ADVERTISEMENT

ಯಾದಗಿರಿ: 3 ದಿನದಲ್ಲೇ ಸೋಂಕಿತರು ಹೆಚ್ಚಳ

ತಾಂಡಾ ನಿವಾಸಿಗಳಲ್ಲಿ ಹೆಚ್ಚು ಸೋಂಕು ಪತ್ತೆ, 4 ತಾಲ್ಲೂಕುಗಳಲ್ಲಿ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 26 ಮೇ 2020, 0:45 IST
Last Updated 26 ಮೇ 2020, 0:45 IST
ಗುರುಮಠಕಲ್‌ ತಾಲ್ಲೂಕಿನ ಕಂದಕೂರ ಗ್ರಾಮದಲ್ಲಿರುವ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರ
ಗುರುಮಠಕಲ್‌ ತಾಲ್ಲೂಕಿನ ಕಂದಕೂರ ಗ್ರಾಮದಲ್ಲಿರುವ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರ   

ಯಾದಗಿರಿ: ಯಾದಗಿರಿ, ಗುರುಮಠಕಲ್‌, ಶಹಾಪುರ, ವಡಗೇರಾ ತಾಲ್ಲೂಕುಗಳ ತಾಂಡಾ ನಿವಾಸಿಗಳಲ್ಲಿ 3 ದಿನಗಳಿಂದ ಕೋವಿಡ್‌–19 ಪ್ರಕರಣಗಳು ಪತ್ತೆಯಾಗಿವೆ.

ಶನಿವಾರ 72, ಭಾನುವಾರ 24, ಸೋಮವಾರ 15 ಕೋವಿಡ್‌ ಪ್ರಕರಣಗಳು ಪತ್ತೆಯಾಗಿದ್ದು, 3 ದಿನಗಳಲ್ಲೇ ಜಿಲ್ಲೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಜಿಲ್ಲೆಯಲ್ಲಿ ತೀವ್ರಗತಿಯಲ್ಲಿ ಪ್ರಕರಣಗಳು ಏರುತ್ತಿವೆ.

ತಾಂಡಾಗಳ ಜನರು ಮಹಾರಾಷ್ಟ್ರದ ಪುಣೆ, ಮುಂಬೈ, ಸೊಲ್ಲಾಪುರ ಮತ್ತಿತರ ಕಡೆಗೆ ದುಡಿಯಲು ಹೋಗಿದ್ದರು. ಲಾಕ್‌ಡೌನ್‌ ಸಡಿಲಿಕೆ ಆಗಿದ್ದರಿಂದ ಸಿಕ್ಕ ಸಿಕ್ಕ ವಾಹನಗಳಲ್ಲಿ ಜಿಲ್ಲೆಗೆ ಬಂದು ತಲುಪಿದ್ದಾರೆ. ಆದರೆ, ಇಲ್ಲಿ ಕ್ವಾರಂಟೈನ್‌ ಕೇಂದ್ರಗಳಲ್ಲಿ ಕುರಿಗಳನ್ನು ತುಂಬಿದಂತೆ ಒಂದೇ ಕೋಣೆಯಲ್ಲಿ ಹಲವಾರು ಜನರನ್ನು ಇರಿಸಿದ್ದಾರೆ. ಇದರಿಂದ ಒಬ್ಬರಿಂದೊಬ್ಬರಿಗೆ ಸೋಂಕು ಹರಡುವುದು ಹೆಚ್ಚಳವಾಗಿದೆ.

