ADVERTISEMENT

ಹುಣಸಗಿ: ಗಮನ ಸೆಳೆವ ಬಿಸಿ ನೀರಿನ ಬುಗ್ಗೆ, ಪುಷ್ಕರಣಿಗಳು

ಭೀಮಶೇನರಾವ ಕುಲಕರ್ಣಿ
Published 29 ಮೇ 2025, 5:48 IST
Last Updated 29 ಮೇ 2025, 5:48 IST
ಹುಣಸಗಿ ತಾಲ್ಲೂಕಿನ ಮುದನೂರು ಗ್ರಾಮದ ರಾಮ ತೀರ್ಥದಲ್ಲಿ ಮಕ್ಕಳು ಈಜಾಡುತ್ತಿರುವುದು
ಹುಣಸಗಿ ತಾಲ್ಲೂಕಿನ ಮುದನೂರು ಗ್ರಾಮದ ರಾಮ ತೀರ್ಥದಲ್ಲಿ ಮಕ್ಕಳು ಈಜಾಡುತ್ತಿರುವುದು   

ಹುಣಸಗಿ: ತಾಲ್ಲೂಕಿನ ವಜ್ಜಲ ಗ್ರಾಮದಲ್ಲಿರುವ ಬಿಸಿ ನೀರಿನ ಬುಗ್ಗೆಗಳು ತನ್ನದೇ ಆದ ವೈಶಿಷ್ಟವನ್ನು ಹೊಂದಿವೆ.

ವಜ್ಜಲ ಗ್ರಾಮದ ಹಿರೇ ಹಳ್ಳಕ್ಕೆ ಹೊಂದಿಕೊಂಡಂತೆ ಈ ಬಿಸಿ ನೀರಿನ ಬುಗ್ಗೆ ಇದ್ದು ಬೆಳಗಿನ ಸಂದರ್ಭದಲ್ಲಿ ನೀರು ಬಿಸಿಯಾಗಿರುತ್ತವೆ. ನಂತರ ವಾತಾವರಣವೆಲ್ಲ ಬಿಸಿ ಇದ್ದಾಗ ಮಧ್ಯಾಹ್ನದ ಸಮಯಕ್ಕೆ ಈ ನೀರು ತಂಪಾಗಿ ಪರಿವರ್ತನೆಯಾಗುತ್ತವೆ. ಆದ್ದರಿಂದ ಹಿಂದಿನಿಂದಲೂ ಈ ಬುಗ್ಗೆಯನ್ನು ಅತ್ಯಂತ ಪವಿತ್ರವಾಗಿ ನೋಡಿಕೊಂಡು ಬರಲಾಗುತ್ತದೆ.

‘ಇಂದಿಗೂ ಈ ಬುಗ್ಗೆಯ ನೀರು ಗ್ರಾಮಕ್ಕೆ ಕುಡಿಯುವ ನೀರಿನ ಮೂಲವಾಗಿದೆ’ ಎಂದು ಗ್ರಾಮದ ಮೋಹನ ಕುಲಕರ್ಣಿ ಹಾಗೂ ಸಾಹೇಬಗೌಡ ಶ್ರೀಗಿರಿ ಹೇಳುತ್ತಾರೆ.

ADVERTISEMENT

ಈ ಬುಗ್ಗೆಯ ನೀರನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮತ್ತು ಹಳ್ಳದ ನೀರಿನೊಂದಿಗೆ ಸೇರಿಕೊಳ್ಳದಂತೆ ನೋಡಿಕೊಳ್ಳಲು ಕಳೆದ 70 ವರ್ಷಗಳ ಹಿಂದೆ ಬುಗ್ಗೆಯ ಸುತ್ತಲೂ ತಡೆಗೋಡೆ ಕಟ್ಟಲಾಗಿದೆ.

ಈ ಭಾಗದಲ್ಲಿ ನೀರು ಹೇರಳವಾಗಿ ಇದ್ದುದರಿಂದಲೇ ಇಲ್ಲಿ ಆದಿಮಾನವರು ವಾಸವಾಗಿದ್ದ ಕುರುಹುಗಳು ಸಿಕ್ಕಿವೆ. ಕಳೆದ ಎರಡು ಸಾವಿರ ವರ್ಷಗಳ ಹಿಂದೆಯೇ ಈ ಗ್ರಾಮದಲ್ಲಿ ಓರ್ವ ಮಹಿಳೆ ಆಡಳಿತ ನಡೆಸುತ್ತಿದ್ದಳು ಎಂದು ಇಲ್ಲಿನ ಶಾಸನದಿಂದ ತಿಳಿದು ಬರುತ್ತದೆ ಎಂದು ಗ್ರಾಮದ ಶಿಕ್ಷಕರಾದ ನಿಂಗನಗೌಡ ಬಸನಗೌಡ್ರ ಹಾಗೂ ಪರಮಾನಂದ ದ್ಯಾಮಗುಂಡ ಹೇಳುತ್ತಾರೆ.

