ADVERTISEMENT

ಯಾದಗಿರಿ | ವಿಮಾ ಯೋಜನೆಗಳ ಜಾಗೃತಿ ಮೂಡಿಸಿ: ಲವೀಶ್ ಒರಡಿಯಾ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2025, 7:01 IST
Last Updated 28 ನವೆಂಬರ್ 2025, 7:01 IST
ಯಾದಗಿರಿಯಲ್ಲಿ ಈಚೆಗೆ ವಿಮಾ ಯೋಜನೆಯಡಿ ನೋಂದಾಯಿತ ಕುಟುಂಬ ಸದಸ್ಯರೊಬ್ಬರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಅವರು ವಿಮೆಯ ಚೆಕ್ ವಿತರಣೆ ಮಾಡಿದರು 
ಯಾದಗಿರಿಯಲ್ಲಿ ಈಚೆಗೆ ವಿಮಾ ಯೋಜನೆಯಡಿ ನೋಂದಾಯಿತ ಕುಟುಂಬ ಸದಸ್ಯರೊಬ್ಬರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಅವರು ವಿಮೆಯ ಚೆಕ್ ವಿತರಣೆ ಮಾಡಿದರು    

ಯಾದಗಿರಿ: ‘ಕುಟುಂಬಗಳ ಆರ್ಥಿಕ ಸುರಕ್ಷತೆಗೆ ಪೂರಕವಾದ ಜನ ಸುರಕ್ಷಾ ಯೋಜನೆ, ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಭೀಮಾ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ವಿಮಾ ಯೋಜನೆಗಳ ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ ಅವರು ಹೇಳಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಈಚೆಗೆ ನಡೆದ ಡಿಸಿಸಿ, ಡಿಎಲ್‌ಆರ್‌ಸಿ ಸಭೆಯಲ್ಲಿ ಮಾತನಾಡಿ, ಎಸ್‌ಬಿಐ, ಲೀಡ್ ಬ್ಯಾಂಕ್, ಸರ್ಕಾರ ಮಹತ್ವಾಕಾಂಕ್ಷಿ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಿದರು.

ಗ್ರಾಮೀಣ ಪ್ರದೇಶದ ಪ್ರತಿ ಕುಟುಂಬದ ಭವಿಷ್ಯದ ಆರ್ಥಿಕ ಸುರಕ್ಷತೆ ಹಾಗೂ ಭದ್ರತೆಗೆ ಪಿಎಂ ಸುರಕ್ಷಾ ಭೀಮಾ, ಜೀವನ್ ಜ್ಯೋತಿ ಭೀಮಾ ವಿಮಾ ಯೋಜನೆ ಜಾರಿಗೊಳಿಸಲಾಗಿದೆ. 18 ವರ್ಷ ಮೇಲ್ಪಟ್ಟವರು ಈ ವಿಮೆಯಡಿ ಹೆಸರು ನೋಂದಣಿಗೆ ಅರ್ಹರಾಗಿದ್ದಾರೆ. ಪ್ರತಿಯೊಬ್ಬರೂ ಯೋಜನೆಗಳ  ಲಾಭ ಪಡೆಯುವಂತೆ ಆಗಲು ಜಾಗೃತಿ ಮೂಡಿಸಿ, ಹೆಸರು ನೋಂದಣಿಗೆ ಪ್ರೋತ್ಸಾಹ ನೀಡಬೇಕು’ ಎಂದು ಸೂಚಿಸಿದರು.

