ಯಾದಗಿರಿ: ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 183 ವಾರ್ಡ್‌ಗಳಿದ್ದು, 69 ವಾರ್ಡ್‌ಗಳಲ್ಲಿ ಮಾತ್ರ ಪ್ರತಿದಿನ ಕುಡಿಯುವ ನೀರು ಸರಬರಾಜು ಮಾಡಿದರೆ, 114 ವಾರ್ಡ್‌ಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಮಾಡಲಾಗುತ್ತಿದೆ.
ಸ್ಥಳೀಯ ಸಂಸ್ಥೆಗಳಾದ ಯಾದಗಿರಿ, ಶಹಾಪುರ, ಸುರಪುರ ನಗರಸಭೆ, ಗುರುಮಠಕಲ್, ಕೆಂಭಾವಿ, ಕಕ್ಕೇರಾ ಪುರಸಭೆ, ಹುಣಸಗಿ ಪಟ್ಟಣ ಪಂಚಾಯಿತಿ, ಭೀಮರಾಯನಗುಡಿ ಅಧಿಸೂಚಿತ ಪ್ರದೇಶ ಇದೆ.
ಬೇಸಿಗೆ ತೀವ್ರತೆ ಹೆಚ್ಚಾದಂತೆ ಯಾದಗಿರಿ ನಗರಸಭೆಯ 9 ವಾರ್ಡ್, ಶಹಾಪುರ ನಗರಸಭೆ ವ್ಯಾಪ್ತಿಯ 3 ವಾರ್ಡ್, ಗುರುಮಠಕಲ್ ಪುರಸಭೆಯ 9 ವಾರ್ಡ್, ಕೆಂಭಾವಿ ಪುರಸಭೆ ವ್ಯಾಪ್ತಿಯ 8 ವಾರ್ಡ್, ಕಕ್ಕೇರಾ ಪುರಸಭೆಯ 3 ವಾರ್ಡ್, ಹುಣಸಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 13 ವಾರ್ಡ್, ಹಾಗೂ ಭೀಮರಾಯನಗುಡಿ ಅಧಿಸೂಚಿತ ಪ್ರದೇಶದ 2 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಲಿದೆ ಎಂದು ಅಧಿಕಾರಿಗಳು ಮಾಡಿರುವ ಪಟ್ಟಿಯಾಗಿದೆ.
ಜಿಲ್ಲೆಯಲ್ಲಿ ಕೃಷ್ಣ, ಭೀಮಾ ನದಿ ಹರಿಯುತ್ತಿದ್ದರೂ ಪ್ರತಿದಿನ ನೀರು ಪೂರೈಕೆಯಾಗುತ್ತಿಲ್ಲ. ಜಿಲ್ಲೆಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈಗಾಗಲೇ 100ಅಧಿಕ ವಾರ್ಡ್‌ಗಳಲ್ಲಿ ಎರಡು ದಿನಕ್ಕೊಮ್ಮೆ ನೀರು ಸರಬರಾಜು ಆಗುತ್ತಿದೆ.
ಬಿಸಿಲಿನ ತಾಪ ಹೆಚ್ಚಾಗಿ ಅಂತರ್ಜಲ ಮಟ್ಟ ಕುಸಿದರೆ 47 ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವ ಸಾಧ್ಯತೆ ಅಂದಾಜಿಸಲಾಗಿದೆ.
ಜಿಲ್ಲಾ ಕೇಂದ್ರದಲ್ಲೇ ಅಧ್ವಾನ:
ಜಿಲ್ಲಾ ಕೇಂದ್ರವಾಗಿರುವ ಯಾದಗಿರಿಯಲ್ಲಿ ಕುಡಿಯುವ ನೀರಿನ ಅಧ್ವಾನ ಇದೆ. ಹಳೆ ವಾರ್ಡ್ ಮತ್ತು ವಿಸ್ತರಿತ ವಾರ್ಡ್‌ಗಳಲ್ಲಿ ಕುಡಿಯುವ ನೀರು ಸಮಸ್ಯೆ ತೀವ್ರವಾಗಿದೆ.
