ADVERTISEMENT

10ನೇ ದಿನಕ್ಕೆ ಕಾಲಿಟ್ಟ ಉಪವಾಸ ಸತ್ಯಾಗ್ರಹ

ಕಂದಾಯ ಇಲಾಖೆ ವಿಳಂಬ ಧೋರಣೆಗೆ ಖಂಡನೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 3:57 IST
Last Updated 14 ಅಕ್ಟೋಬರ್ 2020, 3:57 IST
ಆಸ್ತಿ ದಾಖಲೆ ಒದಗಿಸಲು ಒತ್ತಾಯಿಸಿ ಸುರಪುರ ತಹಶೀಲ್ದಾರ್ ಕಚೇರಿ ಎದುರು ಸಜ್ಜನ್ ಕುಟುಂಬದವರು ನಡೆಸಿರುವ ಧರಣಿ ಸತ್ಯಾಗ್ರಹ ಬೆಂಬಲಿಸಿ ಮಂಗಳವಾರ ರೈತ ಸಂಘದವರು ಪ್ರತಿಭಟನೆ ನಡೆಸಿದರು
ಆಸ್ತಿ ದಾಖಲೆ ಒದಗಿಸಲು ಒತ್ತಾಯಿಸಿ ಸುರಪುರ ತಹಶೀಲ್ದಾರ್ ಕಚೇರಿ ಎದುರು ಸಜ್ಜನ್ ಕುಟುಂಬದವರು ನಡೆಸಿರುವ ಧರಣಿ ಸತ್ಯಾಗ್ರಹ ಬೆಂಬಲಿಸಿ ಮಂಗಳವಾರ ರೈತ ಸಂಘದವರು ಪ್ರತಿಭಟನೆ ನಡೆಸಿದರು   

ಸುರಪುರ: ಆಸ್ತಿ ದಾಖಲೆ ನೀಡುವಲ್ಲಿ ಕಂದಾಯ ಇಲಾಖೆ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ರಂಗಂಪೇಟೆಯ ಅಮರಣ್ಣ ಸಜ್ಜನ್ ಕುಟುಂಬದವರು ತಹಶೀಲ್ದಾರ್ ಕಚೇರಿ ಎದುರು ಆರಂಭಿಸಿರುವ ಸರದಿ ಉಪವಾಸ ಸತ್ಯಾಗ್ರಹ ಮಂಗಳವಾರ 10 ನೇ ದಿನಕ್ಕೆ ಮುಂದುವರೆದಿದೆ.

ಪ್ರತಿಭಟನೆಗೆ ಬೆಂಬಲಿಸಿ ಮಂಗಳವಾರ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಬೆಂಬಲಿಸಿ ಭಾಗವಹಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಣ್ಣ ಹಾಲಭಾವಿ ಮಾತನಾಡಿ, ‘ಸಜ್ಜನ್ ಅವರ ಆಸ್ತಿ ವಿಷಯ ಕುರಿತು ಈಗಾಗಲೆ ನ್ಯಾಯಾಲಯದಲ್ಲಿ ವ್ಯಾಜ್ಯ ನಡೆಯುತ್ತಿದೆ. ಆಸ್ತಿಗೆ ಸಂಬಂಧಿಸಿದ ದಾಖಲೆ ನೀಡುವಂತೆ ಸಜ್ಜನ್ ಕುಟುಂಬದವರು ವರ್ಷದಿಂದ ಮನವಿ ಮಾಡುತ್ತಾ ಬಂದಿದ್ದಾರೆ. ಆದರೆ ಕಂದಾಯ ಇಲಾಖೆಯ ಅಧಿಕಾರಿಗಳು ಸೂಕ್ತ ದಾಖಲೆ ನೀಡದೆ ಸತಾಯಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ರಾಜ್ಯ ಮಹಿಳಾ ಘಟಕದ ಕಾರ್ಯದರ್ಶಿ ಮಹಾದೇವಿ ಬೇವಿನಾಳಮಠ ಮಾತನಾಡಿ, ‘ಎಸಿ, ಡಿಸಿ ಮತ್ತು ಪ್ರಾದೇಶಿಕ ಆಯುಕ್ತರಿಗೂ ಈ ಕುರಿತು ಮನವಿ ಮಾಡಿದ್ದಾರೆ. ದಾಖಲೆ ಕೊಡುವಂತೆ ಅವರು ಆದೇಶಿಸಿದ್ದಾರೆ. ಆದರೆ ಕಂದಾಯ ಇಲಾಖೆಯವರು ರಾಜಕೀಯ ಒತ್ತಡಕ್ಕೆ ಮಣಿದು ದಾಖಲೆ ನೀಡಲು ವಿಳಂಬ ಮಾಡುತ್ತಿದ್ದಾರೆ. ಇದೆಲ್ಲವನ್ನು ಗಮನಿಸಿದರೆ ಮುಗ್ಧರಾದ ಸಜ್ಜನ್ ಕುಟುಂಬದ ಆಸ್ತಿ ನುಂಗಿ ಹಾಕುವ ಷಡ್ಯಂತ್ರ ನಡೆದಿದೆ’ ಎಂದು ದೂರಿದರು.

ತಾಲ್ಲೂಕು ಘಟಕದ ಅಧ್ಯಕ್ಷ ಹಣಮಂತ್ರಾಯ ಮಡಿವಾಳರ ಮಾತನಾಡಿದರು. ಸಜ್ಜನ್ ಕುಟುಂಬದ ರವಿಕುಮಾರ, ಜಗದೀಶ, ಅಶೋಕ ಮತ್ತು ರೈತ ಸಂಘದ ಮಹಿಳಾ ಘಟಕದ ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.