ಗುರುಮಠಕಲ್: ’ಮತಕ್ಷೇತ್ರ ವ್ಯಾಪ್ತಿಯ ಹಾಸ್ಟೆಲ್‌ಗಳಲ್ಲಿನ ಪರಿಸ್ಥಿತಿ ಅರಿಯಲು ಹಿಂದುಳಿದ ವರ್ಗಗಳ, ಸಮಾಜ ಕಲ್ಯಾಣ, ಮೊರಾರ್ಜಿ ಸೇರಿ ವಿವಿಧ ವಸತಿ ಶಾಲೆಗಳು ಮತ್ತು ಅಲ್ಪಸಂಖ್ಯಾತರ ವಸತಿ ನಿಲಯಗಳಲ್ಲಿ ಹದಿನೈದು ದಿನಕ್ಕೊಮ್ಮೆ ವಾಸ್ತವ್ಯ ಮಾಡುವ ನಿರ್ಧಾರ ಮಾಡಿದ್ದೇನೆ’ ಎಂದು ಶಾಸಕ ಶರಣಗೌಡ ಕಂದಕೂರ ತಿಳಿಸಿದರು.
ಪಟ್ಟಣದಲ್ಲಿ ಗುರುವಾರ ಜರುಗಿದ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದ ನೂತನ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
’ನಾನು ವಾಸ್ತವ್ಯ ಮಾಡುವ ಹಾಸ್ಟೆಲ್ ಮೊದಲೇ ಆಯ್ಕೆ ಮಾಡುವುದಿಲ್ಲ. ಅಧಿಕಾರಿಗಳಿಗೂ ಹೇಳುವುದಿಲ್ಲ. ನಾನು ಹಾಸ್ಟೆಲ್ ಸೇರಿದ ನಂತರವೇ ಎಲ್ಲಿ ವಾಸ್ತವ್ಯ ಎಂದು ತಿಳಿಯಲಿದೆ’ ಎಂದರು.
ಸದ್ಯ ಉದ್ಘಾಟನೆ ಮಾಡಿರುವ ವಸತಿ ನಿಲಯ ಕಟ್ಟಡ ನಿರ್ಮಾಣಕ್ಕೆ ನಮ್ಮ ತಂದೆ ದಿ.ನಾಗನಗೌಡರ ಅವಧಿಯಲ್ಲಿ ₹3.5 ಕೋಟಿ ಅನುದಾನದಲ್ಲಿ ಅನುಮೋದನೆ ಪಡೆದಿದ್ದರು. ಈಗ ಕಟ್ಟಡವು ಲೋಕಾರ್ಪಣೆಗೊಂಡಿದ್ದು, ಮುಂದಿನ ಹತ್ತು ದಿನಗಳೊಳಗೆ ಅಗತ್ಯ ಹಾಸಿಗೆ ಸೇರಿದಂತೆ ಎಲ್ಲಾ ಸೌಲಭ್ಯ ಒದಗಿಸಿ, ವಿದ್ಯಾರ್ಥಿಗಳನ್ನು ಬಾಡಿಗೆ ಕಟ್ಟಡದಿಂದ ಇಲ್ಲಿಗೆ ಸ್ಥಳಾಂತರಿಸಬೇಕು ಎಂದು ಸೂಚಿಸಿದರು.
ಮುಂದಿನ ದಿನಗಳಲ್ಲಿ ನಮ್ಮ ತಾಲ್ಲೂಕಿನಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಲಾ ಒಂದೊಂದು ವಸತಿ ನಿಲಯಗಳಿಗೆ ಕೆಕೆಆರ್‌ಡಿಬಿ. ಅನುದಾನದಲ್ಲಿ ಅನುಮೋದನೆ ಪಡೆಯುತ್ತಿದ್ದು, ಶೀಘ್ರದಲ್ಲೇ ಕಾಮಗಾರಿಗಳನ್ನೂ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.
