ಗುರುಮಠಕಲ್ (ಯಾದಗಿರಿ): ಮನೆಯಲ್ಲಿ ಪತಿ, ಅತ್ತೆ, ಮಾವ ಹಾಗೂ ಮೈದುನರ ಕಿರುಕುಳ ತಾಳಲಾರದೆ ಸೀಮೆಎಣ್ಣೆಯಿಂದ ಸುಟ್ಟುಕೊಂಡು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಪಟ್ಟಣದಲ್ಲಿ ಮಂಗಳವಾರ ರಾತ್ರಿ ಜರುಗಿದೆ.
ಮೃತರನ್ನು ಪಟ್ಟಣದ ಕಂದೂರುಗೇರಿ ಬಡಾವಣೆಯ ಭಾರತಮ್ಮ ಉರುಫ್ ರಜಿತಾ (27) ಎಂದು ಗುರುತಿಸಲಾಗಿದೆ.
ನೆರೆಯ ತೆಲಂಗಾಣದ ಅಂಗಡಿ ರಾವುಲಪಲ್ಲಿ ಗ್ರಾಮದ ಭಾರತಮ್ಮ ಹಾಗೂ ಪಟ್ಟಣದ ಬೀರಪ್ಪ ಕುರುಬರು ಅವರಿಗೆ 8 ವರ್ಷಗಳ ಹಿಂದೆ ಮದುವೆ ಮಾಡಿ ಕೊಡಲಾಗಿತ್ತು. ದಂಪತಿಗೆ ಮೂವರು ಪುತ್ರಿಯರಿದ್ದಾರೆ.
'ಬರೀ ಹೆಣ್ಣು ಮಕ್ಕಳನ್ನು ಹೆತ್ತಿದ್ದಾಳೆ' ಎಂದು ಪತಿ ಬೀರಪ್ಪ, ಅತ್ತೆ ಸಾವಿತ್ರಮ್ಮ, ಮಾವ ಗ್ಯಾಂಗ್ ನಾಗಪ್ಪ ಹಾಗೂ ಮೈದುನ ಸೇರಿ ರಜಿತಾರಿಗೆ ಸದಾ ಕಿರುಕುಳ ನೀಡುತ್ತಿದ್ದರು. ಮಂಗಳವಾರವೂ ಜಗಳವಾಗಿದ್ದು, ಸೀಮೆ ಎಣ್ಣೆ ಸುರಿದುಕೊಂಡು ರಜಿತಾ ಸುಟ್ಟುಕೊಂಡಿದ್ದಾಳೆ' ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡುತ್ತಿರುವಾಗಲೇ ರಜಿತಾ ಮೃತಪಟ್ಟಿದ್ದಾರೆ.
'ಅಕ್ಕ ರಜಿತಾಳಿಗೆ ಮೂವರು ಪುತ್ರಿಯರಿದ್ದಾರೆ. ಗಂಡು ಮಕ್ಕಳಾಗಿಲ್ಲ ಎನ್ನುವ ಕಾರಣಕ್ಕೆ ಅವರ ಮನೆಯಲ್ಲಿ ಸದಾ ಕಿರುಕುಳ ನೀಡುತ್ತಿದ್ದರು. ಮಂಗಳವಾರ ರಾತ್ರಿಯೂ ಕಿರುಕುಳ ನೀಡಿ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಶಂಕೆಯಿದೆ' ಎಂದು ಮೃತಳ ಸಹೋದರ ಲಕ್ಷ್ಮೀಕಾಂತ ಕಂಡ್ರೆಪಲ್ಲಿ 'ಪ್ರಜಾವಾಣಿ'ಗೆ ತಿಳಿಸಿದರು.
ಘಟನೆ ಕುರಿತು ಗುರುಮಠಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.