
ಯಾದಗಿರಿ: ಜಿಲ್ಲೆಯಲ್ಲಿ ಕೃಷ್ಣೆ ಒಡಲು ಬಗೆದು ಮರಳು ದೋಚುತ್ತಿರುವವರ ಹಾವಳಿ ಮಿತಿ ಮೀರಿದೆ. ಹಗಲು– ರಾತ್ರಿ ಎನ್ನದೇ ಲಾರಿ, ಟ್ರ್ಯಾಕ್ಟರ್‌ಗಳಲ್ಲಿ ಅಕ್ರಮವಾಗಿ ಮರಳು ಸಾಗಿಸಲಾಗುತ್ತಿದ್ದು, ನದಿಯ ಒಡಲು ಬರಿದಾಗುತ್ತಿದೆ.
ಅನಧಿಕೃತ ಮರಳು ಹಾಗೂ ಇತರೆ ಉಪಖನಿಜಗಳ ಗಣಿಗಾರಿಕೆಯನ್ನು ನಿಯಂತ್ರಿಸಲು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಟಾಸ್ಕ್‌ಫೋರ್ಸ್ ಸಮಿತಿ/ ಮರಳು ಸಮಿತಿಯನ್ನು ರಚಿಸಿದ್ದರೂ ಅಕ್ರಮ ಮರಳು ದಂಧೆಗೆ ಕಡಿವಾಣ ಬೀಳುತ್ತಿಲ್ಲ ಎಂಬುದು ಸ್ಥಳೀಯರ ಬೇಸರ.
ಕೃಷ್ಣಾ ನದಿಯ ಮರಳಿಗೆ ನೆರೆಯ ವಿಜಯಪುರ, ಕಲಬುರಗಿ, ಪಕ್ಕದ ತೆಲಂಗಾಣದ ನಾರಾಯಣಪೇಟೆ ಸೇರಿದಂತೆ ಹಲವೆಡೆ ಬಾರೀ ಬೇಡಿಕೆ ಇದೆ. ಹೀಗಾಗಿ, ಸರ್ಕಾರದ ನಿಯಮ ಉಲ್ಲಂಘಿಸಿ ನಡೆಯುವ ಅಕ್ರಮ ಮರಳು ದಂಧೆ ನಿಯಂತ್ರಣಕ್ಕೆ ಬರುತ್ತಿಲ್ಲ.
ಕೃಷ್ಣಾ ನದಿ ತೀರದ ಸೂಗುರ, ಹೆಮ್ಮಡಗಿ, ಚೌಡೇಶ್ವರಿಹಾಳ, ಕರ್ನಾಳ, ಹೇಮನೂರ, ಶಳ್ಳಗಿ, ಮುಷ್ಟಳ್ಳಿ ಗ್ರಾಮಗಳ ಕೃಷ್ಣಾ ನದಿ ತೀರದಿಂದ ಲಕ್ಷಾಂತರ ಟನ್ ಮರಳು ತೆಗೆದು ಖಾಸಗಿ ಜಮೀನುಗಳಲ್ಲಿ ಸಂಗ್ರಹಿಸಿ ಇರಿಸಲಾಗಿದೆ. ಹಗಲು– ರಾತ್ರಿ ಎನ್ನದೇ ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿದ್ದು, ಈ ಬಗ್ಗೆ ಹಲವು ಬಾರಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ಇಲಾಖೆಯ ಗಮನಕ್ಕೂ ತಂದರು ಸ್ಪಂದಿಸಿಲ್ಲ ಎಂದು ಮಾಜಿ ಸಚಿವರೊಬ್ಬರು ನೇರ ಆರೋಪ ಮಾಡಿದ್ದರು.
ಈಚೆಗೆ, ಕೃಷ್ಣಾ ನದಿಯಿಂದ ಅನಧಿಕೃತವಾಗಿ 11,500 ಮೆಟ್ರಿಕ್ ಟನ್ ಮರಳು ಗಣಿಗಾರಿಕೆ ನಡೆಸಿ, ಅದನ್ನು ಜಮೀನುಗಳಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ ಆರೋಪದಡಿ ಎಂಟು ಮಂದಿ ವಿರುದ್ಧ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ಕೃಷ್ಣಾ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆಗಾಗಿ ಹಟ್ಟಿ ಚಿನ್ನದಗಣಿ ಕಂಪನಿಗೆ ಪರವಾನಗಿ ನೀಡಲಾಗಿದೆ. ಬೇರೆ ವ್ಯಕ್ತಿಯೊಬ್ಬರು ₹ 97.75 ಲಕ್ಷ ಮೌಲ್ಯದ ಮರಳನ್ನು ಅನಧಿಕೃತವಾಗಿ ತೆಗೆದು ಕಳ್ಳತನದಲ್ಲಿ ಮಾರಾಟ ಮಾಡಲು ಜಮೀನುಗಳಲ್ಲಿ ದಾಸ್ತಾನು ಮಾಡಿದ್ದು ಅಕ್ರಮ ದಂಧೆಗೆ ಹಿಡಿದ ಕೈಗನ್ನಡಿಯಾಗಿದೆ.
‘ಟಾಸ್ಕ್‌ಪೋರ್ಸ್ ಸಮಿತಿಯಲ್ಲಿ ಕಂದಾಯ, ಪೊಲೀಸ್, ಅರಣ್ಯ, ಗಣಿ ಮತ್ತು ಭೂವಿಜ್ಞಾನ, ಪ್ರಾದೇಶಿಕ ಸಾರಿಗೆ ಸೇರಿ ಇತರೆ ಇಲಾಖೆಗಳು ಒಳಗೊಂಡ ಅಧಿಕಾರಿಗಳು ಸದಸ್ಯರಾಗಿ ಇರುತ್ತಾರೆ. ಈ ಎಲ್ಲ ಇಲಾಖೆಗಳ ಅಧಿಕಾರಿಗಳು ಒಗ್ಗೂಡಿ ಅಕ್ರಮ ಮರಳು ದಂಧೆಯನ್ನು ತಡೆಯಲು ಮುಂದಾಗಬೇಕು’ ಎನ್ನುತ್ತಾರೆ ಸ್ಥಳೀಯರು.
