
ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯ
ಹುಣಸಗಿ: ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಹಿಂಗಾರು ಹಂಗಾಮಿಗೆ ನೀರು ಹರಿಸುವ ಕುರಿತು ದಿನಾಂಕಕ್ಕಾಗಿ ಹಾಗೂ ಸಮಯ ಕಾರ್ಯಸೂಚಿಗಾಗಿ ರೈತರು ಕಾತುರದಿಂದ ಕಾಯುತ್ತಿದ್ದು, ಹಿಂಗಾರಿಗೆ ಕೃಷಿಗಾಗಿ ತಯಾರಿಯಲ್ಲಿದ್ದಾರೆ.
ಮುಂಗಾರು ಹಂಗಾಮಿನ ಆರಂಭದಿಂದಲೇ ನಿಗದಿಯಂತೆ ಕಾಲುವೆಗೆ ನೀರು ಸರಿಯಾಗಿ ಹರಿಸಿದ್ದರಿಂದಾಗಿ ಅಚ್ಚುಕಟ್ಟು ಪ್ರದೇಶದಲ್ಲಿ ಅವಧಿಗಿಂತ ಮುಂಚೆ ಭತ್ತ ನಾಟಿ ಮಾಡಿದ್ದಾರೆ.
‘ಉತ್ತಮ ಮಳೆಯಾಗಿದ್ದರಿಂದಾಗಿ ಹಾಗೂ ಕಾಲುವೆಗೆ ನೀರು ಹರಿಸಿದ್ದರಿಂದ ಇಲ್ಲಿಯವರೆಗೂ ಫಸಲು ಕೂಡಾ ಚನ್ನಾಗಿ ಬಂದಿದ್ದು, ಇನ್ನೇನು ಒಂದೆರಡು ವಾರದಲ್ಲಿ ಭತ್ತದ ರಾಶಿ ಆರಂಭವಾಗಲಿದೆ. ಆದರೆ ಹಿಂಗಾರಿಗೆ ನೀರು ಹರಿಸುವ ಕುರಿತು ಈಗಲೇ ಸಿದ್ಧತೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ. ಆದ್ದರಿಂದ ಈ ಐಸಿಸಿ ಸಭೆ ಅತ್ಯಂತ ಪ್ರಮುಖವಾಗಿದೆ’ ಎಂದು ರೈತರಾದ ನಿಂಗನಗೌಡ ಬಸನಗೌಡ್ರ ಹಾಗೂ ಮಲ್ಲನಗೌಡ ನಗನೂರು ಹೇಳುತ್ತಾರೆ.
ಕೆಲ ರೈತರು ಭತ್ತದ ಸಸಿ ಹಾಕಿಕೊಳ್ಳಲು ಮಡಿ ನಿರ್ಮಾಣಕ್ಕೆ ಅಣಿಯಾಗಿದ್ದಾರೆ. ಹುಣಸಗಿ ತಾಲ್ಲೂಕಿನಲ್ಲಿ 10405 ಹೆಕ್ಟೇರ್ ಹತ್ತಿ ಹಾಗೂ 9336 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಹಾಗೂ 350 ಹೆಕ್ಟೇರ್ ಸೂರ್ಯಕಾಂತಿ, 190 ಹೆಕ್ಟೇರ್ ಸಜ್ಜೆ ಸೇರಿದಂತೆ ಒಟ್ಟು 20,627 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ‘ರೈತರು ಅಪಾರ ಪ್ರಮಾಣದಲ್ಲಿ ನಷ್ಟ ಅನುಭವಿಸಿದ್ದಾರೆ. ಅದರಲ್ಲೂ ಕಳೆದ ವಾರ ಸುರಿದ ಮಳೆಯಿಂದಾಗಿ ತಾಲ್ಲೂಕಿನಲ್ಲಿ ಅಲ್ಲಲ್ಲಿ ಆರ್‌ಎನ್‌ಆರ್ ತಳಿಯ ಭತ್ತ ನೆಲ ಕಚ್ಚಿದೆ. ಭತ್ತದ ರಾಶಿ ಮಾಡುವವರೆಗೂ ನಮ್ಮ ಆತಂಕ ದೂರವಾಗುವದಿಲ್ಲ’ ಎಂದು ರೈತರಾದ ಮಾಳಪ್ಪ ದೊಡ್ಡಮನಿ ಹಾಗೂ ರವಿ ಕುಲಕರ್ಣಿ ಕಾಮನಟಗಿ ಹಾಗೂ ಇತರರು ಆತಂಕ ವ್ಯಕ್ತಪಡಿಸಿದರು.
