
ಸುರಪುರ: ‘ಇಂದಿನ ತಂತ್ರಜ್ಞಾನ ಎಲ್ಲ ಕ್ಷೇತ್ರಗಳಲ್ಲಿ ಕ್ರಾಂತಿಯನ್ನು ಉಂಟು ಮಾಡುತ್ತಿದೆ. ಕೃಷಿ, ಹೈನುಗಾರಿಕೆ ಕ್ಷೇತ್ರವೂ ಇದಕ್ಕೆ ಹೊರತಾಗಿಲ್ಲ’ ಎಂದು ಗೋಮಿನಿ ಕಂಪನಿಯ ಸಿಇಓ ಅರ್ಜುನ್ ಶರ್ಮಾ ಹೇಳಿದರು.
ನಗರದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಇಂಟರ್‌ನೆಟ್ ಆಫ್ ಥಿಂಗ್ಸ್ (ಐಒಟಿ) ಮತ್ತು ಬ್ಲಾಕ್ ಚೈನ್ ವಿಷಯದ ಮೇಲೆ ಏರ್ಪಡಿಸಿದ್ದ ಚರ್ಚಾಕೂಟದಲ್ಲಿ ಅವರು ಮಾತನಾಡಿದರು.
‘ಐಒಟಿ ಎಂದರೆ ವಿವಿಧ ಸಾಧನಗಳು ಅಂತರ್ಜಾಲದ ಮೂಲಕ ಒಂದಕ್ಕೊಂದು ಸಂಪರ್ಕ ಹೊಂದಿ ಮಾಹಿತಿ ಹಂಚಿಕೊಳ್ಳುವುದು. ಉದಾಹರಣೆಗೆ ಹಸುಗಳ ಕುತ್ತಿಗೆ, ಕಿವಿ ಅಥವಾ ಕಾಲಿಗೆ ಕಟ್ಟಲಾದ ಐಒಟಿ ಸೆನ್ಸಾರ್‌ಗಳು ಅವುಗಳ ಆರೋಗ್ಯ, ದೇಹದ ಉಷ್ಣತೆ, ಆಹಾರ ಸೇವನೆ ಮತ್ತು ಚಲನೆಯ ಕುರಿತು ನಿರಂತರವಾಗಿ ಮಾಹಿತಿ ಸಂಗ್ರಹಿಸುತ್ತವೆ’ ಎಂದು ವಿವರಿಸಿದರು.
‘ಈ ಮಾಹಿತಿ ವಿಷ್ಲೇಶಿಸಿ ಯಾವುದಾದರೂ ಹಸು ಅನಾರೋಗ್ಯದಿಂದ ಬಳಲುತ್ತಿದ್ದರೆ ಅಥವಾ ಕಾಯಿಲೆ ಬೀಳುವ ಲಕ್ಷಣಗಳಿದ್ದರೆ ರೈತರಿಗೆ ಅಥವಾ ಪಶು ವೈದ್ಯರಿಗೆ ಮೋಬೈಲ್‍ನಲ್ಲಿ ಸಂದೇಶ ರವಾನೆಯಾಗುತ್ತದೆ. ಯಾವ ಹಸು ಹೆಚ್ಚು ಹಾಲು ನೀಡುತ್ತದೆ. ಯಾವ ಹಸು ಮದಕ್ಕೆ ಬಂದಿದೆ’ ಎಂಬ ಮಾಹಿತಿಯನ್ನೂ ಒದಗಿಸುತ್ತದೆ’ ಎಂದು ತಿಳಿಸಿದರು.
‘ಬ್ಲಾಕ್ ಚೈನ್’ ಒಂದು ಡಿಜಿಟಲ್ ಪುಸ್ತಕ ಇದ್ದಂತೆ. ಒಮ್ಮೆ ಇದರಲ್ಲಿ ಮಾಹಿತಿ ದಾಖಲಾದರೆ ಅಳಿಸಲು ಸಾಧ್ಯವಿಲ್ಲ. ಹಾಲಿನ ಉತ್ಪನ್ನಗಳ ಪ್ರತಿ ಹಂತವೂ ದಾಖಲಾಗಿರುತ್ತದೆ. ಮಧ್ಯವರ್ತಿಗಳ ಹಾವಳಿ ತಪ್ಪಿಸಿ ರೈತರು ತಮ್ಮ ಉತ್ಪನ್ನಗಳಿಗೆ ನ್ಯಾಯಯುತ ಬೆಲೆ ಪಡೆಯಲು ‘ಬ್ಲಾಕ್ ಚೈನ್’ ನೆರವು ನೀಡುತ್ತದೆ’ ಎಂದು ಮಾಹಿತಿ ನೀಡಿದರು.
ಕಾಲೇಜಿನ ಜಂಟಿ ಕಾರ್ಯದರ್ಶಿ ದೊಡ್ಡಪ್ಪ ನಿಷ್ಠಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಶರಣಬಸಪ್ಪ ಸಾಲಿ ಸ್ವಾಗತಿಸಿದರು. ಗಂಗಾಧರ ಹೂಗಾರ ನಿರೂಪಿಸಿದರು. ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಕೇಳಿ ತಮ್ಮ ಸಂದೇಹಗಳನ್ನು ನಿವಾರಿಸಿಕೊಂಡು ಹೆಚ್ಚಿನ ಮಾಹಿತಿ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.