ವಡಗೇರಾ: ಮಲೆನಾಡು ಭಾಗದಲ್ಲಿ ಹೇರಳವಾಗಿ ಬೆಳೆಯುವ ಹಲಸಿನ ಹಣ್ಣಿನ ಘಮ ಇದೀಗ ಬಯಲುಸೀಮೆಯಾದ ವಡಗೇರಾದಲ್ಲೂ ಹರಡಿದೆ.
ದೂರದ ಹಾಸನದಿಂದ ಗಂಗಾವತಿ, ಅಲ್ಲಿಂದ ವಡಗೇರಾ ಪಟ್ಟಣಕ್ಕೆ ಹಲಸಿನ ಹಣ್ಣು ಪೂರೈಕೆಯಾಗುತ್ತಿದ್ದು, ಭರ್ಜರಿ ಮಾರಾಟ ಸಾಗಿದೆ. ಹಲಸಿನ ಹಣ್ಣಿನ ಘಮ ದಾರಿಹೋಕರ ಮನಸೆಳೆಯುತ್ತಿದ್ದು, ಹಲಸಿನ ಸ್ವಾದಕ್ಕೆ ಮನಸೋತಿದ್ದಾರೆ.
ವಡಗೇರಾ ಪಟ್ಟಣದಲ್ಲಿ ತಳ್ಳುವ ಬಂಡಿಯಲ್ಲಿ ಹಲಸಿನ ಹಣ್ಣುಗಳನ್ನು ಇಟ್ಟು ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುತ್ತಿದೆ.
₹20ಗೆ 4ರಿಂದ 5 ತೊಳೆ(ಪೀಸ್), ಪ್ರತಿ ಕೆ.ಜಿ.ಗೆ ₹200 ಹಲಸಿನ ಹಣ್ಣಿನ ತೊಳೆ ಮಾರಾಟವಾಗುತ್ತಿದೆ.
ಅದ್ಬುತ ರುಚಿ:
ಹಳದಿ ಬಣ್ಣದ ಹಲಸಿನ ಹಣ್ಣುಗಳ ಸ್ವಾದಕ್ಕೆ ಬಯಲುಸೀಮೆ ಜನ ಮನಸೋತಿದ್ದು, ಬಾಯಿ ಚಪ್ಪರಿಸಿ ತಿನ್ನುತ್ತಿದ್ದಾರೆ. ‘ನೋಡಲು ಒರಟಾದ ಈ ಹಣ್ಣಿನ ತೊಳೆಗಳು ಮೃದುವಾಗಿವೆ. ಅದ್ಭುತ ರುಚಿ ಹೊಂದಿವೆ. ನಮ್ಮ ಭಾಗಕ್ಕೆ ಇದು ಹೊಸ ಸ್ವಾದದ ಹಣ್ಣು’ ಎಂದು ಗ್ರಾಹಕರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಕ್ವಿಂಟಲ್‌ಗೆ ₹5 ಸಾವಿರ ದರ:
ಪ್ರತಿ ಕ್ವಿಂಟಲ್ ಹಲಸಿನ ಹಣ್ಣಿಗೆ ಸುಮಾರು ₹5 ಸಾವಿರ ದರವಿತ್ತು. ಆದರೆ, ಹಾಸನ ಭಾಗದಲ್ಲಿ ಮಳೆಯಾಗುತ್ತಿರುವ ಕಾರಣ ದರ ತುಸು ಹೆಚ್ಚಿದ್ದು, ಪ್ರತಿ ಕ್ವಿಂಟಲ್‌ಗೆ ₹6,500ಗಳಷ್ಟಿದೆ. ಪ್ರತಿ ಕ್ವಿಂಟಲ್ 25ರಿಂದ 30 ಹಣ್ಣುಗಳು ತೂಗುತ್ತವೆ. ಈ ಭಾಗದಲ್ಲಿ ಹಲಸು ಹೊಸ ಬಗೆಯ ಹಣ್ಣು. ಹೀಗಾಗಿ ಮಕ್ಕಳಿಂದ ಹಿಡಿದು ಹಿರಿಯರ ತನಕ ಎಲ್ಲರೂ ಈ ಹಣ್ಣು ಖರೀದಿಸಿ ರುಚಿ ನೋಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ನಿತ್ಯ ಹೆಚ್ಚು ಕಡಿಮೆ ₹3 ಸಾವಿರ ವಹಿವಾಟು ನಡೆಯುತ್ತಿದೆ’ ಎಂದು ಹಣ್ಣಿನ ವ್ಯಾಪಾರಿ ಹೇಳುತ್ತಾರೆ.
‘ಯಾವುದೇ ಬಗೆಯ ಹಣ್ಣು ದೇಹಕ್ಕೆ ಒಳ್ಳೆಯದೇ ಆಗಿದೆ. ಹಲಸಿನ ಹಣ್ಣಿನಲ್ಲಿ ರೋಗ ನಿರೋಧಕ ಶಕ್ತಿ ಇದೆ. ಹಾಗೆಯೆ ಜೀರ್ಣಕ್ರಿಯೆಗೂ ಸಹಕಾರಿ. ಈ ಹಣ್ಣು ಎಲ್ಲೇ ಕಂಡರೂ ಅವುಗಳನ್ನು ಖರೀದಿಸುತ್ತೇನೆ. ಅದರ ರುಚಿ ಬೇರೆ ಹಣ್ಣುಗಳಿಂದ ಭಿನ್ನವಾಗಿದೆ’ ಎನ್ನುತ್ತಾರೆ ಗ್ರಾಹಕ ಗಂಗಾಧರ ಕುಂಬಾರ ಹಾಲಗೇರಾ.
ಈ ಭಾಗದಲ್ಲಿ ಹಲಸಿನ ಹಣ್ಣು ಅಪರೂಪ. ಬೆಳಿಗ್ಗೆ ಅಷ್ಟಾಗಿ ವ್ಯಾಪಾರ ಇರಲ್ಲ. ಆದರೆ ಸಂಜೆ ಜನರು ಮುಗಿಬಿದ್ದು ಹಲಸಿನ ಹಣ್ಣು ಖರೀದಿಸುತ್ತಿದ್ದು ಭರ್ಜರಿ ವ್ಯಾಪಾರವಾಗುತ್ತಿದೆಮಂಜುನಾಥ ಗಂಗಾವತಿ ಹಣ್ಣಿನ ವ್ಯಾಪಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.