ADVERTISEMENT

‘ಗ್ರಾಮೀಣ ಪ್ರದೇಶದ ಅಭಿವೃದ್ಧಿಗೆ ಒತ್ತು’

ಜಲಜೀವನ್ ಯೋಜನೆ ಕಾಮಗಾರಿಗಳಿಗೆ ಶಂಕುಸ್ಥಾಪನೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 3:53 IST
Last Updated 14 ಜೂನ್ 2022, 3:53 IST
ಕೆಂಭಾವಿ ಸಮೀಪದ ಮಲ್ಲಾ (ಬಿ) ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಶಂಕುಸ್ಥಾಪನೆ ನೆರವೇರಿಸಿದರು
ಕೆಂಭಾವಿ ಸಮೀಪದ ಮಲ್ಲಾ (ಬಿ) ಗ್ರಾಮದಲ್ಲಿ ಜೆಜೆಎಂ ಕಾಮಗಾರಿಗೆ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಶಂಕುಸ್ಥಾಪನೆ ನೆರವೇರಿಸಿದರು   

ಕೆಂಭಾವಿ: ಗ್ರಾಮೀಣ ಪ್ರದೇಶಗಳು ಅಭಿವೃದ್ಧಿಯಾದಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಕ್ಷೇತ್ರದ ಪ್ರತಿ ಗ್ರಾಮಕ್ಕೆ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಡುವಂತಹ ಕೆಲಸಗಳನ್ನು ಮಾಡುತ್ತಿದ್ದೇನೆ ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಹೇಳಿದರು.

ಸಮೀಪದ ಮಲ್ಲಾ ಹಾಗೂ ಹದನೂರ ಗ್ರಾಮಗಳ್ಳಿ ಸೋಮವಾರ ಜಲಜೀವನ್ ಯೋಜನೆ ಅಡಿಯಲ್ಲಿ ಕುಡಿಯುವ ನೀರಿನ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಪ್ರತಿ ಮನೆಗೆ ಕುಡಿಯುವ ನೀರು ತಲುಪಿಸುವ ಈ ಯೋಜನೆಗೆ ಮಲ್ಲಾ (ಬಿ) ಗ್ರಾಮಕ್ಕೆ ₹1 ಕೋಟಿ ಹಾಗೂ ಹದನೂರು ಗ್ರಾಮಕ್ಕೆ ₹1.93 ಕೋಟಿ ಅನುದಾನ ಬಿಡುಗಡೆಯಾಗಿದೆ. ಗ್ರಾಮಸ್ಥರು ಗುಣಮಟ್ಟದ ಕಾಮಗಾರಿ ಮಾಡಿಸಿಕೊಳ್ಳುವ ಮೂಲಕ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದರು.

ADVERTISEMENT

ಜಲಧಾರೆ ಯೋಜನೆಯಡಿ ಯಾದಗಿರಿ ಜಿಲ್ಲೆ ಆಯ್ಕೆಯಾಗಿದ್ದು ನಾರಾಯಣಪುರ ಜಲಾಶಯದಿಂದ ಪ್ರತಿ ಗ್ರಾಮಗಳಿಗೆ ನೀರು ಒದಗಿಸಲಾಗುವುದು ಎಂದ ಅವರು ಸರ್ಕಾರಕ್ಕೆ ಕೊಟ್ಟ ತೆರಿಗೆ ಹಣದಿಂದಲೇ ಈ ಎಲ್ಲ ಅಭಿವೃದ್ಧಿ ಕಾಮಗಾರಿಗಳು ಮಾಡುತ್ತಿದ್ದು, ಇದು ನಿಮ್ಮ ದುಡ್ಡು. ಉತ್ತಮ ಕಾಮಗಾರಿ ಮಾಡಿಸಿಕೊಳ್ಳುವುದು
ನಿಮ್ಮ ಜವಾಬ್ದಾರಿ ಎಂದರು.

