ADVERTISEMENT

‘ಲಂಚ ಮುಕ್ತ ಭಾರತವಾಗಲಿ’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2021, 3:03 IST
Last Updated 17 ಸೆಪ್ಟೆಂಬರ್ 2021, 3:03 IST
ಸಂಗಪ್ಪ ಮಂಟೆ
ಸಂಗಪ್ಪ ಮಂಟೆ   

ಯಾದಗಿರಿ: ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಲಂಚ ನೀಡುವುದು ಮತ್ತು ತೆಗೆದುಕೊಳ್ಳುವುದರಿಂದ ಭಾರತ ಮುಕ್ತವಾದಾಗ ನಮಗೆ ಸಂತಸವಾಗುತ್ತದೆ. ಆಗ ಲಂಚ ತೆಗೆದುಕೊಂಡರೆ ಅಮಾನತು ಮಾಡುತ್ತಿದ್ದರು. ಈಗ ಲಂಚ ತೆಗೆದುಕೊಳ್ಳುವರಿಂದ ಎಲ್ಲರೂ ಪಾಲುದಾರರಾಗಿದ್ದಾರೆ.

1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದರೂ ನಮ್ಮ ಭಾಗದ ಜನರು ಮಾತ್ರ ಇನ್ನೂ ಗುಲಾಮಗಿರಿಯಲ್ಲಿ ಇದ್ದರು. ಹೈದರಾಬಾದ್‌ ನಿಜಾಮರಿಂದ ದೊರಕಿದ ಮುಕ್ತಿಯೇ ನಮಗೆ ಸಿಕ್ಕ ನಿಜವಾದ ಸ್ವಾತಂತ್ರ್ಯ.

ಈ ಹಿಂದಿದ್ದ ಗುಲಾಮಿ ಪದ್ಧತಿ ಮತ್ತು ರಾಜಾಕಾರರ ದಬ್ಬಾಳಿಕೆ ನೋಡಿ ಜನರು ಭಯಪಡುತ್ತಿದ್ದರು. ಆದರೆ, ಈಗೀನ ಅಧಿಕಾರಿ ವರ್ಗದವರು ಯಾರಿಗೂ ಭಯಪಡದೇ ಲಂಚ ತೆಗೆದುಕೊಳ್ಳುವುದನ್ನು ನೋಡಿದರೆ ನನಗೆ ಬೇಸರವಾಗುತ್ತಿದೆ. ‘ಲಂಚಕೊಡುವುದು ಮತ್ತು ತೆಗೆದುಕೊಳ್ಳುವುದು ಅಪರಾಧ’ ಎಂದು ಮಹಾತ್ಮ ಗಾಂಧೀಜಿ ನಂಬಿದ್ದರು. ಆ ಸಿದ್ಧಾಂತವೇ ನಮಗೂ ಪ್ರೇರೆಣೆಯಾಗಿದೆ.

ADVERTISEMENT

ಹುಣಸಗಿ ತಾಲ್ಲೂಕಿನ ಕೋಡೆಕಲ್ಲ ನಮ್ಮ ಗ್ರಾಮ. 20 ವರ್ಷದ ಯುವಕನಾಗಿದ್ದಾಗ ಹೈದರಾಬಾದ್‌ ಕರ್ನಾಟಕ ವಿಮೋಚನಾ ಹೋರಾಟಕ್ಕೆ ಧುಮುಕಿದೆ. ಸ್ವಾಮಿ ರಾಮನಂದ ತೀರ್ಥರು ಹೋರಾಟವನ್ನು ರೂಪಿಸಿದ್ದರು. ಅವರ ಜತೆಗೆ ನಾನೂ ಸೇರಿಕೊಂಡೆ. ಹೋರಾಟದಲ್ಲಿ ಪಾಲ್ಗೊಂಡಿದ್ದರಿಂದ ರಾಜಾಕಾರರು ಕಲಬುರ್ಗಿ ಕೇಂದ್ರ ಕಾರಾಗೃಹದಲ್ಲಿ ನನ್ನನ್ನು 3 ತಿಂಗಳು ಇರಿಸಿದ್ದರು. ಈಗ ಜೀವನಕ್ಕಾಗಿ ಸರ್ಕಾರದಿಂದ ₹10 ಸಾವಿರ ಗೌರವ ಧನ ಬರುತ್ತಿದೆ. ಇದರಿಂದ ಜೀವನ ಮಾಡುತ್ತಿದ್ದೇನೆ. ಈಗ ನನಗೆ 95 ವರ್ಷ.

ಜನಪ್ರತಿನಿಧಿಗಳು ಅಧಿಕಾರ ಪಡೆಯುವಾಗ, ‘ನಾನು ಅಕ್ರಮ ಮತ್ತು ಅನ್ಯಾಯ ಮಾಡುವುದಿಲ್ಲ. ಯಾವುದೇ ತಾರತ್ಯಮ ಎಸಗುವುದಿಲ್ಲ’ ಎಂದು ದೇವರ ಹೆಸರು, ಭಗವದ್ಗೀತೆ ಮುಟ್ಟಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ, ಅವರು ನುಡಿದಂತೆ ನಡೆದುಕೊಳ್ಳುವುದಿಲ್ಲ. ಇದು ತೋರಿಕೆಗಾಗಿ ಮಾಡಿದಂತೆ ಆಗುತ್ತದೆ. ನಡೆ, ನುಡಿಯಲ್ಲಿಯೂ ಒಂದೇ ಆಗಿರಬೇಕು.

ಇದೇ ಆಗಸ್ಟ್‌ 15ಕ್ಕೆ ನಮ್ಮ ಮನೆಗೆ ಯಾದಗಿರಿ ಜಿಲ್ಲಾ ಪಂಚಾಯಿತಿ ಸಿಇಒ ಶಿಲ್ಪಾ ಶರ್ಮಾ, ಅಧಿಕಾರಿಗಳು ಬಂದು ನನ್ನನ್ನು ಸನ್ಮಾನಿಸಿದ್ದರು. ಹೋರಾಟದ ಮೆಲುಕುಗಳನ್ನು ಅವರೊಂದಿಗೆ ಹಂಚಿಕೊಂಡೆ.

ಸಂಗಪ್ಪ ಮಂಟೆ, ಹೈದರಾಬಾದ್‌ ಕರ್ನಾಟಕ ಹೋರಾಟಗಾರ
ನಿರೂಪಣೆ: ಬಿ.ಜಿ.ಪ್ರವೀಣಕುಮಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.