ADVERTISEMENT

ಯಾದಗಿರಿ ನಗರಸಭೆಯಲ್ಲಿ ಮತ್ತೆ ಅಕ್ರಮ ನೋಂದಣಿ ಸದ್ದು

ರಜಾ ದಿನದಲ್ಲಿ ನಗರಸಭೆ ಸಿಬ್ಬಂದಿ ಅಕ್ರಮ ನೋಂದಣಿ, ಪ್ರಕರಣ ದಾಖಲು

ಬಿ.ಜಿ.ಪ್ರವೀಣಕುಮಾರ
Published 3 ಜೂನ್ 2025, 7:06 IST
Last Updated 3 ಜೂನ್ 2025, 7:06 IST
ಹಣಮಂತಪ್ಪ
ಹಣಮಂತಪ್ಪ   

ಯಾದಗಿರಿ: ನಗರಸಭೆಯಲ್ಲಿ ಖೊಟ್ಟಿ ದಾಖಲೆ ಸೃಷ್ಟಿಸಿ 1,310 ಅಕ್ರಮ ಖಾತಾ ನಕಲು, ₹4 ಕೋಟಿ ಮೌಲ್ಯದ ಸರ್ಕಾರಿ ಜಮೀನು ಪರಭಾರೆ ಪ್ರಕರಣ ಕಳೆದ ಎರಡು ವರ್ಷ ಸದ್ದು ಮಾಡಿತ್ತು. ಮತ್ತೆ ಈಗ ಅಕ್ರಮ ನೋಂದಣಿ ಪ್ರಕರಣ ಮುನ್ನೆಲೆಗೆ ಬಂದಿದೆ.

ನಗರಸಭೆ ಕಾರ್ಯಾಲಯದಲ್ಲಿ ರಜೆ ಅವಧಿಯಲ್ಲಿ ಖೊಟ್ಟಿ ದಾಖಲಾತಿಗಳನ್ನು ಸೇರ್ಪಡೆ ಮಾಡಿ ಮೂಲ ದಾಖಲಾತಿಗಳನ್ನು ತೆಗೆದುಹಾಕಿ ನಾಶಪಡಿಸುವುದು, ಕಡತಗಳನ್ನು ಮರೆಮಾಡಿ ಇಲಾಖೆಗೆ ವಂಚನೆ ಮಾಡುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೌರಾಯುಕ್ತ ಉಮೇಶ ಚವಾಣ್‌ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಖೊಟ್ಟಿ ದಾಖಲೆ ಸೃಷ್ಟಿಗೆ ಪುಷ್ಟಿ ನೀಡಿದೆ.

ಯಾದಗಿರಿ (ಬಿ) ಸೀಮಾಂತರದ ಸರ್ವೆ ನಂಬರ್‌ 151/1ರಲ್ಲಿ ಒಟ್ಟು 96 ನಿವೇಶನಗಳು ಇದ್ದು, ಅದರಲ್ಲಿ ಕೆಲವು ನಿವೇಶನಗಳನ್ನು ನಗರಸಭೆ ವತಿಯಿಂದ ಮಂಜೂರು ಮಾಡಿ ನೋಂದಣಿ ಮಾಡಿಸಿದ್ದು ಇನ್ನು ಕೆಲವು ನಿವೇಶನಗಳು ಅಧಿಕೃತವಾಗಿ ನೋಂದಣಿ ಮಾಡಿಸಿಲ್ಲ.

ADVERTISEMENT

ಏನಿದು ಪ್ರಕರಣ?: ಯಾದಗಿರಿ (ಬಿ) ಸರ್ವೆ ನಂಬರ್‌ 151ರಲ್ಲಿಯ ಆಶ್ರಯ ಯೋಜನೆಯ ನಿವೇಶನಗಳಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಮಾರಾಟ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಜಂಟಿ ತನಿಖೆ ಕೈಗೊಂಡು ವರದಿ ಸಲ್ಲಿಸುವಂತೆ ತಂಡ ರಚಿಸಿ ಆದೇಶಿಸಿದಂತೆ ತಂಡವು ತನಿಖಾ ವರದಿ ಸಲ್ಲಿಸಿತ್ತು.

ಅಕ್ರಮ ನೋಂದಣಿಯಾದ ನಿವೇಶನಕ್ಕೆ ಸಂಬಂಧಿಸಿದಂತೆ 2018ರಲ್ಲಿ ₹4 ಲಕ್ಷಕ್ಕೆ ಖರೀದಿಸಿದ್ದಾರೆ ಎನ್ನುತ್ತವೆ ನಗರಸಭೆ ಮೂಲಗಳು.

ಸರ್ವೆ ನಂಬರ್‌ 151 ರಲ್ಲಿ ನಿವೇಶನ ಸಂಖ್ಯೆ 42 ರಲ್ಲಿ ಮಲ್ಲಮ್ಮ ರಾಮಣ್ಣ ಎಂಬುವವರ ಹೆಸರಿಗೆ ಅನಧಿಕೃತವಾಗಿ, ಅಕ್ರಮವಾಗಿ ನೋಂದಣಿಯಾಗಿತ್ತು. ಈ ಬಗ್ಗೆ ಜಿಲ್ಲಾಧಿಕಾರಿ ಕಾರ್ಯಾಲಯದಲ್ಲಿ ವಿಚಾರಣೆ ನಡೆದು ಈ ನಿವೇಶನವನ್ನು ಅನಧಿಕೃತವಾಗಿ ನೋಂದಣಿ ಮಾಡಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಆದೇಶವಾಗಿತ್ತು. ಈ ವಿಷಯ ತಿಳಿದ ಶಹಾಪುರ ನಗರಸಭೆಯಲ್ಲಿ ನೀರು ಸರಬರಾಜು ವಿಭಾಗದ ಮೇಲ್ವಿಚಾರಕ ಹಣಮಂತಪ್ಪ ಆಶನಾಳ ಯಾದಗಿರಿ ನಗರ ಸಭೆಯಲ್ಲಿ ಕೆಲಸ ಮಾಡುವ ಇಬ್ಬರು ಸಿಬ್ಬಂದಿಯೊಂದಿಗೆ ಆಪಾದನೆಯಿಂದ ತಪ್ಪಿಸಿಕೊಳ್ಳಲು ದಾಖಲೆ ತಿದ್ದುವ ಕೆಲಸಕ್ಕೆ ಕೈ ಹಾಕಿದ್ದರು ಎಂದು ನಗರಸಭೆ ಮೂಲಗಳು ತಿಳಿಸಿವೆ.

ಪ್ರಕರಣ ದಾಖಲು: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಠಾಣೆಯಲ್ಲಿ 95/2025 ಕಲಂ 316(4), 316 (5), 318 (3), 318 (4), 323, 340(1) ಬಿಎನ್‌ಎಸ್-2023 ರ ಕಾಯ್ದೆ ಪ್ರಕಾರ ಪ್ರಕರಣದ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.