ADVERTISEMENT

ಊರ ತುಂಬಾ ತಿಪ್ಪೆಗುಂಡಿ: ಶೌಚಾಲಯವೂ ಇಲ್ಲ!

ಮೂಲಸೌಕರ್ಯ ವಂಚಿತ ಸುರಪುರ ತಾಲ್ಲೂಕಿನ ಕೋನ್ಹಾಳ ಗ್ರಾಮ

ಅಶೋಕ ಸಾಲವಾಡಗಿ
Published 3 ನವೆಂಬರ್ 2020, 16:20 IST
Last Updated 3 ನವೆಂಬರ್ 2020, 16:20 IST
ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆ ಹದಗೆಟ್ಟಿರುವುದು
ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆ ಹದಗೆಟ್ಟಿರುವುದು   

ಸುರಪುರ: ತಾಲ್ಲೂಕು ಕೇಂದ್ರದಿಂದ 17 ಕಿ.ಮೀ ಅಂತರದಲ್ಲಿರುವ ಕೋನ್ಹಾಳ ಗ್ರಾಮ ಮೂಲಸೌಕರ್ಯದಿಂದ ವಂಚಿತವಾಗಿದೆ.ಗ್ರಾಮದಲ್ಲಿ ಸರ್ಕಾರಿ ಭೂಮಿ ಇಲ್ಲ. ಇದ್ದ ಕೆಲ ಗುಂಟೆ ಜಾಗವನ್ನು ಅತಿಕ್ರಮಿಸಲಾಗಿದೆ.

ಇದರಿಂದ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಸ್ಥಳೀಯ ಆಡಳಿತಕ್ಕೆ ಜಾಗ ಸಿಗದಂತಾಗಿದೆ. ಮಹಿಳೆಯರು ಶೌಚಕ್ಕೆ ಹೋಗಲು ತೊಂದರೆ ಅನುಭವಿಸುವಂತಾಗಿದೆ.

ಗ್ರಾಮದ ತುಂಬೆಲ್ಲ ತಿಪ್ಪೆಗುಂಡಿಗಳು ರಾರಾಜಿಸುತ್ತಿವೆ. ಸಿ.ಸಿ. ರಸ್ತೆ ಸಮರ್ಪಕವಾಗಿಲ್ಲ. ಚರಂಡಿ ಇಲ್ಲವೇ ಇಲ್ಲ. ಇದರಿಂದ ಮೋರಿಯ ನೀರು ರಸ್ತೆಯ ಮೇಲೆಯೇ ಹರಿಯುತ್ತದೆ. ತಗ್ಗು ಗುಂಡಿಗಳಲ್ಲಿ ನೀರು ಸಂಗ್ರಹವಾಗುವುದರಿಂದ ರೋಗ ಹರಡುವ ತಾಣವಾದಂತಾಗಿದೆ.

ADVERTISEMENT

ಮಳೆಯ ನೀರು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ. ಇದರಿಂದ ರಸ್ತೆಗಳು ಹದಗೆಟ್ಟಿವೆ. ಜನರು ತಿರುಗಾಡಲು ಮತ್ತು ವಾಹನ ಸಂಚರಿಸಲು ತೊಂದರೆ ಇದೆ. ಪರಿಶಿಷ್ಟ ಜಾತಿ ವಾರ್ಡ್‌ನಲ್ಲಿ ಮಳೆ ಬಂದರೆ ಎರಡು ಮೂರು ದಿನ ಮನೆಗಳು ಜಲಾವೃತವಾಗುತ್ತವೆ.

