
ಗುರುಮಠಕಲ್: ಪಟ್ಟಣದಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಬುಧವಾರ ರಾತ್ರಿ ಕಲುಷಿತ ಆಹಾರ, ನೀರಜ ಸೇವನೆ ಶಂಕೆಯಿಂದಾಗಿ 30ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥಗೊಂಡಿದ್ದಾರೆ.
ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿಗಳನ್ನು ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದಾಖಲಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿ ಇರುವ ನಾಲ್ವರನ್ನು ಯಾದಗಿರಿ ನಗರದ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ವಿದ್ಯಾರ್ಥಿನಿಯರ ಹಾಸ್ಟೆಲ್‌ನಲ್ಲಿನ ಮಕ್ಕಳಿಗೆ ಏನು ಸಮಸ್ಯೆಯಾಗಿದೆ ಎಂಬುದು ತಿಳಿಯುತ್ತಿಲ್ಲ. ಸಮುದಾಯ ಆರೋಗ್ಯ ಕೇಂದ್ರಕ್ಕೆ (ಸಿಎಚ್‌ಸಿ) ನಾವು ಭೇಟಿ ನೀಡಿದಾಗ 30ಕ್ಕೂ ಹೆಚ್ಚಿನ ಮಕ್ಕಳಿಗೆ ಕಲುಷಿತ ಆಹಾರ ಸೇವನೆಯಿಂದ ಸಮಸ್ಯೆಯಾಗಿರುವುದು ತಿಳಿಯಿತು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿಗಳು ಕೂಡಲೇ ಸಮಸ್ಯೆಯ ಕಾರಣ ಪತ್ತೆಹಚ್ಚಬೇಕು. ಇಂತಹ ಘಟನೆ ಮರುಕಳಿಸದಂತೆ ಎಚ್ಚರವಹಿಸಬೇಕು ಎಂದು ಡಿಎಸ್‌ಎಸ್ ಅಧ್ಯಕ್ಷ ಲಾಲಪ್ಪ ತಲಾರಿ ಆಗ್ರಹಿಸಿದರು.
ಇಲ್ಲಿನ ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆಯಿದೆ. ತುರ್ತು ಚಿಕಿತ್ಸೆ ನೀಡುವ ಮಟ್ಟಿಗೆ ನಮ್ಮಲ್ಲಿ ಮಾನವ ಸಂಪನ್ಮೂಲ, ತಜ್ಞ ವೈದ್ಯರು ಮತ್ತು ಔಷಧಿಗಳ ಸಮಸ್ಯೆಯಿದೆ. ಅದನ್ನು ಸರಿದೂಗಿಸಲು ಸರ್ಕಾರಕ್ಕೆ ಯಾಕೆ ಮನಸ್ಸಾಗುತ್ತಿಲ್ಲ? ಬಡವರ ಪ್ರಾಣಕ್ಕೆ ಬೆಲೆಯಿಲ್ಲದಂತೆ ಆಗಿದೆ ಎಂದು ಅಶೋಕ ಶನಿವಾರಂ ಕಿಡಿಕಾರಿದರು.
‘ಹಾಸ್ಟೆಲ್‌ನಲ್ಲಿ ಬುಧವಾರ ರಾತ್ರಿ ಊಟಕ್ಕೆ ಚಿಕನ್ ಮಾಡಲಾಗಿತ್ತು. ಚಿಕನ್ ತಿನ್ನದವರಿಗೆ ಸೋಯಾ
ಸೊಪ್ಪಿನ ತರಕಾರಿ ಮತ್ತು ಟೊಮೆಟೊ ಅಡುಗೆ ಮಾಡಲಾಗಿತ್ತು. 80ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಊಟ ಮಾಡಿದ್ದರು. ಊಟ ಮಾಡಿದ ಅರ್ಧ ಗಂಟೆಯ ನಂತರ ಕೆಲವರು ವಾಂತಿ ಮಾಡಲು ಆರಂಭಿಸಿದರು’ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
‘ಹಾಸ್ಟೆಲ್‌ನಲ್ಲಿ ನೋಡು ನೋಡುತ್ತಿದ್ದಂತೆ ಒಬ್ಬರಿಂದ ಒಬ್ಬರು ಶುರುವಾಗಿ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಮಾಂಸ ತಿಂದವರಿಗಷ್ಟೇ ಅಲ್ಲ, ತರಕಾರಿ ತಿಂದವರಿಗೂ ಸಮಸ್ಯೆಯಾಗಿದೆ. ನಮಗೆ ಏನಾಗಿಲ್ಲ. ಆದರೆ, ಈಗ ಭಯವಾಗುತ್ತಿದೆ’ ಎಂದು ಕೆಲ ವಿದ್ಯಾರ್ಥಿಗಳು ಅಲವತ್ತುಕೊಂಡರು.
ಹಾಸ್ಟೆಲ್‌ನ ಫುಡ್ ಚಾರ್ಟ್‌ಗೆ ಸಂಬಂಧಿಸಿದಂತೆ ಬುಧವಾರ ಮಾಂಸಾಹಾರಕ್ಕೆ ಚಿಕನ್ ಸಸ್ಯಾಹಾರಕ್ಕೆ ಸೋಯಾ ಹಾಗೂ ಟೊಮೆಟೊ ಅಡುಗೆ ನೀಡಲಾಗಿದೆ. ಸಮಸ್ಯೆ ಏನೆಂಬುದು ಗೊತ್ತಿಲ್ಲಮಂಜುಳಾ, ಹಾಸ್ಟೆಲ್ ಮೇಲ್ವಿಚಾರಕಿ
ನಾನು ಊಟ ಮಾಡಿದ ನಂತರ 30 ನಿಮಿಷದಲ್ಲಿ ನಮಗೆ ವಾಕರಿಕೆಯಾಗಿ ವಾಂತಿ ಬಂತು. ನನಗೆ ಮಾತ್ರವಲ್ಲದೆ ನಮ್ಮ ಹಾಸ್ಟೆಲ್‌ನಲ್ಲಿ ಚಿಕನ್ ತಿಂದವರಿಗೂ ವಾಂತಿಯಾಗಿದೆ.ಭಾವನಾ(ಹೆಸರು ಬದಲಿಸಿದೆ), ವಿದ್ಯಾರ್ಥಿನಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.