ADVERTISEMENT

ನಾರಾಯಣಪುರ ಡ್ಯಾಂಗೆ ಹೆಚ್ಚಿದ ಒಳಹರಿವು‍: ಜಿಲ್ಲೆಯಲ್ಲಿ ಪ್ರವಾಹ ಭೀತಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 9:16 IST
Last Updated 25 ಜುಲೈ 2024, 9:16 IST
   

ಯಾದಗಿರಿ: ಜಿಲ್ಲೆಯ ಹುಣಸಗಿ ತಾಲ್ಲೂಕಿನ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ಆಲಮಟ್ಟಿಯಿಂದ ಒಳಹರಿವು ಹೆಚ್ಚಿದ್ದು, ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.

ಸದ್ಯ 25 ಗೇಟು ತೆಗೆದು 2.25 ಲಕ್ಷ ಕ್ಯುಸೆಕ್ ನೀರು ಜಲಾಶಯದಿಂದ ಕೃಷ್ಣಾ ನದಿಗೆ ಹರಿಸಲಾಗುತ್ತಿದೆ.

2.50 ಲಕ್ಷಕ್ಕೂ ಹೆಚ್ಚು ಕ್ಯುಸೆಕ್ ನೀರು ಕೃಷ್ಣಾ ನದಿಗೆ ಹರಿಸಿದರೆ ಶಹಾಪುರ ತಾಲ್ಲೂಕಿನ ಕೊಳ್ಳೂರು ಎಂ ಗ್ರಾಮದ ರಾಯಚೂರು-ಕಲಬುರಗಿ ಸಂಪರ್ಕ ಸೇತುವೆ ಕಡಿತವಾಗಲಿದೆ. ಇದರಿಂದ ಸುಮಾರು 90 ಕಿಮೀ ಸುತ್ತುವರೆದು ಸಂಚರಿಸುವ ಅನಿವಾರ್ಯತೆ ಸೃಷ್ಟಿಯಾಗಲಿದೆ.

ADVERTISEMENT

ಈಗಾಗಲೇ ರೈತರು ನದಿಗೆ ಅಳವಡಿಸಿದ್ದ ಮೋಟಾರ್ ಗಳನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಿದ್ದಾರೆ. ಪ್ರವಾಹ ಸಂಭವಿಸುವ ಗ್ರಾಮಗಳಿಗೆ ಜಿಲ್ಲಾಡಳಿತ ಎಚ್ಚರಿಕೆಯನ್ನು ನೀಡಿದೆ.

ಆಲಮಟ್ಟಿ ಅಣೆಕಟ್ಟೆಯ ಹೊರಹರಿವು ಮತ್ತು ಕೃಷ್ಣಾ ನದಿಯ ಮೇಲ್ಭಾಗದ ಜಲಾನಯನ ಪ್ರದೇಶದಲ್ಲಿನ ಮಳೆಯನ್ನು ಪರಿಗಣಿಸಿ ನಾರಾಯಣಪುರ ಅಣೆಕಟ್ಟಿನ ಒಳಹರಿವು ಸುಮಾರು 3 ಲಕ್ಷ ಕ್ಯುಸೆಕ್ ಆಗುವ ಸಾಧ್ಯತೆಯಿದೆ ಎಂದು ಡ್ಯಾಂ ಮೂಲಗಳು ತಿಳಿಸಿವೆ.

ನೀರಿನ ಸುರಕ್ಷಿತ ಮಟ್ಟವನ್ನು ಕಾಯ್ದುಕೊಳ್ಳಲು, ನಾರಾಯಣಪುರ ಅಣೆಕಟ್ಟಿನಿಂದ ಕೃಷ್ಣಾ ನದಿಗೆ ಹೊರಹರಿವನ್ನು ಗುರುವಾರ ಸಂಜೆ 5 ರಿಂದ ರಾತ್ರಿ 9 ರವರೆಗಿನ ಅವಧಿಯಲ್ಲಿ 2.50 ಲಕ್ಷ ಕ್ಯುಸೆಕ್ ನಿಂದ 3 ಲಕ್ಷ ಕ್ಯುಸೆಕ್ ಗೆ ಹೆಚ್ಚಿಸಲಾಗುವುದು. ಒಳಹರಿವಿನ ಆಧಾರದ ಮೇಲೆ ಕೃಷ್ಣಾ ನದಿಗೆ ಮತ್ತಷ್ಟು ಹೊರಹರಿವನ್ನು ಹೆಚ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.