ADVERTISEMENT

ಹುಣಸಗಿ: ಕಾಣೆಯಾದ ಯುವಕ ಶವವಾಗಿ ಪತ್ತೆ

ಕೈ,ಕಾಲು ಕಟ್ಟಿ ನದಿಯಲ್ಲಿ ಬಿಸಾಕಿ ಯುವಕನ ಕೊಲೆ ಶಂಕೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 6:29 IST
Last Updated 12 ಸೆಪ್ಟೆಂಬರ್ 2025, 6:29 IST
ಭೀಮಣ್ಣ ಮಾದರ
ಭೀಮಣ್ಣ ಮಾದರ   

ಹುಣಸಗಿ: ತಾಲ್ಲೂಕಿನ ನಾರಾಯಣಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮದಲಿಂಗನಾಳ ಗ್ರಾಮದ ಭೀಮಣ್ಣ ಮಾದರ (19) ಯುವಕನನ್ನು ಕೈ ಕಾಲುಗಳು ಕಟ್ಟಿಹಾಕಿ, ಕಾಲುವೆಯಲ್ಲಿ ಬಿಸಾಕಿ ಕೊಲೆ ಮಾಡಿರುವ ಘಟನೆ ನಡೆದಿದೆ.

ಕಳೆದ ಆಗಸ್ಟ 29ರಂದು ಕಟಿಂಗ್ ಮಾಡಿಸಿಕೊಂಡು ಬರುತ್ತೇನೆ ಎಂದು ಮನೆಯಿಂದ ಹೊರಟ ಯುವಕ ಮನೆಗೆ ವಾಪಸ್ ಆಗಿರಲಿಲ್ಲ. ಇದರಿಂದಾಗಿ ಮನೆಯರು ಆತಂಕಗೊಂಡು ನಾರಾಯಣಪುರ ಪೊಲೀಸ್ ಠಾಣೆಯಲ್ಲಿ ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲು ಮಾಡಿದ್ದರು.

ಬಳಿಕ ಮಂಗಳವಾರ ಸಂಜೆ ನಾರಾಯಣಪುರದ ಬೋರುಕಾ ಕಾಲುವೆಯಲ್ಲಿ ಅಪರಿಚಿತ ಯುವಕನ ಶವ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಭೀಮಣ್ಣ ಶವ ಎಂದು ಕುಟುಂಬಸ್ಥರು ಗುರುತಿಸಿದ್ದಾರೆ.

ADVERTISEMENT

‘ದುಷ್ಕರ್ಮಿಗಳು ದುರುದ್ದೇಶದಿಂದ ಎರಡು ಕಾಲುಗಳಿಗೆ ಹಾಗೂ ಅವನ ಬಲಗೈಗೆ ಹಗ್ಗದಿಂದ ಕಟ್ಟಿ ಕೊಲೆ ಮಾಡಿ, ನಾಶಪಡಿಸುವ ಉದ್ದೇಶದಿಂದ ಕೃಷ್ಣಾ ನದಿಯ ಬೋರು ಕಾಲುವೆ ನೀರಿನಲ್ಲಿ ಎಸೆದಿದ್ದಾರೆ’ ಎಂದು ಮೃತ ಯುವಕನ ತಾಯಿ ದುರಗಮ್ಮ ಮಲ್ಲಪ್ಪ ಮಾದರ ದೂರು ನೀಡಿದ್ದಾರೆ.

ಘಟನಾ ಸ್ಥಳಕ್ಕೆ ಯಾದಗಿರಿ ಎಸ್‌ಪಿ ಪೃತ್ವಿಕ್ ಶಂಕರ್, ಹೆಚ್ಚುವರಿ ಎಸ್‌ಪಿ ಧರಣೀಶ್ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಆರೋಪಿಗಳ ಪತ್ತೆಗೆ ಪ್ರತ್ಯೇಕ ತಂಡ ರಚಿಸಲಾಗಿದ್ದು, ತನಿಖಾ ಕಾರ್ಯ ಮುಂದುವರಿದಿದೆ ಎಂದು ಹುಣಸಗಿ ಸಿಪಿಐ ರವಿಕುಮಾರ್ ಮಾಹಿತಿ ನೀಡಿದರು.

‘ಆರೋಪಿಗಳನ್ನು ಬಂಧಿಸಿ’

‘ಭೀಮಣ್ಣ ಮಾದರ ಅವರ ಹತ್ಯೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಬೇಕು. ಯುವಕನನ್ನು ಹತ್ಯೆ ಮಾಡಿರುವ ಆರೋಪಿಗಳನ್ನು ಬಂಧಿಸಿ ಕಾನೂನಿನ ಶಿಕ್ಷೆ ನೀಡಬೇಕು’ ಎಂದು ಮಾದಿಗ ಯುವಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಹಗರಟಗಿ ಒತ್ತಾಯಿಸಿದ್ದಾರೆ. ‘ಪೊಲೀಸರು ವಿಳಂಬ ಮಾಡಿದರೆ ಮುಂದಿನ ದಿನಗಳಲ್ಲಿ ದಲಿತಪರ ಸಂಘಟನೆಗಳಿಂದ ಉಗ್ರವಾದ ಹೋರಾಟ ಮಾಡಲಾಗುತ್ತದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.