ನಗರದ ಶಾಂತಿ ನಗರ, ಹನುಮಾನ ನಗರ (ಹೆಂಡಗಾರ ಅಗಸಿ), ಲಾಡಿಸ್ ಗಲ್ಲಿ, ಮುಸ್ಲಿಂಪುರ, ದುಖಾನ್ ವಾಡಿ ಸೇರಿದಂತೆ ಕೆಲ ವಾರ್ಡ್‌ಗಳಲ್ಲಿ ಇಂದಿಗೂ ಸಮಪರ್ಕ ಕುಡಿಯುವ ನೀರು ಪೂರಕೈಯಾಗುತ್ತಿಲ್ಲ.
ಯಾದಗಿರಿ ನಗರದ ಶಾಂತಿ ನಗರಕ್ಕೆ ಕೊಳವೆಬಾವಿ ನೀರೇ ಗತಿ. ಇಲ್ಲಿ ಸುಮಾರು ದಿನಗಳಿಂದ ನಳದ ನೀರು ಬರುವುದೇ ಇಲ್ಲ. ಬೋರವೇಲ್ ನೀರು ಕುಡಿಯುವುದಕ್ಕೆ ಯೋಗ್ಯವಿಲ್ಲ. ಕುಡಿಯುವ ನೀರಿಗಾಗಿ ಪರದಾಡಬೇಕು ಎಂದು ಎಂದು ನಿವಾಸಿಗಳಾದ ಶ್ರೀನಿವಾಸ, ರೇಣುಕಾ ಹೇಳುತ್ತಾರೆ.
ಹನುಮಾನ ನಗರದ ಹೆಂಡಗಾರ್ ಅಗಸಿ ಒಂದೇ ನೀರಿನ ಗುಮ್ಮಿ ಇದ್ದು, ಈ ನೀರು ಕುಡಿಯಲು ಯೋಗ್ಯವಿಲ್ಲ. ಕುಡಿಯುವ ನೀರಿಗಾಗಿ ಹೊಲಕ್ಕೆ ಹೋಗಿ ತರುವಂತಹ ಪರಿಸ್ಥಿತಿ ಇದೆ. ನಳದ ನೀರು ಇಲ್ಲ ಬರುವುದಿಲ್ಲ ಎಂದು ಇಲ್ಲಿನ ಮಹಿಳೆಯರು ಹೇಳುತ್ತಾರೆ.
‘ನಗರದಲ್ಲಿ ನೀರಿನ ಸಮಸ್ಯೆ ಇಲ್ಲ. ಆದರೆ, ನಿರ್ವಹಣೆ ಬರ ಎದುರಿಸುತ್ತಿದ್ದೇವೆ. ನಗರಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸುತ್ತಿರುವುದರಿಂದ ಹೊಸ ಪೈಪು ಅಳವಡಿಸುವುದು ಹಾಗೂ ಇನ್ನಿತರ ಕೆಲಸಗಳು ಸಾಗಿವೆ. ಅಲ್ಲದೆ ಅಲ್ಲಲ್ಲಿ ಪೈಪು ಒಡೆದು ಹೋಗಿವೆ. ದುರಸ್ತಿ ನೆಪದಲ್ಲಿ ಕಾಲಹರಣ ಮಾಡುತ್ತಾರೆ. ಇದರಿಂದ ನೀರಿನ ಸಮಸ್ಯೆ ಉಂಟಾಗಿದೆ’ ಎನ್ನುತ್ತಾರೆ ನಗರದ ನಿವಾಸಿಗಳು.
ನೀರಿನ ಸಮಸ್ಯೆ ಬಗೆಹರಿಸಲು ನಗರಸಭೆಯ ಸಿಬ್ಬಂದಿಗೆ ಮನವಿ ಮಾಡಿದರೆ ಹಾರಿಕೆ ಉತ್ತರ ನೀಡುತ್ತಾರೆ. ಕೆಲ ಬಡಾವಣೆಯಲ್ಲಿ ಸಮೃದ್ಧಿಯಾಗಿ ನೀರು ಸಿಗುತ್ತಿದ್ದರೆ ಇನ್ನುಳಿದ ಬಡಾವಣೆಯಲ್ಲಿ ನೀರಿಗಾಗಿ ಅವಲತ್ತುಕೊಳ್ಳುವಂತೆ ಆಗಿದೆ. ಈಗ ರಣಬಿಸಿಲಿನ ತಾಪ ಹೆಚ್ಚಾಗಿದೆ. ತೊಂದರೆ ಅನುಭವಿಸುತ್ತಿರುವ ಬಡಾವಣೆಗಳಿಗೆ ತಕ್ಷಣ ನೀರು ಹರಿಸುವ ವ್ಯವಸ್ಥೆ ಮಾಡಿ ಎನ್ನುತ್ತಾರೆ ನಿವಾಸಿಗಳು.