ADVERTISEMENT

ಅಂತರ ಮಾಯ:ಬಾಯಿ ಮಾತಿನಿಂದಲೇ ಹೇಳುವ ಅಧಿಕಾರಿಗಳು ವಲಸೆ ಕಾರ್ಮಿಕರಿಗೆ ಯಾವುದೇ ಸೌಲಭ್ಯ ಒದಗಿಸಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ. ಮಾಸ್ಕ್‌ ಧರಿಸಬೇಕು. ಅಂತರ ಕಾಪಾಡಿಕೊಳ್ಳುಬೇಕು ಎಂದು ಜಾಗೃತಿ ಮೂಡಿಸುವ ಅಧಿಕಾರಿಗಳು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳದಿರುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗಿದೆ.ಸರಿಯಾದ ಸಮಯಕ್ಕೆ ಊಟ, ನೀರಿನ ವ್ಯವಸ್ಥೆ ಕಲ್ಪಿಸದ್ದಕ್ಕೆ ಜಿಲ್ಲೆಯ ವಿವಿಧ ಕ್ವಾರಂಟೈನ್‌ಗಳಲ್ಲಿರುವ ವಲಸಿಗ ಕಾರ್ಮಿಕರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲೆಯಲ್ಲಿ 223 ಇನ್‍ಸ್ಟಿಟ್ಯೂಶನಲ್ ಕ್ವಾರಂಟೈನ್ ಕೇಂದ್ರಗಳಲ್ಲಿ ಮೇ 25ರವರೆಗೆ ಒಟ್ಟು 14,648 ಜನರನ್ನು ಪ್ರತ್ಯೇಕವಾಗಿರಿಸಲಾಗಿದೆ. ದಿನಂಪ್ರತಿ ವಿವಿಧ ಕಡೆಯಿಂದ ವಲಸಿಗರು ಬರುವುದು ನಿಂತಿಲ್ಲ.

126 ಪಾಸಿಟಿವ್ ವ್ಯಕ್ತಿಗಳ ಆರೋಗ್ಯ ಸ್ಥಿರ:ಕೊರೊನಾ ವೈರಸ್ ಪರೀಕ್ಷೆಗಾಗಿ ಜಿಲ್ಲೆಯಿಂದ ಕಳುಹಿಸಿದ್ದ ಮಾದರಿಗಳ ಪೈಕಿ ಮೇ 25ರವರೆಗೆ ಒಟ್ಟು 126 ವರದಿ ಪಾಸಿಟಿವ್ ಬಂದಿವೆ. ಸೋಮವಾರದ 336 ನೆಗೆಟಿವ್ ವರದಿ ಸೇರಿದಂತೆ ಒಟ್ಟು 3,163 ಮಾದರಿಗಳ ವರದಿ ನೆಗೆಟಿವ್ ಬಂದಂತಾಗಿವೆ. ಸೋಮವಾರ ಕಳುಹಿಸಲಾದ 1,495 ಹೊಸ ಮಾದರಿಗಳು ಸೇರಿದಂತೆ 4,944 ಮಾದರಿಗಳ ವರದಿ ಬರಬೇಕಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್-19 ಖಚಿತಪಟ್ಟ 126 ವ್ಯಕ್ತಿಗಳ ಆರೋಗ್ಯ ಸ್ಥಿರವಾಗಿರುತ್ತದೆ. ಹೊಸ ಜಿಲ್ಲಾಸ್ಪತ್ರೆಯ ಐಸೋಲೇಷನ್ ವಾರ್ಡ್‍ನಲ್ಲಿ 59 ಜನರನ್ನು ಪತ್ಯೇಕವಾಗಿರಿಸಲಾಗಿದೆ. ಶಹಾಪುರ ಎಸ್‍ಐಸಿನಲ್ಲಿ 37 ಜನರನ್ನು, ಸುರಪುರ ಸೂಪರ್ ಕ್ವಾರಂಟೈನ್ ಸೆಂಟರ್‌ನಲ್ಲಿ 61 ಮತ್ತು ಏಕಲವ್ಯ ಕೊರೊನಾ ಕೇರ್ ಸೆಂಟರ್‌ನಲ್ಲಿ 53 ಜನರನ್ನು ಅವಲೋಕನೆಗಾಗಿ ಇರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.