ವಡಗೇರಾ: ಇಂಡಿಯನ್ ಓವರ್‌ಸೀಸ್ ಕಾಂಗ್ರೆಸ್ ಸ್ಪೇನ್ ಘಟಕದ ಅಧ್ಯಕ್ಷರಾಗಿ ಬಸವರಾಜ ಸಂಕೀನ್ ಅವರನ್ನು ನೇಮಕ ಮಾಡಲಾಗಿದೆ. ಇವರು ಈ ಹುದ್ದೆಗೇರಿದ ಕಲ್ಯಾಣ ಕರ್ನಾಟಕ ಭಾಗದ ಮೊದಲ ವ್ಯಕ್ತಿಯಾಗಿದ್ದಾರೆ.
ಇಂಡಿಯನ್ಓವರ್‌ಸೀಸ್ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್ ಪಿತ್ರೋಡ್ ಅವರು ತಾಲ್ಲೂಕಿನ ಗ್ರಾಮೀಣ ಯುವಕನನ್ನು ರಾಷ್ಟ್ರಮಟ್ಟದ ಹುದ್ದೆಗೆ ನೇಮಕ ಮಾಡಿ ಆದೇಶ ಹೊರಡಿಸಿದ್ದು, ಈ ಭಾಗದ ಜನರಿಗೆ ಸಂತೋಷ ತಂದಿದೆ.
ಅನಿವಾಸಿ ಭಾರತೀಯರನ್ನು ಸೆಳೆಯುವುದು ಮತ್ತು ಕಾಂಗ್ರೆಸ್ ತತ್ವ ಸಿದ್ಧಾಂತಗಳನ್ನು ಅವರಲ್ಲಿ ಬಿತ್ತುವುದಕ್ಕಾಗಿಯೇ ಕಾಂಗ್ರೆಸ್ ಪಕ್ಷವು ಸುಮಾರು 20ರಿಂದ 25 ವಿದೇಶಗಳಲ್ಲಿ ಇಂಡಿಯನ್ಓವರ್‌ಸೀಸ್ ಕಾಂಗ್ರೆಸ್ ಕಮಿಟಿ ಮಾಡಿದೆ.
ಸ್ಪೇನ್ ದೇಶದ ಅಧ್ಯಕ್ಷರಾಗಿ ನಿಯೋಜನೆಗೊಂಡಿರುವ ಬಸವರಾಜ ಸಂಕೀನ್ ಅವರು ಮೂಲತಃ ವಡಗೇರಾ ತಾಲ್ಲೂಕಿನ ತುಮಕೂರು ಗ್ರಾಮದವರು. ಇವರು ಮಂಗಳೂರಿನಲ್ಲಿ ಏರೋನಾಟಿಕಲ್ ಎಂಜಿನಿಯರಿಂಗ್ ಮುಗಿಸಿದ ನಂತರ 2016ರಲ್ಲಿ ಸ್ಪೇನ್ ದೇಶದಲ್ಲಿ ಮಾಸ್ಟರ್ಸ್ ಇನ್ ಏರೋಸ್ಪೇಸ್ ಸೈನ್ಸ್ ಆ್ಯಂಡ್ ಟೆಕ್ನಾಲಜಿ (ಎಂಎಸ್) ಮಾಡಿದ್ದರು. ಉನ್ನತ ಶಿಕ್ಷಣ ಮುಗಿದ ನಂತರ ಅಲ್ಲಿಯೇ ಖಾಸಗಿ ಕಂಪನಿಯಲ್ಲಿ ಬಾಹ್ಯಾಕಾಶ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
‘ನನ್ನ ಮೇಲೆ ಅಪಾರವಾದ ವಿಶ್ವಾಸವಿಟ್ಟು ಸ್ಪೇನ್ ದೇಶದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಪ್ರಾಮಾಣಿಕವಾಗಿ ಕೆಲಸ ಮಾಡುವ ಮೂಲಕ ಪಕ್ಷದ ವರ್ಚಸ್ಸು ವೃದ್ಧಿಸುತ್ತೇನೆ. ನಮ್ಮ ಸಾಧನೆ ಮಾತನಾಡಬೇಕು. ನಾವು ಮಾತನಾಡಬಾರದು. ಆ ರೀತಿಯಲ್ಲಿ ಕೆಲಸ ಮಾಡುತ್ತೇನೆ’ ಎನ್ನುತ್ತಾರೆಬಸವರಾಜ ಸಂಕೀನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.