ರಾಜ್ಯ ಸರ್ಕಾರ ಸುಳ್ಳು ಹೇಳುತ್ತಲೇ ಕಾಲಕಳೆಯುತ್ತಿದೆ. ಅದಿವೇಶನದಲ್ಲಿ ಕೆಕೆಆರ್‌ಡಿಬಿಗೆ ₹3 ಸಾವಿರ ಕೋಟಿ ಅನುದಾನ ಕೊಡುವುದಾಗಿ ಘೋಷಣೆ ಮಾಡಿದೆ. ಆದರೆ ಇದುವರೆಗೆ ಕೇವಲ ₹1,500 ಕೋಟಿ ಮಾತ್ರ ಹಣ ಬಿಡುಗಡೆ ಮಾಡಿದ್ದು, ಅದರಲ್ಲಿ ₹1,175 ಕೋಟಿ ಮೊತ್ತದ ಅನುದಾನದಲ್ಲಿ ಕ್ರಿಯಾಯೋಜನೆ ಮಾಡಿದೆ ಎಂದರು.

ಬೆಂಬಲ ಬೆಲೆ ಹೆಸರಲ್ಲಿ ಕೇವಲ ಉಳ್ಳವರು ಮಾತ್ರ ಲಾಭ ಪಡೆಯುತ್ತಿದ್ದಾರೆ ನಿಜವಾದ ರೈತರಿಗೆ ಲಾಭ ಸಿಗುತ್ತಿಲ್ಲ. ಇಂದು ಸರ್ಕಾರಕ್ಕೆ ಬಿಜೆಪಿ ಸರ್ಕಾರದ ಶಾಸಕರೆ ಆರೋಪಿಸುತ್ತಿದ್ದಾರೆ ಎಂದು ಹೇಳಿದರು.

ಸರ್ಕಾರ ಸುಳ್ಳು ಹೇಳುವ ಕೆಲಸ ಮಾಡುತ್ತಿದೆ. ಇಂದು ಈ ಭಾಗದಲ್ಲಿ ಭತ್ತ ಬೆಳೆದ ರೈತರು ಕಂಗಾಲಾಗಿದ್ದಾರೆ ರಸಗೊಬ್ಬರದ ಬೆಲೆಯೇರಿಕೆಯಿಂದ ಲಾಭಾಂಶ ಕುಸಿದು ಕೃಷಿಯಿಂದ ದೂರಸರಿಯುತ್ತಿದ್ದಾರೆ. ಇದಕ್ಕೆಲ್ಲ ಕೇಂದ್ರ ಸರ್ಕಾರ ಕಾರಣ ಎಂದು ಆರೋಪಿಸಿದರು.

ಕಾಂಗ್ರೆಸ್ ಪಕ್ಷದ ರಾಜ್ಯ ಕಾರ್ಯದರ್ಶಿ ಮರಿಗೌಡ ಹುಲಕಲ್, ಬಸನಗೌಡ ಹೊಸಮನಿ, ಗೌಡಪ್ಪಗೌಡ ವಣಕ್ಯಾಳ, ಬಸವರಾಜ ಚಿಂಚೊಳಿ, ಹಣಮಂತರಾಯ ಮಾನಸುಣಗಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರಸ್ವತಿ ಕಟ್ಟಿಮನಿ, ಸಂಗನಗೌಡ ದೇಸಾಯಿ, ವಿರೇಂದ್ರ ದೇಸಾಯಿ, ಸಹಾಯಕ ಎಂಜಿನಿಯರ್ ಸ್ಫೂರ್ತಿ ಎಂ ಇದ್ದರು.

ಪ್ರಶಾಂತ ನಿರೂಪಿಸಿದರು, ರುದ್ರಗೌಡ ಹೊಸಮನಿ ಸ್ವಾಗತಿಸಿ ಚಂದ್ರಶೇಖರ ಬಿಳವಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.