‘ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬೆಳೆಗಳು ಹಾಳಾಗಿದ್ದರಿಂದಾಗಿ ರೈತರು ತೊಂದರೆಯಲಿದ್ದಾರೆ. ಆದ್ದರಿಂದ ಭತ್ತ ಬೆಳೆಗಾರರಿಗೆ ಅನುಕೂಲವಾಗುವಂತೆ ಕಾಲುವೆಗೆ ನೀರು ಹರಿಸುವಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾರ್ಯನಿರ್ವಹಿಸಲಿ’ ಎಂದು ರಾಜ್ಯ ರೈತ ಸಂಘದ ರಾಜ್ಯ ಪ್ರಮುಖರಾದ ಮಹಾದೇವಿ ಬೇನಾಳಮಠ, ಹಾಗೂ ಜಿಲ್ಲಾ ಘಟಕದ ಅಧ್ಯಕ್ಷ ಮಲ್ಲನಗೌಡ ಹಗರಟಗಿ ಹೇಳುತ್ತಾರೆ.
ನೀರಿನ ಮಾಹಿತಿ: ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯವು 33.31 ಟಿಎಂಸಿ ಅಡಿ ನೀರಿನ ಸಂಗ್ರಹ ಸಾಮರ್ಥದಲ್ಲಿ ಸೋಮವಾರದ ವರೆಗೆ ಶೇ 100 ರಷ್ಟು ಭರ್ತಿ ಇದೆ. ಕುಡಿಯುವ ನೀರು ಹೊರತು ಪಡಿಸಿ ಯಾವುದೇ ಒಳಹರಿವು ಹೊರಹರಿವು ಇರುವದಿಲ್ಲ. ಅದರಂತೆ ಆಲಮಟ್ಟಿ ಲಾಲಬಹುದ್ದೂರಶಾಸ್ತ್ರಿ ಜಲಾಶಯವೂ ಬಹುತೇಕ ಭರ್ತಿ ಇದೆ ಎಂದು ನಿಗಮದ ಮೂಲಗಳಿಂದ ತಿಳಿದು ಬಂದಿದೆ. ಇದರಿಂದಾಗಿ ಹಿಂಗಾರಿಗೆ ನೀರು ಬರುವ ಎಲ್ಲ ಲಕ್ಷಣಗಳಿವೆ ಎನ್ನಲಾಗುತ್ತಿದೆ.
ಬುಧವಾರ ಸಲಹಾ ಸಮಿತಿ ಸಭೆ
ಕೃಷ್ಣಾ ಮೇಲ್ದಂಡೆ ಯೋಜನೆಯ ಹಿಂಗಾರು ಹಂಗಾಮಿಗೆ ನೀರಾವರಿ ಸಲಹಾ ಸಮಿತಿ ಸಭೆ ಬುಧವಾರ ಬೆಂಗಳೂರನಲ್ಲಿ ನಡೆಯಲಿದೆ. ಬುಧವಾರ ಮಧ್ಯಾಹ್ಮ 3 ಗಂಟೆಗೆ ಅಧ್ಯಕ್ಷರಾದ ಆರ್.ಬಿ.ತಿಮ್ಮಾಪುರ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರನ ವಿಕಾಸ ಸೌಧದ ಸಭಾಂಗಣದಲ್ಲಿ ನಡೆಯಲಿದೆ ಎಂದು ಮುಖ್ಯ ಎಂಜಿನಿಯರ್ ಹಾಗೂ ನೀರಾವರಿ ಸಲಹಾ ಸಮಿತಿ ಸದಸ್ಯ ಕಾರ್ಯದರ್ಶಿಗಳಾದ ಪ್ರೇಮಸಿಂಗ್ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.