ADVERTISEMENT

‘ಪಿಎಂ ಸುರಕ್ಷಾ ಭೀಮಾ ವಿಮಾ ಯೋಜನೆಗೆ ವಾರ್ಷಿಕ ₹ 20 ಹಾಗೂ ಪಿಎಂ ಜೀವನ್ ಜ್ಯೋತಿ ಭೀಮಾ ವಿಮಾ ಯೋಜನೆಗೆ ವಾರ್ಷಿಕ ₹ 436 ಪಾವತಿಸಬೇಕು. ಈ ಎರಡು ವಿಮಾ ಯೋಜನೆಯಡಿ ಹೆಸರು ನೋಂದಾಯಿಸಿದರೆ ಪ್ರತಿ ವರ್ಷ ₹ 456 ಪಾವತಿಸಿದರೆ, ವಿಮೆ ಮಾಡಿಕೊಂಡ ವ್ಯಕ್ತಿ ಅಪಘಾತದಲ್ಲಿ ಮೃತಪಟ್ಟರೆ ಎರಡು ವಿಮೆ ಸೇರಿ ₹ 4 ಲಕ್ಷ ಕುಟುಂಬಕ್ಕೆ ಸೇರುತ್ತದೆ’ ಎಂದರು.

‘ಅಪಘಾತದಲ್ಲಿ ಅಂಗವೈಕಲ್ಯ ಉಂಟಾದರೆ ₹ 1 ಲಕ್ಷ ಪರಿಹಾರ ಸಿಗುತ್ತದೆ. ಸಹಜವಾಗಿ ಮೃತರಾದರೆ ಕುಟುಂಬಕ್ಕೆ ₹ 2 ಲಕ್ಷ ಪರಿಹಾರ ರೂಪದಲ್ಲಿ ಆರ್ಥಿಕ ಸಹಾಯ ಸಿಗುತ್ತದೆ. ಇವುಗಳ ಬಗ್ಗೆ ಜಾಗೃತಿ ಮೂಡಿಸಿ’ ಎಂದು ಹೇಳಿದರು.

ಪಿಎಂಎಸ್‌ಬಿವೈ, ಪಿಎಂಜೆಜೆಬಿವೈ ಯೋಜನೆಯಡಿ ನೋಂದಣಿಯಾಗಿ ಮೃತರಾದ ಕುಟುಂಬದ ಸದಸ್ಯರಿಗೆ ಪರಿಹಾರ ಚೆಕ್ ವಿತರಿಸಲಾಯಿತು. ಮುದ್ರಾ, ಉದ್ಯೋಗಿನಿ, ಟ್ಯಾಕ್ಸಿ ಫಲಾನುಭವಿಗಳಿಗೆ ಆರ್ಥಿಕವಾಗಿ ಸಬಲರಾಗಲು ₹ 2 ಲಕ್ಷ ಚೆಕ್ ವಿತರಣೆ ಮಾಡಲಾಯಿತು. ಹೆಚ್ಚು ಪ್ರಚಾರ ಮಾಡಿ ವಿಮೆಯಡಿ ಹೆಸರು ನೋಂದಣಿಗೆ ಅರ್ಜಿ ಸ್ವೀಕರಿಸುವಲ್ಲಿ ಸಹಕರಿಸಿದ ಅಧಿಕಾರಿಗಳಿಗೆ ಪ್ರಶಂಸನಾ ಪತ್ರ ನೀಡಿ, ಗೌರವಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ ಚಟ್ನಳಿ, ಯೋಜನಾ ನಿರ್ದೇಶಕ ದೇವರಮನಿ, ಹರಿಬನ್ಸ್ ನಾರಾಯಣ ಸಿಎಂ ಕ್ರೆಡಿಟ್ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುನಿಲ್ ಬತ್ತಿನಿ, ನಬಾರ್ಡ್‌ನ ಯಮುನಾ, ಬೆಂಗಳೂರು ಭಾರತೀಯ ರಿಸರ್ವ್ ಬ್ಯಾಂಕ್‌ನ ನೀಶಾ ಠಾಕೂರ್, ಕರ್ನಾಟಕ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಜಿ.ಎಸ್ ಕೂಡ್ಲಿಗಿ, ಲೀಡ್ ಬ್ಯಾಂಕ್ ಸಿಬ್ಬಂದಿ ಕುಮಾರ ಸ್ವಾಮಿ, ಅಮೀರ್ ಪಟೇಲ್ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.