ADVERTISEMENT

ಅಧಿಕಾರಿಗಳ ನಿರ್ಲಕ್ಷ್ಯ; ನಿರುಪಯುಕ್ತವಾದ ಜೆಜೆಎಂ

ಕಾಮಗಾರಿ ಪೂರ್ಣಗೊಂಡರೂ ಕೊಳಾಯಿಗೆ ಬಾರದ ನೀರು

ಮಲ್ಲಿಕಾರ್ಜುನ ಅರಿಕೇರಕರ್
Published 8 ಸೆಪ್ಟೆಂಬರ್ 2023, 4:54 IST
Last Updated 8 ಸೆಪ್ಟೆಂಬರ್ 2023, 4:54 IST
ಸೈದಾಪುರ ಸಮೀಪದ ಕ್ಯಾತನಾಳ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ನಿರ್ಮಿಸಿದ ಕೊಳಾಯಿಗೆ ನೀರಿನ ಸಂಪರ್ಕವಿಲ್ಲ
ಸೈದಾಪುರ ಸಮೀಪದ ಕ್ಯಾತನಾಳ ಗ್ರಾಮದಲ್ಲಿ ಜೆಜೆಎಂ ಯೋಜನೆಯಡಿ ನಿರ್ಮಿಸಿದ ಕೊಳಾಯಿಗೆ ನೀರಿನ ಸಂಪರ್ಕವಿಲ್ಲ   

ಪ್ರಜಾವಾಣಿ ಚಿತ್ರ

ಸೈದಾಪುರ: ಸೈದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಕ್ಯಾತನಾಳ ಗ್ರಾಮದಲ್ಲಿ 2021-22 ಜಲಜೀವನ ಮಿಷನ್ ಯೋಜನೆ, ಜಲೋತ್ಸವ ಅಭಿಯಾನದಡಿ ಕೈಗೊಂಡ ಕಾಮಗಾರಿ ಪೂರ್ಣಗೊಂಡು 4-5 ತಿಂಗಳು ಕಳೆದರೂ ನಲ್ಲಿಗಳಿಗೆ ನೀರಿನ ಸಂಪರ್ಕ ಕಲ್ಪಿಸಿಲ್ಲ. ಇದರಿಂದ ಲಕ್ಷಾಂತರ ರೂಪಾಯಿ ವೆಚ್ಚದ ಸರ್ಕಾರದ ಯೋಜನೆಯು ಸಾರ್ವಜನಿಕರ ಉಪಯೋಗಕ್ಕೆ ಬಾರದಂತಾಗಿದೆ. 

‘₹ 52 ಲಕ್ಷ  ವೆಚ್ಚದಲ್ಲಿ ಸುಮಾರು 230ಕ್ಕೂ ಹೆಚ್ಚು ನಲ್ಲಿ, ಕೈಪಂಪುಗೆ ಮೋಟರ್ ವ್ಯವಸ್ಥೆ ಮಾಡಲಾಗಿದೆ. ಪಿಡಿಒ ಅವರು ಖುದ್ದು ಕಾಮಗಾರಿಯ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈಗ ಗ್ರಾಮ ಪಂಚಾಯಿತಿಯು ಸುಪರ್ದಿಗೆ ಪಡೆದು ನೀರು ಬಿಡುವುದಷ್ಟೆ ಕೆಲಸ ಬಾಕಿ ಉಳಿದಿದೆ. ಪಿಡಿಒ ಸುಪರ್ದಿಗೆ ತೆಗೆದುಕೊಳ್ಳದೇ ನೆಪ ಹೇಳುತ್ತ ಮುಂದೂಡುತ್ತಿದ್ದಾರೆ. ಇತ್ತೀಚೆಗೆ ಕರೆಯನ್ನು ಸ್ವೀಕರಿಸುತ್ತಿಲ್ಲ. ಬಿಲ್ ನೀಡುತ್ತಿಲ್ಲ’ ಎಂದು ಜೆಜೆಎಂ ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರ ಮಹೇಶರೆಡ್ಡಿ ದೂರಿದ್ದಾರೆ.

