ADVERTISEMENT

ರಸಗೊಬ್ಬರ ದುಷ್ಪರಿಣಾಮದ ವರದಿಗೆ ಒತ್ತಾಯ

ಕೃಷಿ ಸಚಿವ ಬಿ.ಸಿ.ಪಾಟೀಲಗೆ ಮನವಿ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 16:27 IST
Last Updated 3 ಸೆಪ್ಟೆಂಬರ್ 2020, 16:27 IST
ಶಹಾಪುರ ತಾಲ್ಲೂಕಿನ ಹತ್ತಿಗೂಡೂರ ಗ್ರಾಮದ ಬಳಿ ಬೆಳೆದ ಭತ್ತ
ಶಹಾಪುರ ತಾಲ್ಲೂಕಿನ ಹತ್ತಿಗೂಡೂರ ಗ್ರಾಮದ ಬಳಿ ಬೆಳೆದ ಭತ್ತ   

ಶಹಾಪುರ: ‘ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಅತಿಯಾದ ರಸಗೊಬ್ಬರ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮದ ಬಗ್ಗೆ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಅಧೀನದಲ್ಲಿ ಬರುವ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯದ ತಜ್ಞರ ತಂಡ ರಚಿಸಿ ಅದರ ಸಾಧಕ ಬಾಧಕದ ಬಗ್ಗೆ ಸರ್ಕಾರಕ್ಕೆ ವರದಿ ನೀಡಬೇಕು. ಅಲ್ಲದೆ ಮುಂದೆ ರೈತರು ತೆಗೆದುಕೊಳ್ಳಬೇಕಾದ ಕ್ರಮದ ಬಗ್ಗೆ ಮಾಹಿತಿಯನ್ನು ಒದಗಿಸುವಂತೆ’ ಬಿಜೆಪಿಯ ರೈತ ಮೋರ್ಚಾದ ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ ಯಲ್ಲಯ್ಯ ನಾಯಕ ವನದುರ್ಗ ಕೃಷಿ ಸಚಿವ ಬಿ.ಸಿ.ಪಾಟೀಲ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ‘ಅತಿಯಾದ ರಸಗೊಬ್ಬರ ಬಳಕೆಯ ಬಗ್ಗೆ ಬೇಸಾಯ ಶಾಸ್ತ್ರದ ತಜ್ಞ, ಮಣ್ಣಿನ ಫಲವತ್ತತೆ ಹಾಳಾಗುತ್ತಿರುವ ಬಗ್ಗೆ ಮಣ್ಣು ಪರೀಕ್ಷೆ ತಜ್ಞ, ಕೀಟನಾಶ ಶಾಸ್ತ್ರ ತಜ್ಞ, ಆರ್ಥಿಕ ನಷ್ಟದ ಬಗ್ಗೆ ಆರ್ಥಿಕ ತಜ್ಞ, ನೀರಿನ ಬಳಕೆ ಮಾಡುತ್ತಿರುವ ಬಗ್ಗೆ ಕೃಷಿ ಎಂಜಿನಿಯರ್ ತಜ್ಞರ ಒಳಗೊಂಡ ಸಮಗ್ರವಾದ ತಂಡವನ್ನು ರಚಿಸಿ ಮಾಹಿತಿ ಕಲೆ ಹಾಕುವುದು ತುರ್ತು ಕೆಲಸವಾಗಬೇಕು’ ಎಂದು ಅವರು ತಿಳಿಸಿದರು.

ಈಗಾಗಲೇ ತುಂಗಭದ್ರಾ, ಪಂಜಾಬ್, ಕೇರಳ ಮುಂತಾದ ಕಡೆ ತಜ್ಞರ ತಂಡವನ್ನು ರಚಿಸಿ ವರದಿ ಹಾಗೂ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಅದರಂತೆ ಇಲ್ಲಿಯೂ ತಂಡವನ್ನು ರಚಿಸಿ ವರದಿ ನೀಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.