
ಹುಣಸಗಿ: ಪ್ರಾಗೈತಿಹಾಸಿಕ ತಾಣಗಳನ್ನು ತನ್ನೊಳಗೆ ಇರಿಸಿಕೊಂಡಿರುವ ಹುಣಸಗಿ ತಾಲ್ಲೂಕು ತನ್ನದೆಯಾದ ಮಹತ್ವವನ್ನು ಹೊಂದಿದೆ. ಈ ಹಿಂದೆ ವಿಕ್ರಮಪುರವೆಂದು ಕರೆಯಲಾಗುತ್ತಿದ್ದ ಹುಣಸಗಿ ಪಟ್ಟಣ ಈಗ ಅಕ್ಷರ ಜಾತ್ರೆಗೆ ಅಣಿಯಾಗಿದೆ.
ಹುಣಸಗಿ ತಾಲ್ಲೂಕು ಕೇಂದ್ರವಾದ ಬಳಿಕ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮೊದಲ ಬಾರಿಗೆ ವತಿಯಿಂದ ಸಮ್ಮೇಳನವನ್ನು ಶುಕ್ರವಾರ ಆಯೋಜಿಸಲಾಗಿದೆ. ಈ ಹಿಂದೆ 2004ರಲ್ಲಿ ತಾಲ್ಲೂಕಿನ ಕೊಡೇಕಲ್ಲ ಗ್ರಾಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಸಮ್ಮೇಳನ ನಡೆದಿತ್ತು.
ಈಗಾಗಲೇ ತಾಲ್ಲೂಕಿನಾದ್ಯಂತ ಸಮ್ಮೇಳನದ ವ್ಯಾಪಕ ಪ್ರಚಾರ ಕೈಗೊಳ್ಳಲಾಗಿದ್ದು, ಸಿದ್ಧತೆಗಳು ಭರದಿಂದ ಸಾಗಿದೆ. ಸುಮಾರು 8 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಪಟ್ಟಣದಲ್ಲಿ ಮಹಾಂತಸ್ವಾಮಿ ವೃತ್ತದಿಂದ ಸಮ್ಮೇಳನ ನಡೆಯುವ ಸ್ಥಳದವರೆಗೂ ನಿರ್ಮಿಸಿರುವ 10ಕ್ಕೂ ಹೆಚ್ಚು ದ್ವಾರಗಳಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಹೆಸರಗಳನ್ನು ಹಾಗೂ ಮುಖ್ಯದ್ವಾರಕ್ಕೆ ದೇವರದಾಸಿಮಯ್ಯರ ಹೆಸರನ್ನು ಇಡಲಾಗಿದೆ.
ಊಟದ ವ್ಯವಸ್ಥೆಗಾಗಿ 20ಕ್ಕೂ ಹೆಚ್ಚು ಕೌಂಟರ್, ಆಸನದ ವ್ಯಸವ್ಥೆ, ಅಲ್ಲಲ್ಲಿ ಎಲ್‌ಇಡಿ ಪರದೆ ವ್ಯವಸ್ಥೆ, ಪುಸ್ತಕ ಹಾಗೂ ಕುರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳ ವ್ಯವಸ್ಥೆ ಮಾಡಲಾಗಿದೆ.
ನೀಲಕಂಠೇಶ್ವರ ಮಹಾ ಮಂಟಪದ ಕೊಡೇಕಲ್ಲ ಬಸವೇಶ್ವರ ಪ್ರಧಾನ ವೇದಿಕೆಯಲ್ಲಿಸಮ್ಮೇಳನ ಶುಕ್ರವಾರ ನಡೆಯಲಿದ್ದು, ಬೆಳಿಗ್ಗೆ ಮಹಿಳಾ ಡೊಳ್ಳು ಕುಣಿತ ಮತ್ತು ಇತರ ಕಲಾತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ.
ಮಹಿಳೆಯರಿಂದ ನಡೆಯುವ ಪೂರ್ಣಕುಂಭ, ಶಾಲಾ ಮಕ್ಕಳ ಮೆರವಣಿಗೆ ಹಾಗೂ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮಾಜಿ ಸಚಿವ ನರಸಿಂಹನಾಯಕ ಚಾಲನೆ ನೀಡಲಿದ್ದು, ವೇದಿಕೆಯಲ್ಲಿ ಸುರಪುರದ ಬಲವಂತ ಬಹದ್ದೂರ್ ಬಹರಿ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ಉಪಸ್ಥಿತರಿರುವರು. ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಅವರು ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಲಿದ್ದಾರೆ.
