ADVERTISEMENT

‘ಬುಲೆಟ್ ಬಾಬಾ’ ಹೆಸರಲ್ಲಿ ಮೋಸ

ಕೇಶ್ವಾರ: ಜನ್ನು ರಾಜು ಚಾರ್ಲ್ಸ್ ಮೊದಲ ಪತ್ನಿ ಕವಿತಾ ಆರೋಪ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2020, 2:19 IST
Last Updated 25 ಸೆಪ್ಟೆಂಬರ್ 2020, 2:19 IST
ಜನ್ನು ರಾಜು ಚಾರ್ಲ್ಸ್
ಜನ್ನು ರಾಜು ಚಾರ್ಲ್ಸ್   

ಗುರುಮಠಕಲ್: ‘ತಾಲ್ಲೂಕಿನ ಕೇಶ್ವಾರ ಗ್ರಾಮ ಹೊರವಲಯದಲ್ಲಿಜನ್ನು ರಾಜು ಅಲಿಯಾಸ್‌ 'ಬುಲೆಟ್ ಬಾಬಾ'ಎಂದು ಹೇಳಿಕೊಂಡು ನನ್ನ ಪತಿ ಜನ್ನು ರಾಜು ಚಾರ್ಲ್ಸ್‌, ಸುತ್ತಲಿನ ಗ್ರಾಮಸ್ಥರನ್ನು ನಂಬಿಸಿ ಮೋಸ ಮಾಡುತ್ತಿದ್ದಾರೆ. ಅವರ ಮೇಲೆ ಹಲವಾರು
ಪ್ರಕರಣಗಳು ದಾಖಲಾಗಿವೆ’ ಎಂದು ಬಾಬಾ ಮೊದಲ ಪತ್ನಿ ಕವಿತಾ ಆರೋಪಿಸಿದ್ದಾರೆ.

‘ಒಂದೂವರೆ ವರ್ಷಗಳಿಂದ ಕೇಶ್ವಾರ ಗ್ರಾಮ ಹೊರವಲಯದಲ್ಲಿ ಬೀಡು ಬಿಟ್ಟಿರುವ 'ಬುಲೆಟ್ ಬಾಬಾ' ಮೂಲತಃ ಆಂಧ್ರಪ್ರದೇಶದ ವರಂಗಲ್ ನಗರದ ಲೇಬರ್ ಕಾಲೊನಿ ಬಡಾವಣೆಯ ನಿವಾಸಿ. ಜನ್ನು ರಾಜು 2003ರಲ್ಲಿ ನನ್ನನ್ನು ಮದುವೆಯಾಗಿದ್ದಾರೆ. ನಮಗೆ 16 ವರ್ಷ ಹಾಗೂ 15 ವರ್ಷ ವಯಸ್ಸಿನ ಇಬ್ಬರುಪುತ್ರರು ಇದ್ದಾರೆ’ ಎಂದು ಕೇಶ್ವಾರ ಗ್ರಾಮದಲ್ಲಿ ತಿಳಿಸಿದರು.

‘ಮುತ್ತಾತನ ಕಾಲದಿಂದ ಅವರ ಕುಟುಂಬ ಗಿಡ ಮೂಲಿಕೆಗಳ ಮೂಲಕ ಚಿಕಿತ್ಸೆ ನೀಡುವ ಕೆಲಸ ಮಾಡುತ್ತಿದೆ. ಈತನಿಗೂ ಗಿಡ ಮೂಲಿಕೆಗಳ ಜ್ಞಾನವಿದ್ದು, ಗಿಡ ಮೂಲಿಕೆಯ ಔಷಧವನ್ನು ಕುಂಕುಮ, ಭಂಡಾರ ಹಾಗೂ ಬೂದಿಯಲ್ಲಿ ಬೆರೆಸಿ ತಾನು ಮಂತ್ರಗಳಿಂದ ರೋಗಗಳನ್ನು ಗುಣಮಾಡುವುದಾಗಿ ಜನರನ್ನು ನಂಬಿಸುತ್ತಾನೆ. ಪೂಜೆಗಳ ಹೆಸರಿನಲ್ಲಿ ಹೆಣ್ಣುಮಕ್ಕಳನ್ನು ಯಾಮಾರಿಸುತ್ತಿರುವುದು ತಿಳಿದ ಕೂಡಲೇ ಆತನ ವಿರುದ್ಧ ವರಂಗಲ್ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದೇನೆ’ ಎಂದು ಕವಿತಾ ವಿವರಿಸಿದರು.

ADVERTISEMENT

‘ನಂತರ 2019ರಲ್ಲಿ ಜಹೀರಾಬಾದ್ ಹತ್ತಿರದ ಜಹೀರಾ ಸಂಘಂ ಠಾಣೆಯಲ್ಲಿಯೂ ದೂರು ನೀಡಿದ್ದು, ವಾರೆಂಟ್ ಜಾರಿಯಾಗಿದೆ. ಜನ್ನು ರಾಜು ಈ ಮೊದಲು ತೆಲಂಗಾಣದ ಪಠಾಣಚರು ನಗರ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸ್ಥಳಾಂತರಗೊಳ್ಳುತ್ತ ಸೇಡಂ ತಾಲ್ಲೂಕಿನ ಯಾನಾಗುಂದಿ ಗ್ರಾಮದಲ್ಲಿ ಗಿಡ ಮೂಲಿಕೆಗಳನ್ನು ನೀಡುತ್ತಿದ್ದ. ಅಲ್ಲಿಂದ ಗುರುಮಠಕಲ್ ತಾಲ್ಲೂಕಿನ ಕೇಶ್ವಾರ ಗ್ರಾಮಕ್ಕೆ ಬಂದು, ಗ್ರಾಮದ ಹೊರವಲಯದಲ್ಲಿ ದೇವಸ್ಥಾನ ನಿರ್ಮಿಸುತ್ತಾ ಬಾಬಾ ಎಂದು ಹೇಳಿಕೊಂಡಿರುವುದು ತಿಳಿದು ಇಲ್ಲಿಗೆ ಬಂದಿರುವುದಾಗಿ’ ಅವರು ತಿಳಿಸಿದರು.

ಕವಿತಾ ಕೇಶ್ವಾರ ಗ್ರಾಮಕ್ಕೆ ಬಂದ ನಂತರ ಇಲ್ಲಿ ತನ್ನ ಪತ್ನಿ ಎಂದು ಹೇಳಿಕೊಂಡು ಜೊತೆಯಲ್ಲಿದ್ದ ಮಹಿಳೆಯೊಡನೆ ಜನ್ನು ರಾಜು ಪರಾರಿಯಾಗಿದ್ದಾಗಿ ಮೂಲಗಳು ತಿಳಿಸಿವೆ.

ಈ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.