ADVERTISEMENT

ಯಾದಗಿರಿ | ಒಳಮೀಸಲಾತಿ ಸಮೀಕ್ಷೆ: ಶೇ 85 ರಷ್ಟು ಪ್ರಗತಿ

ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಯ ಜನಸಂಖ್ಯೆ 3.28 ಲಕ್ಷ ಇದ್ದು, 2.79 ಲಕ್ಷ ಸಮೀಕ್ಷೆ

​ಪ್ರಜಾವಾಣಿ ವಾರ್ತೆ
Published 27 ಮೇ 2025, 15:42 IST
Last Updated 27 ಮೇ 2025, 15:42 IST
ಡಾ.ಸುಶೀಲಾ ಬಿ.,
ಡಾ.ಸುಶೀಲಾ ಬಿ.,   

ಯಾದಗಿರಿ: ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆಯಲ್ಲಿ 2,79,230 ಪರಿಶಿಷ್ಟ ಜಾತಿ ಜನರ ಸಮೀಕ್ಷೆ ನಡೆಸುವ ಮೂಲಕ ಶೇ 85 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಪರಿಶಿಷ್ಟ ಜಾತಿ ಒಳಮೀಸಲಾತಿ ಸಮೀಕ್ಷೆ ಕುರಿತು ಮಾಹಿತಿ ನೀಡಿದ ಅವರು, ಜಿಲ್ಲೆಯಲ್ಲಿ 2025 ರಲ್ಲಿ ಅಂದಾಜು 3,28,428 ಪರಿಶಿಷ್ಟ ಜಾತಿಯ ಜನಸಂಖ್ಯೆಯಿದ್ದು, ಈ ಪೈಕಿ ಈವರೆಗೆ 2,79,230 ಜನಸಂಖ್ಯೆಯ ಸಮೀಕ್ಷೆ ನಡೆಸುವ ಮೂಲಕ ಶೇ 85ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ತಿಳಿಸಿದರು.

ನ್ಯಾಯಮೂರ್ತಿ ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕಸದಸ್ಯ ಆಯೋಗ ರಚಿಸಿದ ಸರ್ಕಾರ, ಪರಿಶಿಷ್ಟ ಜಾತಿ ಕುಟುಂಬಗಳ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ (ಆರ್ಥಿಕ) ಸ್ಥಿತಿ ಗತಿಗಳ ಬಗ್ಗೆ ವಿಶ್ಲೇಷಣೆ ಮಾಡಿ ಒಳಮೀಸಲಾತಿ ವರ್ಗೀಕರಣ ಮಾಡಲು ಮೇ 5ರಿಂದ 17 ವರೆಗೆ ಮನೆ ಮನೆ ಸಮೀಕ್ಷೆಗೆ ಸೂಚಿಸಿ, ನಂತರ ಆಯೋಗದ ನಿರ್ದೇಶನದಂತೆ ಸಮೀಕ್ಷೆ ಅವಧಿಯನ್ನು ಮೇ 29ರವರೆಗೆ ವಿಸ್ತರಿಸಲಾಗಿದೆ. ಅದರಂತೆ ಮೇ 19ರಿಂದ ಜೂನ್‌ 30 ರವರೆಗೆ ವಿಶೇಷ ಶಿಬಿರ ಏರ್ಪಡಿಸಲಾಗಿದೆ. ಆನ್‌ಲೈನ್ ಮೂಲಕ ಸ್ವಯಂ ಘೋಷಣೆ https://schedulecastesurvey.karnataka.gov.in/selfdeclaration/ ಪೋರ್ಟಲ್ ಮುಖಾಂತರ ಸಲ್ಲಿಸಬೇಕು. ಪಡಿತರ ಚೀಟಿ, ಆಧಾರ್ ಕಾರ್ಡ್, ಆಧಾರ್ ನೋಂದಣಿ ಸಂಖ್ಯೆ ಮುಖಾಂತರ, ಸಮೀಕ್ಷೆ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ಈ ಸಮೀಕ್ಷೆಯಲ್ಲಿ ಜಿಲ್ಲೆಯ ಪ್ರತಿಯೊಂದು ಮತಗಟ್ಟೆಯನ್ನು ಎಣಿಕೆ ಬ್ಲಾಕ್ ಎಂದು ಪರಿಗಣಿಸಲಾಗಿದೆ. ಇಡಿಸಿಎಸ್‌ ನಿರ್ದೇಶನಾಲಯದಿಂದ ಅಭಿವೃದ್ಧಿ ಪಡಿಸಲಾದ ಮೊಬೈಲ್ ಆ್ಯಪ್ ಮೂಲಕ ಸಮೀಕ್ಷೆ ಕೈಗೊಳ್ಳಲಾಗುತ್ತಿದ್ದು, ಜಿಲ್ಲೆಯ ಪ್ರತಿ ಮತಕ್ಷೇತ್ರಕ್ಕೆ ಉಪವಿಭಾಗಾಧಿಕಾರಿ ದರ್ಜೆಯ ನೋಡಲ್ ಅಧಿಕಾರಿ ನೇಮಿಸಲಾಗಿದೆ ಎಂದು ತಿಳಿಸಿದರು.

