ADVERTISEMENT

ಹೊನಗೇರಾ: ಶರಣ ಪರಂಪರೆಯ ಐತಿಹಾಸಿಕ ಹಿನ್ನೆಲೆ

ಅಮಾತ್ತಯ್ಯ ತಾತ, ಶರಣ ಹೊನ್ನಯ್ಯ ತಾತ ಮಂದಿರ ಲೋಕಾರ್ಪಣೆ ಇಂದು

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2024, 4:39 IST
Last Updated 18 ಏಪ್ರಿಲ್ 2024, 4:39 IST
ಮಲ್ಲಯ್ಯ ತಾತಾ
ಮಲ್ಲಯ್ಯ ತಾತಾ   

ಹೊನಗೇರಾ(ಯರಗೋಳ): ಗ್ರಾಮದಲ್ಲಿ ಏಪ್ರಿಲ್‌ 18ರಂದು ಮೈಲಾರಲಿಂಗೇಶ್ವರ ಸಂಸ್ಥಾನದ
ಶರಣ ಅಮಾತ್ತಯ್ಯ ತಾತ, ಶರಣ ಹೊನ್ನಯ್ಯ ತಾತನವರ ನೂತನ ದೇವಸ್ಥಾನ ಲೋಕಾರ್ಪಣೆ ಸಮಾರಂಭ ನೂರಾರು ಸಂಖ್ಯೆಯ ಶರಣ-ಸಂತರ ಸಮ್ಮುಖದಲ್ಲಿ ಜರುಗಲಿದೆ‌.

ಮಠದ ದೇವರ ಗುಂಡಗುರ್ತಿ ಶಾಂತ ನಿಜಲಿಂಗ ತಾತಾ ಅವರು ಮಠದ 4ನೇ ಶತಮಾನದ ಐತಿಹಾಸಿಕ ಶರಣ ಪರಂಪರೆಯನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡರು.

‘ಸಿದ್ದಿ ಪುರುಷ ಅಮಾತ್ತಯ್ಯ ತಾತ ರಾಯಚೂರು ಜಿಲ್ಲೆ ದೇವದುರ್ಗ ತಾಲೂಕಿನ ದೇವರಗುಡ್ಡ ಗ್ರಾಮದ ಬಡ ತಿಪ್ಪಣ್ಣಪ್ಪ -ಹುಚ್ಚಮ್ಮ ದಂಪತಿಗಳ ಉದರದಲ್ಲಿ (11 ತಿಂಗಳ ಗರ್ಭದಲ್ಲಿ ಉಳಿದು) ಅವತಾರ ಪುರುಷರಾಗಿ ಜನಿಸಿದರು‌.

ADVERTISEMENT

ಅಮಾತ್ತಯ್ಯ ತಾತ ಬಾಲ್ಯದಲ್ಲಿ ಹಲವು ಲೀಲೆಗಳು ಮಾಡಿದ. ಒಂದು ದಿನ ಆಡುಗಳನ್ನು ಕಾಯುತ್ತ ಗುಡ್ಡದಲ್ಲಿ ತಪಸ್ಸಿಗೆ ಕುಳಿತುಕೊಳ್ಳುತ್ತಿದ್ದಾಗ ಮಗನ ದೇಹಕ್ಕೆ ಸರ್ಪ ಸುತ್ತಿಕೊಂಡಿತ್ತು. ದೊಡ್ಡ ಹುತ್ತ ಬೆಳೆದಿತ್ತು. ಮಗನ ಅಲೌಕಿಕ ಜೀವನ ನೋಡಿ ದಂಪತಿ ಅಚ್ಚರಿಗೊಂಡು ದೇವರಿಗೆ ಪ್ರಾರ್ಥಿಸಿದರು.

ದೀರ್ಘ ತಪಸ್ಸಿಗೆ ಕುಳಿತ ಅಮಾತ್ತಯ್ಯನಿಗೆ ಸ್ವಪ್ನದಲ್ಲಿ ಮೈಲಾರಲಿಂಗೇಶ್ವರ ಪ್ರತ್ಯಕ್ಷನಾಗಿ ಆಶೀರ್ವಾದ ನೀಡಿ ‘ಅಮಾತ್ತಯ್ಯ ನೀನು ನುಡಿದಂತೆ, ನಡೆಯುತ್ತೆ’ ಎಂದು ನಾಲಿಗೆ ಮೇಲೆ ಹೆಬ್ಬೆರಳು ಗುರುತು ಮೂಡಿಸಿ ‘ಕರಿನಾಲಿಗೆಯ ಹೊನ್ನಯ್ಯ’ ಎಂದು ಕರೆದರು.

ಆಗ ಮೈಲಾರಲಿಂಗೇಶ್ವರ ‘ಅಮಾತ್ತಯ್ಯ ನಿನ್ನ ಭಕ್ತಿಗೆ ಮೆಚ್ಚಿದ್ದೇನೆ, ಹುತ್ತದಲ್ಲಿರುವ ಒಂದು ಬಂಡೆ ಮೇಲೆ ನನ್ನ ಗುರುತು ಮೂಡಿರುತ್ತದೆ’ ಎಂದು ಪ್ರತ್ಯಕ್ಷನಾಗಿ ಮರೆಯಾದ. ಹುತ್ತದಲ್ಲಿರುವ ಗುಂಡದ ಮೇಲೆ ದೇವರ ಗುರುತು ನೋಡಿ ಅಮಾತ್ತಯ್ಯ ಆಚ್ಚರಿಗೊಂಡ. ಇದೇ 'ದೇವರ ಗುಂಡಗುರ್ತಿ ಗ್ರಾಮವಾಗಿ ಹೆಸರಾಯಿತು.

ಹಲವು ಪವಾಡಗಳನ್ನೂ ಅಮಾತ್ತಯ್ಯ ಮಾಡಿದರು. ಅಮಾತ್ತಯ್ಯ ತಾತ ತಮ್ಮ ಸಂಪೂರ್ಣ ಜೀವನ ಸರಳವಾಗಿ ಕಳೆದರು. ಹೀಗೆ ಅಮಾತ್ತಯ್ಯ ತಾತ, ಹೊನ್ನಯ್ಯ ತಾತ, ತಿಪ್ಪಣ್ಣ ತಾತ, ಮಲ್ಲಯ್ಯ ತಾತ, ಶಾಂತ ಶಿವಲಿಂಗ ತಾತ, ಚಂದ್ರಲಿಂಗ ತಾತ, ಗವಿಲಿಂಗ ತಾತ, ನಿಜಲಿಂಗಪ್ಪ ತಾತನವರವರೆಗೂ 'ದೇವರ ಗುಂಡಗುರ್ತಿ' ಯ ಶರಣ ಸಂತತಿ ಮುಂದುವರೆದಿದೆ ಎಂದರು.

ನಿಜಲಿಂಗಪ್ಪ ತಾತಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.