ಡಿ.ದೇವರಾಜ ಅರಸು ಅವರು ರಾಜ್ಯ ಕಂಡ ಅತ್ಯಂತ ದೂರದೃಷ್ಟಿಯುಳ್ಳ ನಾಯಕರು. ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಸಮುದಾಯಗಳನ್ನು ಸಮಾಜದ ಮುನ್ನೆಲೆಗೆ ತರುವ ನಿಟ್ಟಿನಲ್ಲಿ ಅವರು ನೀಡಿದ ಕಾರ್ಯಕ್ರಮಗಳು, ರಾಜಕೀಯವಾಗಿ ಅವರು ಬೆಳೆಸಿದ್ದು, ಸಮಾಜದಲ್ಲಿ ಹಿಂದುಳಿದ ಸಮುದಾಯಗಳು ಸ್ವಾಭಿಮಾನದಿಂದ ಬದುಕುವಂತಾಗಬೇಕು ಎನ್ನುವ ಅವರ ಕನಸುಗಳು ನಮಗೆಲ್ಲ ಅನುಕರಣೀಯ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಸಂತೋಷರೆಡ್ಡಿ ಮಾತನಾಡಿ, ಈ ಹಿಂದೆ ಮಾಜಿ ಶಾಸಕ ದಿ.ನಾಗನಗೌಡ ಕಂದಕೂರ ಅವಧಿಯಲ್ಲಿ ಸಮಸ್ಯೆಗಳನ್ನು ಕೇಳಿ, ಪೂರಕ ಪರಿಹಾರಕ್ಕೆ ಕ್ರಮವಹಿಸಿದ್ದರಿಂದ ಸದ್ಯ ನೂತನ ಕಟ್ಟಡ ನಿರ್ಮಾಣವಾಗಿದೆ. ಶಾಸಕ ಶರಣಗೌಡ ಕಂದಕೂರ ಅವರೂ ಸಹ ಇಲಾಖೆಗೆ ಬೇಕಾದ ಸೌಲಭ್ಯ ಒದಗಿಸುತ್ತಿದ್ದು, ಈಗಾಗಲೇ ಕೋಟಗೇರಾ ಗ್ರಾಮದಲ್ಲೂ ಜನರ ಮನವೊಲಿಸಿ ಹಾಸ್ಟೆಲ್ ನಿರ್ಮಿಸಲು ಮುತುವರ್ಜಿ ವಹಿಸಿದ್ದರು ಎಂದು ತಿಳಿಸಿದರು.
ತಹಶೀಲ್ದಾರ್ ನೀಲಪ್ರಭಾ ಬಬಲಾದ, ತಾಲ್ಲೂಕು ಪಂಚಾಯಿತಿ ಇಒ ಸಂತೋಷ, ಪುರಸಭೆ ಸಿಒ ಭಾರತಿ ಸಿ.ದಂಡೋತಿ, ಸಿಡಿಪಿಒ ಶರಣಬಸವ, ಎಇಇ ಅಂಬಾರಾಯ, ಕ್ರೈಸ್‌ನ ಇಇ ದಶರಥ ಉಪಸ್ಥಿತರಿದ್ದರು.
ಬಾಲ್ಯ ವಿವಾಹ ಬೇಡ. ಕನಿಷ್ಟ ಪದವಿ ವರೆಗಾದರೂ ಶಿಕ್ಷಣ ಪಡೆಯಿರಿ. ಆ ನಿಟ್ಟಿನಲ್ಲಿ ಬಾಲಕಿಯರು ತಮ್ಮ ಮನೆಗಳಲ್ಲಿ ಸ್ಪಷ್ಟವಾಗಿ ತಿಳಿಸಿ. ಜತೆಗೆ ಸುತ್ತಲಿನ ಜನರಲ್ಲೂ ಬಾಲ್ಯವಿವಾಹದ ಸಮಸ್ಯೆಗಳ ಕುರಿತು ಜಾಗೃತಿ ಮೂಡಿಸಿ
-ಶರಣಗೌಡ ಕಂದಕೂರ. ಶಾಸಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.