
ಯಾದಗಿರಿ: ಹುಬ್ಬಳ್ಳಿಯಲ್ಲಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಿಜೆಪಿ ಕಾರ್ಯಕರ್ತೆಯನ್ನು ವಶಕ್ಕೆ ಪಡೆಯುವಾಗ ಪೊಲೀಸರು ವಿವಸ್ತ್ರಗೊಳಿಸಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ ಬಿಜೆಪಿ ಮಹಿಳಾ ಮೋರ್ಚಾದ ಮುಖಂಡರು, ದೌರ್ಜನ್ಯ ಎಸಗಿದವರು ವಿರುದ್ಧ ಕ್ರಮ ಕೈಗೊಳ್ಳುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯೆ ವೀಣಾ ಮೋದಿ, ‘ಪಕ್ಷದ ಕಾರ್ಯಕರ್ತೆ ಮೇಲೆ ದೌರ್ಜನ್ಯ ಸೇರಿದಂತೆ ಒಬ್ಬ ಜೀವಂತ ಪ್ರತಿನಿಧಿಗೆ ಶ್ರದ್ಧಾಂಜಲಿ ಪೋಸ್ಟ್ ಹಾಕಿರುವವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು’ ಎಂದರು.
‘ಹುಬ್ಬಳ್ಳಿಯಲ್ಲಿ ಪೊಲೀಸರು ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡಿರುವ ಘಟನೆ ನಾಗರಿಕ ಸಮಾಜ ತಲೆತಗ್ಗಿಸುವಂತೆ ಆಗಿದೆ. ಮಹಿಳೆಯರಿಗೆ ಪವಿತ್ರ ಸ್ಥಾನ ನೀಡುವ ಸಮಾಜದಲ್ಲಿ ರಾಜಕೀಯ ದ್ವೇಷಕ್ಕಾಗಿ ಮಹಿಳೆ ಎಂದು ನೋಡದೆ, ಸಾರ್ವಜನಿಕವಾಗಿ ದೌರ್ಜನ್ಯ ಎಸಗುವುದು ಸರಿಯಲ್ಲ. ಪೊಲೀಸರಿಗೆ ಕುಮ್ಮಕ್ಕು ನೀಡಿದ್ದು ನಾಚಿಕೆಗೇಡಿನ ಸಂಗತಿ’ ಎಂದು ಹೇಳಿದರು.
‘ಪೊಲೀಸ್ ಇಲಾಖೆಯ ಮೇಲೆ ಸರ್ಕಾರದ ನಿಯಂತ್ರಣ ಇಲ್ಲದಿರುವುದು ಇಂತಹ ಘಟನೆಗಳು ಸಾಕ್ಷಿಯಾಗಿದೆ. ಕಾಂಗ್ರೆಸ್‌ನ ಪಾಲಿಕೆ ಸದಸ್ಯೆ ಸುವರ್ಣ ಅವರು ನೀಡಿದ ದೂರಿನ ಮೇರೆಗೆ ಬಿಜೆಪಿ ಕಾರ್ಯಕರ್ತೆ ಸುಜಾತಾ ಹಂಡಿ ಅವರ ಮೇಲೆ ಪೊಲೀಸರು ತಮ್ಮ ದರ್ಪ ಪ್ರದರ್ಶಿಸಿದ್ದಾರೆ. ಇದು ರಾಜ್ಯದಲ್ಲಿ ಮಹಿಳೆಯರು ಅಸುರಕ್ಷಿತರು ಹಾಗೂ ದುರಾಡಳಿತಕ್ಕೆ ಹಿಡಿದ ಕೈಗನ್ನಡಿಯಾಗಿದೆ’ ಎಂದು ಆರೋಪಿಸಿದರು.
‘ಸುಳ್ಯದ ಶಾಸಕಿ ಭಾಗಿರಥಿ ಮುರುಳ್ಳ ಅವರನ್ನು ತೇಜೋವಧೆ ಮಾಡುವ ಪೋಸ್ಟ್ ಹಾಕಲಾಗಿದೆ. ಈ ರೀತಿಯ ಶ್ರದ್ಧಾಂಜಲಿ ಪೋಸ್ಟ್ ಹಾಕಿರುವುದನ್ನು ನೋಡಿದರೆ, ಈತನ ಮನಸ್ಥಿತಿ ಏನೂ ಎಂಬುದು ಅರ್ಥ ಆಗುತ್ತದೆ. ದಲಿತ ಶಾಸಕಿಯನ್ನು ಅಪಮಾನ ಮಾಡಿರುವವರ ಮೇಲೆ ಮೊಕದ್ದಮೆ ದಾಖಲಿಸಿ, ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ಜಿಲ್ಲಾ ಕಾರ್ಯದರ್ಶಿ ವಿಜಯಲಕ್ಷ್ಮಿ ನಾಯಕ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸ್ನೇಹ ರಸಳಕರ್, ಮಹಿಳಾ ಮೋರ್ಚಾ ನಗರ ಮಂಡಲ ಅಧ್ಯಕ್ಷೆ ಭೀಮಬಾಯಿ ಶೆಂಡಿಗಿ, ಶಕುಂತಲಾ ಜಿ. ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.