ಸುರಪುರ ನಗರಸಭೆ ವ್ಯಾಪ್ತಿಯಲ್ಲಿರುವ 31 ವಾರ್ಡ್‌ಗಳಲ್ಲಿನ ಜನರಿಗೆ ಪ್ರತಿದಿನ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಶಹಾಪುರ ತಾಲ್ಲೂಕಿನ ಭೀಮರಾಯನಗುಡಿ ಅಧಿಸೂಚಿತ ಪ್ರದೇಶ ಸಮಿತಿ ವ್ಯಾಪ್ತಿಯಲ್ಲಿರುವ 5 ವಾರ್ಡ್‌ಗಳ ಜನರಿಗೆ ಪ್ರತಿದಿನವೂ ನೀರು ಪೂರೈಸಲಾಗುತ್ತಿದೆ. ಕಕ್ಕೇರಾ ಪುರಸಭೆ ವ್ಯಾಪ್ತಿಯಲ್ಲಿರುವ 23 ವಾರ್ಡ್‌ಗಳ ಜನರಿಗೆ ಪ್ರತಿದಿನ ನೀರು ಸರಬರಾಜು ಮಾಡಲಾಗುತ್ತಿದೆ.
ಇನ್ನೂ ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿರುವ 23 ವಾರ್ಡ್‌ಗಳಲ್ಲಿ 8 ವಾರ್ಡ್‌ಗಳಿಗೆ ಪ್ರತಿದಿನ ಕುಡಿಯುವ ನೀರು ಸರಬರಾಜು ಮಾಡಿದರೆ, 15 ವಾರ್ಡ್‌ಗಳಿಗೆ ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ. ಹುಣಸಗಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿನ 16 ವಾರ್ಡ್‌ಗಳಲ್ಲಿ 2 ವಾರ್ಡ್‌ಗಳಿಗೆ ಮಾತ್ರ ಪ್ರತಿದಿನ ಕುಡಿಯವ ನೀರು ಸರಬರಾಜು ಮಾಡಲಾಗುತ್ತಿದ್ದು, ಇನ್ನುಳಿದ 14 ವಾರ್ಡ್‌ಗಳಿಗೆ ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಸಲಾಗುತ್ತಿದೆ.
ಶಹಾಪುರ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಲ್ಲಿ, ಗುರುಮಠಕಲ್ ಪುರಸಭೆ ವ್ಯಾಪ್ತಿಯ 23 ವಾರ್ಡ್‌ಗಳಲ್ಲಿ ಹಾಗೂ ಯಾದಗಿರಿ ನಗರಸಭೆ ವ್ಯಾಪ್ತಿಯ 31 ವಾರ್ಡ್‌ಗಳಲ್ಲಿ ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ.
ಸದ್ಯಕ್ಕೆ ಸ್ಥಳೀಯ ಸಂಸ್ಥೆಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಬೇಸಿಗೆ ತೀವ್ರತೆ ಹೆಚ್ಚಾದರೆ ಅಂಥ ವಾರ್ಡ್‌ಗಳ ಪಟ್ಟಿ ಮಾಡಲಾಗಿದೆಲಕ್ಷ್ಮೀಕಾಂತ ಜಿಲ್ಲಾ ನಗರಾಭಿವೃದ್ಧಿಕೋಶ ಯೋಜನಾ ನಿರ್ದೇಶಕ ಯಾದಗಿರಿ
ನಗರಸಭೆ ವ್ಯಾಪ್ತಿಯಲ್ಲಿ ಕೆಲವು ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹಂತ ಹಂತವಾಗಿ ಬಗೆ ಹರಿಸಲಾಗುವುದುಲಲಿತಾ ಅನಪುರ ನಗರಸಭೆ ಅಧ್ಯಕ್ಷೆ ಯಾದಗಿರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.