ಅಮರೇಶ ಯಾತಗಲ್ ಅವರ ‘ಚಾರಿತ್ರಿಕ ಸುರಪುರ’ ಕೃತಿಯಲ್ಲಿ ವೀರ ರಾಣಿಯರ ಬಗ್ಗೆ ಉಲ್ಲೇಖವಾಗಿದೆ.
ಅವರಲ್ಲಿ ರಾಣಿ ಅಮ್ಮಾನಾಗತಿ (1687–1689), ರಾಣಿ ಕಾಂತಮ್ಮ (1801–1803), ರಾಣಿ ರಂಗಮ್ಮ (1818–1827), ರಾಣಿ ಈಶ್ವರಮ್ಮ (1843–1853) ಪ್ರಮುಖರು.
ಗೋಸಲ ವಂಶದ ರಾಜಾ ಹಸರಂಗಿ ಪಾಮನಾಯಕನ (1666–1687) ಪಟ್ಟದರಸಿಯೇ ರಾಣಿ ಅಮ್ಮಾನಾಗತಿ. ಶ್ರೇಷ್ಠ ರಾಜನೀತಿಜ್ಞೆ. ಕುಶಾಗ್ರಮತಿಯೂ, ಆಡಳಿತ ನೀತಿ ಬಲ್ಲವಳಾಗಿದ್ದಳು. ಯುದ್ಧದ ಕಲೆ ಕರಗತ ಮಾಡಿಕೊಂಡಿದ್ದಳು. ಅಲ್ಲದೇ ಅಪ್ರತಿಮ ಈಜುಪಟುವಾಗಿದ್ದಳು.
ರಾಣಿಯ ಹೆಸರಿನಲ್ಲಿ ಪಾಮನಾಯಕ ಅಮ್ಮಾಪುರ ಗ್ರಾಮ ನಿರ್ಮಿಸುತ್ತಾನೆ. ಈಗ ಅದನ್ನು ಪೇಠ ಅಮ್ಮಾಪುರ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ರಾಣಿಯ ಜಲಕ್ರೀಡೆಗೆ ಈಜುಕೊಳ ನಿರ್ಮಿಸುತ್ತಾನೆ. ಅಮ್ಮಾಪುರದ ಪಕ್ಕದಲ್ಲಿ ಈಜುಕೊಳದ ಕುರುಹುಗಳು ಕೆಲ ವರ್ಷಗಳ ಹಿಂದೆ ಇದ್ದವು ಎಂದು ಹಿರಿಯರು ಹೇಳುತ್ತಾರೆ.
ಪಾಮನಾಯಕನಿಗೆ ಸಂತಾನವಿರಲಿಲ್ಲ. ದತ್ತು ತೆಗೆದುಕೊಳ್ಳುವ ವಿಚಾರದಲ್ಲಿ ರಾಣಿ ಅಮ್ಮಾನಾಗತಿಯ ನಿರ್ಧಾರವನ್ನು ಅರಸ ಒಪ್ಪಿಕೊಳ್ಳುತ್ತಾನೆ. ರಾಜಾ ಪಿಡ್ಡನಾಯಕ ಎಂಬ ಬಾಲಕನನ್ನು ದತ್ತು ತೆಗೆದುಕೊಳ್ಳುತ್ತಾರೆ. ಇದೇ ಸಂದರ್ಭದಲ್ಲಿ ಹಸರಂಗಿ ಪಾಮನಾಯಕ ನಿಧನ ಹೊಂದುತ್ತಾನೆ. ರಾಜಾ ಪಿಡ್ಡನಾಯಕ ಚಿಕ್ಕವನಿರುತ್ತಾನೆ. ಅನಿವಾರ್ಯವಾಗಿ ಅಮ್ಮಾ ನಾಗತಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಾಳೆ.
ಮೊಘಲರ ದಾಳಿ ನಡೆಯುತ್ತಲೆ ಇರುತ್ತದೆ. ರಾಜನ ನಿಧನದ ಸಮಯ ಸಾಧಿಸಿದ ಶತ್ರುಗಳು ಏಕಾಏಕಿ ವಾಗಣಗೇರಿ ಮೇಲೆ ದಾಳಿ ನಡೆಸುತ್ತಾರೆ. ಸ್ವತಃ ರಾಣಿ ಅಮ್ಮನಾಗತಿ ಕತ್ತಿ ಹಿಡಿದು ರಣರಂಗಕ್ಕೆ ಧುಮುಕುತ್ತಾಳೆ. ಸೈನಿಕರನ್ನು ಹುರಿದುಂಬಿಸುತ್ತಾಳೆ. ವೀರಾವೇಶದಿಂದ ಹೋರಾಡುತ್ತಾಳೆ. ತನ್ನ ಪ್ರಾಣವನ್ನು ಪಣವಾಗಿಟ್ಟು ಪ್ರಜೆಗಳನ್ನು ರಕ್ಷಿಸುತ್ತಾಳೆ.
ಈಕೆಯೆ ಪ್ರೀತಿ, ಮಮತೆ, ಕಾಳಜಿಗೆ ಮನಸೋತ ಪ್ರಜೆಗಳು ಅವ್ವ(ತಾಯಿ) ನಾಗತಿಯೆಂದು ಕರೆಯುತ್ತಾರೆ. 1687ರಲ್ಲಿ ಪುತ್ರನಿಗೆ ಅಧಿಕಾರ ಹಸ್ತಾಂತರಿಸುತ್ತಾಳೆ. ತನ್ನ ತಾಯಿಯ ಸಲಹೆಯಿಂದ ಪರಿಪೂರ್ಣ ರಾಜನಾಗಿ ಬೆಳೆಯುವ ಪಿಡ್ಡನಾಯಕ (1687–1726) ಗೋಸಲ ರಾಜರಲ್ಲೇ ಅತಿ ಹೆಚ್ಚು ಸಮಯ ಆಡಳಿತ ನಡೆಸಿದ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ.
ನಮ್ಮ ಸಂಸ್ಥಾನದ ಆಡಳಿತ ವ್ಯವಸ್ಥೆಯಲ್ಲಿ ರಾಣಿಯರ ಪಾಲು ಅಗ್ರಗಣ್ಯವಾಗಿತ್ತು. ನಾಲ್ವರು ರಾಣಿಯರು ಸಂದಿಗ್ಧ ಕಾಲದಲ್ಲಿ ಸಂಸ್ಥಾನ ಕಾಪಾಡಿದ್ದು ಅವರ್ಣನೀಯರಾಜಾ ಕೃಷ್ಣಪ್ಪನಾಯಕ ಸಂಸ್ಥಾನಿಕ
ಸುರಪುರದ ವೀರ ರಾಣಿಯರ ಬಗ್ಗೆ ಮೂಲ ಮೌಖಿಕ ಮತ್ತು ಜನಪದ ದಾಖಲೆಗಳನ್ನು ಸಂಶೋಧಿಸಿ ವಸ್ತುನಿಷ್ಠ ಇತಿಹಾಸ ಬೆಳಕಿಗೆ ತರುವ ಕಾರ್ಯ ಆಗಬೇಕುಅಮರೇಶ ಯತಗಲ್ ನಿರ್ದೇಶಕರು ಅಧ್ಯಯನಾಂಗ ಕನ್ನಡ ವಿ.ವಿ. ಹಂಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.