ಶಹಾಪುರ: ‘ಸರ್ಕಾರದ ಬಹು ನಿರೀಕ್ಷಿತ ಇಂದಿರಾ ಕ್ಯಾಂಟೀನ್ ನಗರದಲ್ಲಿ ಐದು ವರ್ಷದ ಹಿಂದೆ ಆರಂಭಿಸಬೇಕಾಗಿತ್ತು. ಆದರೆ ಅಂದಿನ ಬಿಜೆಪಿ ಸರ್ಕಾರ ಕ್ಯಾಂಟೀನ್ ಸ್ಥಗಿತಗೊಳಿಸಿತ್ತು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ ಜನಪರ ಹಾಗೂ ಜನ ಕಲ್ಯಾಣದ ಯೋಜನೆ ಜಾರಿ ಮಾಡುವ ಮೂಲಕ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದರು.
ನಗರದ ಹೊಸ ಬಸ್ ನಿಲ್ದಾಣದ ಹತ್ತಿರ ₹1.30 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.
‘ಹಸಿದ ಹೊಟ್ಟೆಗೆ ಊಟ ನೀಡುವ ವ್ಯವಸ್ಥೆ ಇದಾಗಿದೆ. ಗುಣಮಟ್ಟದ ಆಹಾರ ನೀಡುವುದರ ಜತೆಯಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿದೆ. ಪ್ರತಿ ದಿನ ಬೇರೆ ಬೇರೆ ಉಪಾಹಾರ ಹಾಗೂ ಊಟವನ್ನು ಸಿದ್ಧಪಡಿಸಿ ನೀಡಲಾಗುತ್ತದೆ. ಕ್ಯಾಂಟೀನ್ ಹತ್ತಿರವೇ ಸರ್ಕಾರಿ ಆಸ್ಪತ್ರೆ ಇದೆ. ಬಸ್ ನಿಲ್ದಾಣವೂ ಇದೆ. ಗ್ರಾಮೀಣ ಭಾಗದ ಬಡಜನರಿಗೆ ಈ ಕ್ಯಾಟೀನ್ ಹೆಚ್ಚು ಆಸರೆಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.
‘ಕ್ಯಾಂಟೀನ್‌ಗೆ ಆಗಮಿಸುವ ಜನರು ತಮ್ಮ ಮನೆಯಲ್ಲಿ ಕುಳಿತು ಊಟ ಮಾಡುತ್ತೇವೆ ಎಂಬ ಭಾವನೆ ಇರಬೇಕು. ಬೇಕಾಬಿಟ್ಟಿಯಾಗಿ ತಟ್ಟೆ ಎಸೆಯುವುದು, ಅನವಶ್ಯಕವಾಗಿ ಆಹಾರವನ್ನು ತಟ್ಟೆಯಲ್ಲಿ ಬಿಟ್ಟು ಪೋಲು ಮಾಡಬಾರದು. ತುತ್ತು ಅನ್ನಕ್ಕೆ ನಾವೆಲ್ಲರೂ ಸಾಕಷ್ಟು ಪರಿಶ್ರಮವಹಿಸುತ್ತಿದ್ದೇವೆ ಎಂಬುವುದು ಮರೆಯಬೇಡಿ. ಕ್ಯಾಂಟೀನ್ ಸುತ್ತಲಿನ ಪ್ರದೇಶದಲ್ಲಿ ಸದಾ ಸ್ವಚ್ಛತೆಯನ್ನು ಕಾಪಾಡಬೇಕು’ ಎಂದರು.
ಜಿಲ್ಲಾಧಿಕಾರಿ ಭೊಯರ್ ಹರ್ಷಲ್ ನಾರಾಯಣರಾವ್, ತಹಶೀಲ್ದಾರ್ ಉಮಾಕಾಂತ ಹಳ್ಳೆ, ನಗರಸಭೆ ಅಧ್ಯಕ್ಷೆ ಮಹೆರುನ್ನೀಸಾ ಬೇಗಂ, ಪೌರಾಯುಕ್ತ ಜೀವನಕುಮಾರ ಕಟ್ಟಿಮನಿ, ನಗರ ಆಶ್ರಯ ಸಮಿತಿ ಅಧ್ಯಕ್ಷ ವಸಂತಕುಮಾರ ಸುರಪುರಕರ್, ಎಂಜಿನಿಯರ್ ನಾನಾಸಾಹೇಬ್ ಮಡಿವಾಳಕರ್, ಪರಿಸರ ಎಂಜಿನಿಯರ್ ಹರೀಶ ಸಜ್ಜನಶೆಟ್ಟಿ, ವೈದ್ಯ ಡಾ.ಬಸವರಾಜ ಇಜೇರಿ ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರಾದ ಶರಣಪ್ಪ ಸಲಾದಪುರ, ನೀಲಕಂಠ ಬಡಿಗೇರ, ಬಸವರಾಜ ಹೇರುಂಡಿ, ವಿಜಯಕುಮಾರ, ಶಾಂತಪ್ಪ ಕಟ್ಟಿಮನಿ ಹಾಗೂ ನಗರಸಭೆಯ ಸದಸ್ಯರು ಭಾಗವಹಿಸಿದ್ದರು.
ಕೆಂಭಾವಿಯಲ್ಲಿ 18ರಂದು ಉದ್ಘಾಟನೆ
‘ಶಹಾಪುರ ಮತಕ್ಷೇತ್ರ ವ್ಯಾಪ್ತಿಯ ಕೆಂಭಾವಿಯಲ್ಲಿ ಜುಲೈ 18ರಂದು ಇಂದಿರಾ ಕ್ಯಾಟೀನ್ ಉದ್ಘಾಟಿಸಲಾಗುವುದು. ಈಗಾಗಲೇ ಕಟ್ಟಡ ಕಾಮಗಾರಿ ಹಾಗೂ ಆಹಾರ ಸಾಮಗ್ರಿಯ ವಸ್ತುಗಳನ್ನು ಇಡಲಾಗಿದೆ. ಜಿಲ್ಲೆಯಲ್ಲಿ ಹಂತ ಹಂತವಾಗಿ ಇನ್ನುಳಿದ ಕಡೆ ಇಂದಿರಾ ಕ್ಯಾಂಟೀನ್ ತ್ವರಿತವಾಗಿ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪುರ ತಿಳಿಸಿದ್ದಾರೆ.
ಬಡ ಜನರ ನೆರವಿಗಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ. ಗ್ರಾಮೀಣ ಪ್ರದೇಶದಿಂದ ಬರುವ ಜನರಿಗೆ ಹೆಚ್ಚು ಅನುಕೂಲವಾಗಲಿದೆ. ಸ್ಥಿತಿವಂತರು ಇಲ್ಲಿ ಊಟ ಮಾಡಬೇಡಿ–ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.