ಭುವನೇಶ್ವರಿಯ ಭಾವಚಿತ್ರಕ್ಕೆ ಸಂಸದ ಜಿ.ಕುಮಾರ ನಾಯಕ ಪುಷ್ಪಾರ್ಪಣೆ ಮಾಡಲಿದ್ದು, ಅಧ್ಯಕ್ಷತೆಯನ್ನು ಶಾಸಕ ರಾಜಾ ವೇಣುಗೋಪಾಲನಾಯಕ ವಹಿಸಲಿದ್ದಾರೆ. ಹಂಪಿ ಕನ್ನಡ ವಿವಿಯ ಅಮರೇಶ ಯಾತಗಲ್ಲ ಉದ್ಘಾಟಿಸಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಸಿದ್ದಪ್ಪ ಹೊಟ್ಟಿ ಆಶಯ ನುಡಿಗಳನ್ನಾಡಲಿದ್ದಾರೆ ಎಂದು ವೆಂಕಟಗಿರಿ ದೇಶಪಾಂಡೆ ಮಾಹಿತಿ ನೀಡಿದರು.
ವಿಶೇಷ ಆಹ್ವಾನಿತರಾಗಿ ಬೆಂಗಳೂರ ಡಿ.ಎಸ್.ಮ್ಯಾಕ್ಸ್ ನಿರ್ದೇಶಕ ಎಸ್.ಪಿ.ದಯಾನಂದ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಠ್ಠಲ ಯಾದವ, ಖ್ಯಾತ ಸಂಶೋಧಕ, ಪದ್ಮಶ್ರಿ ಕೆ.ಪದ್ದಯ್ಯ ಪಾಲ್ಗೊಳ್ಳಲಿದ್ದಾರೆ.
ಮಧ್ಯಾಹ್ನ ನಡೆಯುವ ಒಂದನೇ ಗೋಷ್ಠಿಯಲ್ಲಿ ಸಮ್ಮೇಳನಾಧ್ಯಕ್ಷ ವಿರೇಶ ಹಳ್ಳೂರ ಅವರ ಬದುಕು ಬರಹಗಳ ಕುರಿತು ನಾಗಪ್ಪ ಅಡಿಕ್ಯಾಳ ಮಾತನಾಡಲಿದ್ದಾರೆ. ಇನ್ನೂ ದಾವಣಗೆರೆ ವಿವಿಯ ಸಹಾಯಕ ಪ್ರಾಧ್ಯಾಪಕ ಭೀಮಾಶಂಕರ ಜೋಶಿ ಅವರು ಹುಣಸಗಿ ತಾಲ್ಲೂಕಿನ ಸಾಹಿತ್ಯ ಮತ್ತು ಸಂಸ್ಕೃತಿಯ ಕುರಿತು ಮಾತನಾಡಲಿದ್ದು, ಸಿದ್ದರಾಮ್ ಹೊನ್ಕಲ್ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 2ಕ್ಕೆ ನಡೆಯುವ ಎರಡನೇ ಗೋಷ್ಠಿಯಲ್ಲಿ ಕೃಷಿ ವಿಜ್ಞಾನಿ ಗುಂಡಪ್ಪ ಬರದೇವನಾಳ ಕೃಷಿ ಹಾಗೂ ನೀರಾವರಿ ಕುರಿತು ಹಾಗೂ ಅಮರಮ್ಮ ನಾವದಗಿ ಕನ್ನಡ ಸಾಹಿತ್ಯದಲ್ಲಿ ಮಹಿಳೆಯ ಸ್ಥಾನಮಾನದ ಕುರಿತು ವಿಷಯ ಮಂಡನೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಜ್ಯೋತಿ ಲತಾ ತಡಿಬಿಡಿ ಮಠ ವಹಿಸಲಿದ್ದಾರೆ.
ಪ್ರಥಮ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗುವ ನಿಟ್ಟಿನಲ್ಲಿ ಈಗಾಗಲೇ ಎಲ್ಲ ಸಿದ್ಧತೆ ಮಾಡಿಕೋಳ್ಳಲಾಗಿದೆವೆಂಕಟಗಿರಿ ದೇಶಪಾಂಡೆ ಕಸಾಪ ತಾಲ್ಲೂಕು ಅಧ್ಯಕ್ಷ
ಆರು ದಶಕಗಳಿಂದಲೂ ಹುಣಸಗಿಯಲ್ಲಿ ಸಾಹಿತ್ಯಿಕ ಚಟುವಟಿಕೆಗಳನ್ನು ನಡೆಸಿಕೊಂಡು ಬರಲಾಗಿದೆ. ಸದ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುತ್ತಿರುವುದು ಅತ್ಯಂತ ಸಂತಸ ತಂದಿದೆವಿರೇಶ ಹಳ್ಳೂರ ಸಮ್ಮೇಳನದ ಸರ್ವಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.