ADVERTISEMENT

ಆಮೆಗತಿಯಲ್ಲಿ ಜೆಜೆಎಂ ಕಾಮಗಾರಿ:ಸೈದಾಪುರ ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಪಟ್ಟಣದ ಲಕ್ಷ್ಮೀನಗರ, ತಾಯಿ ಕಾಲೊನಿ ಸೇರಿದಂತೆ ಪಂಚಾಯಿತಿ ವ್ಯಾಪ್ತಿಯ ಬಹುತೇಕ ಗ್ರಾಮಗಳಲ್ಲಿ ಜಲ ಜೀವನ್ ಪೈಪ್‍ಲೈನ್ ಕಾಮಗಾರಿಗಾಗಿ ಉತ್ತಮ ಸ್ಥಿತಿಯಲ್ಲಿದ್ದ ಸಿಸಿ ರಸ್ತೆಯನ್ನು ಹೊಡೆದು ಹಾಕಿ ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಇದರಿಂದ ಮಕ್ಕಳು, ವಯೋವೃದ್ಧರು, ವಾಹನ ಸವಾರರು ನಿತ್ಯ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ಮನೆಯಂಗಳದಲ್ಲಿ ಸಿಸಿ ರಸ್ತೆಯ ಕಾಂಕ್ರಿಟ್ ಕಲ್ಲುಗಳಿರುವುದರಿಂದ ಸುಗಮವಾಗಿ ಓಡಾಡಲು ಸಾದ್ಯವಾಗುತ್ತಿಲ್ಲ. ಅಲ್ಲದೇ ಮಕ್ಕಳು ಆಟವಾಡಲು ಹೋಗಿ, ಕಾಲು ಎಡವಿ ಬಿದ್ದು ಗಾಯಗೊಳ್ಳುವುದು ಮುಂದುವರೆದಿದೆ. ವಯೋವೃದ್ಧರ ಮತ್ತು ಅಂಗವಿಕಲರ ಪಾಡು ಹೇಳತೀರದಾಗಿದೆ. ಈ ಕುರಿತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ತಿಳಿಸಿದರು ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

‘ಮನೆಗೆ ನಳದ ಪೈಪ್‍ ಹಾಕುವ ಭರವಸೆಯೊಂದಿಗೆ ಉತ್ತಮ ಸ್ಥಿತಿಯಲ್ಲಿದ್ದ ಸಿಸಿ ರಸ್ತೆ ಹೊಡೆದು ಹಾಕಿದ್ದಾರೆ. ಈಗ ಕಲ್ಲು ತುಂಬಿದ ರಸ್ತೆಯನ್ನು ದಾಟಿ ಹೋಗಲು ಸಾದ್ಯವಾಗುತ್ತಿಲ್ಲ. ಆದಷ್ಟು ಬೇಗ ಮೊದಲಿನಂತೆ ಸಿಸಿ ರಸ್ತೆ ಮಾಡಿಕೊಡಬೇಕು‘ ಎಂದು ಲಕ್ಷ್ಮೀ ನಗರ ನಿವಾಸಿ ಗೋಪಾಲ ರಾಠೋಡ ತಿಳಿಸಿದರು.

ಸೈದಾಪುರ ಪಟ್ಟಣದ ಲಕ್ಷ್ಮಿ ನಗರದಲ್ಲಿ ಜೆಜೆಎಂ ಕಾಮಗಾರಿಗಾಗಿ ಸಿಸಿ ರಸ್ತೆಯನ್ನು ಅಗೆದು ಹಾಗೆ ಬಿಡಲಾಗಿದೆ
ವೆಂಕಣ್ಣಗೌಡ
ಗೋಪಾಲ ರಾಠೋಡ ಲಕ್ಷ್ಮೀ ನಗರ ನಿವಾಸಿ

‘ಸೈದಾಪುರ ಪಟ್ಟಣ ಸೇರಿ ಗ್ರಾ.ಪಂ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಹಲವು ಸಮಸ್ಯೆಗಳಿವೆ. ಸಮಸ್ಯೆಗಳ ಪರಿಹಾರಕ್ಕೆ ಪಿಡಿಒ ಯಾವುದೇ ಕ್ರಮ ಕೈಗೊಂಡಿಲ್ಲ. ಮೇಲಧಿಕಾರಿಗಳು ಕೂಡ ಅವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಕೂಡಲೇ ಇಂತಹ ಅಧಿಕಾರಿಯ ವಿರುದ್ಧ ಕ್ರಮ ಕೈಗೊಂಡುಸಾರ್ವಜನಿಕರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು’ ಎಂದು ಯುವ ಮುಖಂಡ ವೆಂಕಣ್ಣಗೌಡ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.