ADVERTISEMENT

ಯಾದಗಿರಿ ಮತಕ್ಷೇತ್ರಕ್ಕೆ ಯಾದಗಿರಿ ಉಪವಿಭಾಗಾಧಿಕಾರಿ, ಶಹಾಪುರ ಮತಕ್ಷೇತ್ರಕ್ಕೆ ಯಾದಗಿರಿ ಯೋಜನಾ ನಿರ್ದೇಶಕರು, ನಗರಾಭಿವೃದ್ಧಿ ಕೋಶ, ಸುರಪುರ ಕ್ಷೇತ್ರಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಹಾಗೂ ಗುರುಮಠಕಲ್ ಮತಕ್ಷೇತ್ರಕ್ಕೆ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯ 1,134 ಗಣತಿದಾರರು, ಮತಗಟ್ಟೆವಾರು ಸಮೀಕ್ಷೆ ನಡೆಸುವರು. ಪ್ರತಿ 1 ರಿಂದ 12 ಮತಗಟ್ಟೆಗಳಿಗೆ ಒಬ್ಬರನ್ನು ಮೇಲ್ವಿಚಾರಕರನ್ನಾಗಿ ನೇಮಿಸಲಾಗಿದೆ. ಪ್ರತಿ ಮತಗಟ್ಟೆವಾರು ಪರಿಶಿಷ್ಟ ಜಾತಿ ಕುಟುಂಬಗಳು ಹೆಚ್ಚಿರುವ ಗ್ರಾಮ, ನಗರಗಳಲ್ಲಿ 350 ಹೆಚ್ಚುವರಿ ಗಣತಿದಾರರನ್ನು ನೇಮಿಸಲಾಗಿದೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಮಾಸ್ಟರ್ ಟ್ರೇನರ್‌ಗಳನ್ನು ನೇಮಿಸಲಾಗಿದೆ. ಪ್ರತಿ ಹತ್ತು ಎನ್ಯುಮರೇಶನ್ ಬ್ಲಾಕ್ ಉಸ್ತುವಾರಿ ನೋಡಿಕೊಳ್ಳಲು ಒಬ್ಬ  ಸೂಪರ್‌ವೈಸರ್ ನೇಮಿಸಲಾಗಿದೆ. ಇವರು ಗಣತಿದಾರರು ಮಾಡಿದ ಗಣತಿಯ ಎನ್ಯುಮರೇಶನ್ ಬ್ಲಾಕ್ ಪ್ರಕಾರ ಶೇ 10ರಷ್ಟು ಮರು ಪರಿಶೀಲನೆಯನ್ನು ಮೊಬೈಲ್ ಆ್ಯಪ್ ಮೂಲಕ ಮರು ಪರಿಶೀಲನೆ ಮಾಡುವರು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಒರಡಿಯಾ, ಹೆಚ್ಚುವರಿ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೋಳ ಉಪಸ್ಥಿತರಿದ್ದರು.

ಮೂರು ದಿನ ವಿಶೇಷ ಶಿಬಿರ ಮನೆ ಮನೆ ಸಮೀಕ್ಷೆಯನ್ನು ಮೇ 29 ರವರೆಗೆ ವಿಸ್ತರಿಸಲಾಗಿದೆ. ಆನ್‌ಲೈನ್ ಮೂಲಕ ಸ್ವಯಂ ಘೋಷಣೆ ಮೇ 19 ರಿಂದ ಸಕ್ರಿಯಗೊಳಿಸಲಾಗಿದ್ದು ಜೂನ್ 1 ರವರೆಗೆ ಸಕ್ರಿಯವಾಗಿರುತ್ತದೆ. ಮೇ 30 31 ಮತ್ತು ಜೂನ್ 1 ವಿಶೇಷ ಶಿಬಿರ ನಡೆಯಲಿದೆ. ಮನೆ ಮನೆ ಸಮೀಕ್ಷೆಯ ಸಮಯದಲ್ಲಿ ಲಭ್ಯವಿಲ್ಲದವರನ್ನು ಮತ್ತು ಬೆಂಗಳೂರು ಗೋವಾ ಪುಣೆ ಹೈದರಾಬಾದ್ ಇತ್ಯಾದಿಗಳಿಗೆ ವಲಸೆ ಬಂದವರನ್ನು ತಲುಪುವುದು ಒಟ್ಟಾರೆ ಇದರ ಉದ್ದೇಶವಾಗಿದೆ. ಸ್ವಯಂ ಘೋಷಣೆಗಾಗಿ ಆನ್‌ಲೈನ್ ಅನ್ನು ಬಳಸಿಕೊಳ್ಳಲು ಮತ್ತು ಇಲ್ಲದಿದ್ದರೆ ವಿಶೇಷ ಅಭಿಯಾನದಲ್ಲಿ ಭಾಗವಹಿಸಲು ಅವರನ್ನು ಪ್ರೋತ್ಸಾಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.