ಈ ಬುಗ್ಗೆಯ ಅನತಿ ದೂರದಲ್ಲಿ ರಾಮಲಿಂಗೇಶ್ವರ ದೇವಸ್ಥಾನವಿದ್ದು ಇಲ್ಲಿ ನೀರಿನ ಝರಿ ಇದೆ. ಯಾವಾಗಲೂ ಈ ನೀರಿನ ದೇವಸ್ಥಾನದಲ್ಲಿನ ರಾಮಲಿಂಗೇಶ್ವರ ಲಿಂಗ ಹಾಗೂ ನಂದಿಗೆ ಸ್ಪರ್ಷಿಸುತ್ತಿರುವದು ವಿಶೇಷ. ಈ ದೇವಸ್ಥಾನ ಸುಮಾರು 10 ನೇ ಶತಮಾನದಲ್ಲಿ ನಿರ್ಮಿಸಲಾಗಿದೆ ಎಂದು ಸಂಶೋಧಕರಾದ ಪಾಟೀಲ ಬಸನಗೌಡ ಹುಣಸಗಿ ಅವರು ಹೇಳುತ್ತಾರೆ.

ಹುಣಸಗಿ ತಾಲ್ಲೂಕಿನ ಮುದನೂರು ಗ್ರಾಮದ ರಾಮ ತೀರ್ಥದಲ್ಲಿ ಮಕ್ಕಳು ಈಜಾಡುತ್ತಿರುವುದು

ತಾಲ್ಲೂಕಿನ ಬರದೇವನಾಳ ಗ್ರಾಮದಲ್ಲಿ ವೇಣುಗೋಪಾಲ, ಹನುಮಂತದೇವರು ಸೇರಿದಂತೆ ಇತರ ದೇವಸ್ಥಾನಗಳಿದ್ದು, ಇಲ್ಲಿರುವ ಪುಷ್ಕರಣಿಯು ಕೂಡಾ ಸದಾ ನೀರಿನಿಂದ ತುಂಬಿರುತ್ತದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

ನೆಚ್ಚಿನ ತಾಣ

ಚನ್ನೂರ ಗ್ರಾಮದಲ್ಲಿರುವ ಹಳ್ಳದ ಜಲಪಾತ (ದಬದಬೆ) ನೋಡುಗರನ್ನು ತನ್ನತ್ತ ಆಕರ್ಷಿಸುತ್ತದೆ. ಈ ಹಳ್ಳದ ಮತ್ತು ಬುಗ್ಗೆ ನೀರನ್ನು ಬಳಸಿಕೊಂಡು ನೂರಾರು ಎಕರೆ ಪ್ರದೇಶಕ್ಕೆ ನೀರಾವರಿ ಕಲ್ಪಿಸಲಾಗಿದೆ ಎಂದು ಗ್ರಾಮದ ಹಿರಿಯರಾದ ಶಿವನಗೌಡ ಪಾಟೀಲ ಹೇಳುತ್ತಾರೆ. ಬೇಸಿಗೆ ಸಂದರ್ಭದಲ್ಲಿ ಸಾಮಾನ್ಯವಾಗಿ ಗ್ರಾಮೀಣ ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗುವದು ಸಹಜ. ಆದರೆ ಅನಾದಿ ಕಾಲದಿಂದಲೂ ತಾಲ್ಲೂಕಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಈ ಜಲ ಮೂಲಗಳು ಸಹಕಾರಿಯಾಗಿವೆ. ತಾಲ್ಲೂಕಿನ ಮುದನೂರು.ಬಿ ಗ್ರಾಮದಲ್ಲಿರುವ ರಾಮತೀರ್ಥ ಹಾಗೂ ಲಕ್ಷ್ಣಣ ತೀರ್ಥಗಳು ಎಂತಹ ಬೇಸಿಗೆಯಲ್ಲಿಯೂ ನೀರು ಸ್ವಲ್ಪವೂ ಬತ್ತುವದಿಲ್ಲ. ಆದರೆ ಈ ನೀರು ತುಂಬಿ ಹೆಚ್ಚಾಗಿ ಹಳ್ಳಗಳಿಗೆ ಹರಿದು ಹೋಗುತ್ತವೆ. ದನಕರುಗಳ ದಾಹ ತಣಿಸುತ್ತಿವೆ. ಈ ಹಿಂದೆ ಗ್ರಾಮದ ಜನರಿಗೆ ಈ ನೀರೇ ಆಸರೆಯಾಗಿತ್ತು ಎಂದು ಗ್ರಾಮದ ಬಸನಗೌಡ ಮಾಲಿಪಾಟೀಲ ಚನ್ನಯ್ಯ ಸ್ವಾಮಿ ಹಿರೇಮಠ ಮಲ್ಲನಗೌಡ ನಗನೂರು ಹೇಳುತ್ತಾರೆ. ಮುದನೂರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳು ಈ ಪುಷ್ಕರಣಿಯಲ್ಲಿಯೇ ಇಂದಿಗೂ ಈಜು ಕಲಿಯುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.