ಕಳೆದ ವರ್ಷಕ್ಕಿಂತ 3 ಪಟ್ಟು ಅಧಿಕ ಅಕ್ರಮ ಮರಳು ಜಪ್ತಿ
2024–25ನೇ ಸಾಲಿನಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ ಮಾಡಿ 4975 ಮೆಟ್ರಿಕ್ ಟನ್ ಮರಳು ವಶಕ್ಕೆ ಪಡೆದಿತ್ತು. 2025–26ನೇ ಸಾಲಿನ 8 ತಿಂಗಳಲ್ಲಿ 19141 ಮೆಟ್ರಿಕ್ ಟನ್ ಮರಳು ಜಪ್ತಿ ಮಾಡಿದ್ದು ಈ ಹಿಂದಿನ ವರ್ಷಕ್ಕಿಂತ ಮೂರು ಪಟ್ಟು ಅಧಿಕವಾಗಿದೆ ಎಂಬುದು ಇಲಾಖೆಯ ಅಂಕಿಅಂಶಗಳಿಂದ ಗೊತ್ತಾಗಿದೆ. ಕಳೆದ ವರ್ಷ 240 ಪ್ರಕರಣಗಳನ್ನು ಪತ್ತೆಹಚ್ಚಿದ್ದು 105 ಪ್ರಕರಣಗಳನ್ನು ದಾಖಲಿಸಲಾಯಿತು. 131 ಪ್ರಕರಣಗಳಲ್ಲಿ ₹ 41.65 ಲಕ್ಷ ದಂಡ ವಿಧಿಸಿ 4975 ಮೆಟ್ರಿಕ್ ಟನ್ ಅಕ್ರಮ ಮರಳು ವಶಕ್ಕೆ ಪಡೆಯಲಾಗಿತ್ತು. ಪ್ರಸಕ್ತ ವರ್ಷದ ಎಂಟು ತಿಂಗಳಲ್ಲಿ 62 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಕಳೆದ ವರ್ಷದ ಅರ್ಧಷ್ಟೂ ಪ್ರಕರಣಗಳಲ್ಲಿ. 22 ಪ್ರಕರಣ ದಾಖಲಿಸಿ 36 ಪ್ರಕರಣಗಳಿಂದ ₹ 12.51 ಲಕ್ಷ ದಂಡ ಹಾಕಲಾಗಿದೆ. ಆದರೆ 19141 ಮೆಟ್ರಿಕ್ ಟನ್ ಅಕ್ರಮ ಮರಳು ಜಪ್ತಿ ಮಾಡಿಕೊಳ್ಳಲಾಗಿದೆ. ಈ ಅಂಕಿಅಂಶಗಳು ಅಕ್ರಮ ದಂಧೆಯ ಕರಾಳತೆಯನ್ನು ತೆರೆದಿಡುತ್ತಿವೆ. ‘ಪ್ರಕರಣದ ವ್ಯಾಪ್ತಿಗೆ ಬಾರದು ಸಾಕಷ್ಟು ಮರಳು ಸಹ ದಂಧೆಕೋರರ ಪಾಲಾಗುತ್ತಿದೆ’ ಎನ್ನುತ್ತಾರೆ ಪರಿಸರ ಪ್ರಿಯರು.
‘ಇಲಾಖೆವಾರು ಕಾರ್ಯಾಚರಣೆ’
‘12 ಇಲಾಖೆಗಳು ಒಳಗೊಂಡಿರುವ ಟಾಸ್ಕ್‌ಪೋರ್ಸ್ ಸಮಿತಿಯು ಸಭೆ ನಡೆಸಿ ವಾರದಲ್ಲಿ ಪ್ರತಿ ದಿನದಂತೆ ಕಾರ್ಯಾಚರಣೆ ಮಾಡುತ್ತಿವೆ’ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ವೀರೇಶ ಶಾಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು. ಜಿಲ್ಲಾ ಸಮಿತಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಒಳಗೊಂಡ ಸಮಿತಿ ಇದ್ದು ತಾಲ್ಲೂಕು ಸಮಿತಿಯಲ್ಲಿ ತಹಶೀಲ್ದಾರ್ ಎಸಿ ಸೇರಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಇರುತ್ತಾರೆ. ಅವರಿಗೆ ದಾಳಿ ಮಾಡಿ ಪ್ರಕರಣ ದಾಖಲಿಸಿ ದಂಡ ವಿಧಿಸುವ ಅಧಿಕಾರವಿದೆ. ಸುರಪುರ ತಾಲ್ಲೂಕಿನಲ್ಲಿ ನಿರಂತರ ದಾಳಿಗಳು ನಡೆಯುತ್ತಿವೆ’ ಎಂದರು. ‘ಅಕ್ರಮ ಮರಳು ಗಣಿಗಾರಿಕೆ ಸಂಬಂಧ ಸಾಕಷ್ಟು ದೂರುಗಳು ಬರುತ್ತಿವೆ. ಅವುಗಳನ್ನು ಆಧರಿಸಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ. ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಎಲ್ಲವೂ ಅಟೆಂಡ್ ಮಾಡಲು ಆಗುತ್ತಿಲ್ಲ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.