ADVERTISEMENT

ಕಕ್ಕೇರಾ: ಮೂಲಸೌಲಭ್ಯ ವಂಚಿತ ಗೋಡಿಹಾಳ (ಟಿ) ಕ್ಯಾಂಪ್

ಬಸ್ ವ್ಯವಸ್ಥೆ ಇಲ್ಲ; ಗ್ರಾಮದಲ್ಲಿ ಬಯಲು ಶೌಚಾಲಯವೇ ಗತಿ

ಮಹಾಂತೇಶ ಸಿ.ಹೊಗರಿ
Published 29 ಸೆಪ್ಟೆಂಬರ್ 2020, 6:46 IST
Last Updated 29 ಸೆಪ್ಟೆಂಬರ್ 2020, 6:46 IST
ಕಕ್ಕೇರಾ ಪಟ್ಟಣದ ಸಮೀಪದ ಗೋಡಿಹಾಳ (ಟಿ) ಕ್ಯಾಂಪ್‌ನಲ್ಲಿ ಕುಡಿಯುವ ನೀರಿಗಾಗಿ ಕಾಯುವ ದುಸ್ಥಿತಿ
ಕಕ್ಕೇರಾ ಪಟ್ಟಣದ ಸಮೀಪದ ಗೋಡಿಹಾಳ (ಟಿ) ಕ್ಯಾಂಪ್‌ನಲ್ಲಿ ಕುಡಿಯುವ ನೀರಿಗಾಗಿ ಕಾಯುವ ದುಸ್ಥಿತಿ   

ಕಕ್ಕೇರಾ: ಪಟ್ಟಣ ಸಮೀಪದ ಗೋಡಿಹಾಳ (ಟಿ) ಕ್ಯಾಂಪ್ ಗ್ರಾಮವು ಹಲವು ಸಮಸ್ಯೆಗಳಿಂದ ಕೂಡಿದೆ. ಸಾರ್ವಜನಿಕರು ಸುಮಾರು 1 ವರ್ಷದಿಂದ ಬಸ್ ಸಂಚಾರವಿಲ್ಲದೆ ಸಾರ್ವಜನಿಕರು ಖಾಸಗಿ ವಾಹನಗಳಲ್ಲೇ ಸಂಚರಿಸುತ್ತಿದ್ದಾರೆ. ಈ ಗ್ರಾಮಕ್ಕೆ ಸಮರ್ಪಕ ಸಾರಿಗೆ ಸೌಲಭ್ಯವಿಲ್ಲ. ಹೀಗಾಗಿ ಖಾಸಗಿ ವಾಹನಗಳಲ್ಲಿಯೇ ಸಂಚರಿಸಬೇಕಿದೆ ಎನ್ನುತ್ತಾರೆ ದ್ಯಾವಪ್ಪ ಬಡಿಗೇರಿ.

ತ್ಯಾಜ್ಯ ವಸ್ತುಗಳನ್ನು ರಸ್ತೆ ಬದಿಯಲ್ಲಿಯೇ ತುಂಬಿ ಗಬ್ಬೆದ್ದು ನಾರುತ್ತಿದೆ. ಗ್ರಾಮಕ್ಕೆ ಏಕೈಕ ಕುಡಿಯುವ ನೀರು ಕೊಳವೆಬಾವಿ (ಬೋರವೆಲ್) ಇದ್ದು, ಬೇಸಿಗೆಯಲ್ಲಿ ನೀರಿಲ್ಲದೆ ಬಹಳ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಗ್ರಾಮಕ್ಕೆ ಆಸರೆಯಾಗಿರುವ ಬೋರವೆಲ್ ಹಾಳಾದರೆ ಅರ್ಧ ಕಿ.ಮೀ. ದೂರದ ಕರಿಯಪ್ಪತಾತನ ದೇವಸ್ಥಾನದ ಹತ್ತಿರ ನೀರನ್ನು ತೆಗೆದುಕೊಂಡು ಬರಬೇಕೆಂದು ವೆಂಕಟಪ್ಪ ದೊರೆ ಹೇಳುತ್ತಾರೆ.

ADVERTISEMENT

ಗೋಡಿಹಾಳ (ಟಿ) ಕ್ಯಾಂಪ್‌ನಲ್ಲಿ ಅಂಗನವಾಡಿ ಕೇಂದ್ರವಿಲ್ಲ. ಸುಮಾರು 15 ರಿಂದ 18 ಮಕ್ಕಳು ಇದ್ದು, ಅವರು ಅರ್ಧ ಕಿ.ಮೀ. ದೂರದ ಗೋಡಿಹಾಳ ಗ್ರಾಮಕ್ಕೆ ಹೋಗಬೇಕಾಗುತ್ತದೆ. ಈ ಹಿಂದೆ ಶಾಸಕರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಹೇಳುತ್ತಾರೆ.

40ಕ್ಕೂ ಹೆಚ್ಚು ಕುಟುಂಬ ಹೊಂದಿದ್ದು, 200ಕ್ಕೂ ಹೆಚ್ಚು ಜನಸಂಖ್ಯೆಯುಳ್ಳ ಕ್ಯಾಂಪ್‌ ಇದಾಗಿದೆ. ಗ್ರಾಮಕ್ಕೆ ಚರಂಡಿ ಸೌಕರ್ಯವಿಲ್ಲ. ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತದೆ.

ಶೌಚಾಲಯ ಸಮಸ್ಯೆ: ಸರ್ಕಾರದಿಂದ ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಮತ್ತು ಗ್ರಾಮ ಪಂಚಾಯಿತಿಯಿಂದ ಸಾಕಷ್ಟು ಅನುದಾನ ಇದ್ದರೂ ಗ್ರಾಮಕ್ಕೆ ಸಾರ್ವಜನಿಕ ಶೌಚಾಲಯವಿಲ್ಲದೆ ಬಹುತೇಕ ಜನ ಬಯಲು ಶೌಚಕ್ಕೆ ಹೋಗಬೇಕಾಗಿದೆ. ಮಳೆಗಾಲದಲ್ಲಿ ವಿಪರೀತ ಸಮಸ್ಯೆ ಇದೆ. ಸಾರ್ವಜನಿಕ ಶೌಚಾಲಯ ಹಾಗೂ ಮೂಲಭೂತ ಸೌಲಭ್ಯಗಳನ್ನು ಕೂಡಲೇ ಒದಗಿಸಬೇಕೆಂದು ಗಂಗಣ್ಣ ಬಡಿಗೇರ ಮನವಿ ಮಾಡಿದ್ದಾರೆ.

ಈ ಎಲ್ಲಾ ಅವ್ಯವಸ್ಥೆಯ ಆಗರವಾದ ಗೋಡಿಹಾಳ (ಟಿ) ಕ್ಯಾಂಪ್ ಹಲವು ಸೌಲಭ್ಯಗಳಿಂದ ವಂಚಿತಗೊಂಡ ಗ್ರಾಮಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕೆಂದು ಸ್ಥಳೀಯರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.