ಕಿರು ನೀರು ಸರಬರಾಜು ಇರುವುದರಿಂದ ಬಳಕೆ ನೀರಿಗೆ ತೊಂದರೆ ಇಲ್ಲ. ನೀರು ಶುದ್ಧೀಕರಣ ಘಟಕ ಸರಿಯಾಗಿ ಕಾರ್ಯನಿರ್ವಹಿಸವುದಿಲ್ಲವಾದ್ದರಿಂದ ಸಮೀಪದ ದೇವತಕಲ್ ಇಲ್ಲವೇ ಬೇನಕನಹಳ್ಳಿಗೆ ಹೋಗಿ ಕುಡಿಯುವ ನೀರು ತರುತ್ತಾರೆ. ಜನರು ರಸ್ತೆಯ ಬದಿಗಳಲ್ಲಿ ಶೌಚಕ್ಕೆ ಹೋಗುವುದರಿಂದ ಇಡೀ ಗ್ರಾಮ ಅನೈರ್ಮಲ್ಯದ ತಾಣವಾಗಿದೆ. ಸಾಂಕ್ರಾಮಿಕ ರೋಗಗಳು ಸಾಮಾನ್ಯ.

ಊರಲ್ಲಿ ದನಕರುಗಳ ಸಂಖ್ಯೆ ಹೆಚ್ಚಿದ್ದರೂ ಪಶು ಆಸ್ಪತ್ರೆ ಇಲ್ಲ. ಜನರು ಚಿಕಿತ್ಸೆಗಾಗಿ ಕಲ್ಲದೇವನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಹೋಗಬೇಕು. ವಿದ್ಯುತ್ ಪೂರೈಕೆ ಪರವಾಗಿಲ್ಲ. 8ನೇ ತರಗತಿವರೆಗೆ ಸರ್ಕಾರಿ ಶಾಲೆ ಇದೆ. ಶಿಕ್ಷಕರ ಕೊರತೆ ಇದೆ.

ರಾಜ್ಯ ಹೆದ್ದಾರಿ ಮೇಲೆ ಗ್ರಾಮವಿದೆ. ಸಾಕಷ್ಟು ಬಸ್‍ಗಳು ಸಂಚರಿಸುತ್ತಿದ್ದರೂ ನಿಲುಗಡೆ ಇಲ್ಲ. ಕೇವಲ ಎರಡು ಬಸ್‍ಗಳು ಮಾತ್ರ ನಿಲ್ಲುತ್ತವೆ. ಹೀಗಾಗಿ ಖಾಸಗಿ ವಾಹನಗಳ ಅವಲಂಬನೆ ತಪ್ಪಿಲ್ಲ. ಗ್ರಾಮದ ಬಹುತೇಕ ಜನರು ಕೂಲಿ ಕಾರ್ಮಿಕರು. ಕೆಲಸವಿಲ್ಲದ್ದರಿಂದ ಗುಳೆ ಹೋಗುವವರ ಸಂಖ್ಯೆಯೂ ಅಧಿಕ.

ಲಿಂಗಾಯತ ಸಮುದಾಯದವರು ಅಧಿಕ ಸಂಖ್ಯೆಯಲ್ಲಿದ್ದಾರೆ. ಕುರುಬರು, ದಲಿತರು ಇತರ ಜಾತಿ ಸಮುದಾಯದವರೂ ಇದ್ದು ಸೌಹಾರ್ದತೆಯಿಂದ ವಾಸಿಸುತ್ತಾರೆ.

ಪ್ರತಿ ಯುಗಾದಿಯಂದು ವೀರಭದ್ರೇಶ್ವರ ಜಾತ್ರೆ, ಮೂರು ವರ್ಷಕ್ಕೊಮ್ಮೆ ಗ್ರಾಮ ದೇವತೆ ಜಾತ್ರೆಯನ್ನು ಒಟ್ಟಾಗಿ ಆಚರಿಸುತ್ತಾರೆ.

***

ಸಾರ್ವಜನಿಕ ಶೌಚಾಲಯ ಒದಗಿಸಬೇಕು. ಸಮುದಾಯ ಭವನ ನಿರ್ಮಿಸಬೇಕು. ಸೋಲಾರ ದೀಪ ಅಳವಡಿಸಬೇಕು. ಈಡೇರದಿದ್ದರೆ ಹೋರಾಟ ಅನಿವಾರ್ಯ

ಶೇಖಪ್ಪ ಭಂಡಾರಿ ಕೋನ್ಹಾಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಡಾ. ಅಂಬೇಡ್ಕರ್ ಪೀಪಲ್ಸ್ ಪಾರ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.