ADVERTISEMENT

ಉದ್ಯೋಗದ ಗ್ಯಾರಂಟಿಗೆ ಒತ್ತಾಯ: ಮಾನವ ಸರಪಳಿ ರಚಿಸಿ, ರಸ್ತೆ ತಡೆದು ಪ್ರತಿಭಟನೆ

ಖಾಲಿ ಹುದ್ದೆಗಳ ಭರ್ತಿಗೆ ಆಕಾಂಕ್ಷಿಗಳ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:22 IST
Last Updated 22 ನವೆಂಬರ್ 2025, 6:22 IST
ಯಾದಗಿರಿಯಲ್ಲಿ ಗುರುವಾರ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು
ಯಾದಗಿರಿಯಲ್ಲಿ ಗುರುವಾರ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿದರು   

ಯಾದಗಿರಿ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿ ಉದ್ಯೋಗಾಕಾಂಕ್ಷಿಗಳ ಹೋರಾಟ ಸಮಿತಿಯ ಪದಾಧಿಕಾರಿಗಳು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.

ಇಲ್ಲಿನ ನೇತಾಜಿ ಸುಭಾಷ್ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಮಾನವ ಸರಪಳಿ ರಚಿಸಿ, ವಾಹನಗಳ ಸಂಚಾರ ತಡೆದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು. 

‘ಉದ್ಯೋಗ ನಮ್ಮ ಹಕ್ಕು’, ‘ಕೇಂದ್ರ ಮತ್ತು ರಾಜ್ಯ ಸರ್ಕಾಗಳು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಿ’, ‘ನನಗೆ ನಿಮ್ಮ 5 ಗ್ಯಾರಂಟಿ ಬೇಡ, ನನಗೆ ಉದ್ಯೋಗದ ಗ್ಯಾರಂಟಿ ಮಾತ್ರ ಕೊಡಿ’, ‘ಎಲ್ಲಾ ನೇಮಕಾತಿಯಲ್ಲಿ ಅಕ್ರಮ ತಡೆಗಟ್ಟಿ ಪಾರದರ್ಶಕತೆ ತನ್ನಿ', ‘ನೇಮಕಾತಿಯಲ್ಲಿ ಅಕ್ರಮ ಭ್ರಷ್ಟಾಚಾರ ನಿರ್ಮೂಲನೆ ಮಾಡಿ’... ಎಂಬ ನಾಮಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು. 

ADVERTISEMENT

‌ನೌಕರಿಯ ನಿರೀಕ್ಷೆಯಲ್ಲಿರುವ ರಾಜ್ಯದ ಯುವಜನತೆ ನಿರುದ್ಯೋಗದಿಂದ ಕಂಗಾಲಾಗಿದ್ದಾರೆ. ಉದ್ಯೋಗಕ್ಕಾಗಿ ಅವಿರತವಾಗಿ ಅಧ್ಯಯನ ಮಾಡಿ, ಪರಿಶ್ರಮ ನಡೆಸಿದರೂ ಯಾವುದೇ ನೇಮಕಾರಿ ಪ್ರಕ್ರಿಯೆಗಳು ನಡೆಯುತ್ತಿಲ್ಲ. ಭವಿಷ್ಯದ ಬಗ್ಗೆ ಭರವಸೆಯನ್ನು ಕಳೆದುಕೊಳ್ಳುವಂತೆ ಆಗಿದೆ. ಹುದ್ದೆಗಳಿಗೆ ನಿಗದಿ ಮಾಡಿರುವ ಗರಿಷ್ಠ ವಯೋಮಿತಿಯುವ ಮುಗುಯುತ್ತಿದ್ದರೂ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. 

ನೇಮಕಾತಿಯ ಅರ್ಹ ವಯೋಮಿತಿಯನ್ನು ಕನಿಷ್ಠ ಐದು ವರ್ಷಗಳಿಗೆ ಹೆಚ್ಚಿಸಿ ಕೂಡಲೇ ನೇಮಕಾತಿ ಅಧಿಸೂಚನೆ ಹೊರಡಿಸಬೇಕು. ಚಿತ್ರಕಲಾ, ಸಂಗೀತ, ದೈಹಿಕ ಶಿಕ್ಷಣ ಶಿಕ್ಷಕರು ಸೇರಿದಂತೆ ಖಾಲಿ ಇರುವ ಎಲ್ಲಾ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ದುಬಾರಿ ಅರ್ಜಿ ಶುಲ್ಕವನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.

ಸಮಿತಿಯ ರಾಜ್ಯ ಸಹ ಸಂಚಾಲಕ ಚನ್ನಬಸವ ಜಾನೇಕಲ್ ಮಾತನಾಡಿ, ‘ಬಿಜೆಪಿಯ ವೈಫಲ್ಯಗಳನ್ನು ಮುಂದಿಟ್ಟುಕೊಂಡ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳು ಕಳೆದಿದೆ. ಒಳ ಮೀಸಲಾತಿ ಹೆಸರಿನಲ್ಲಿ ಯಾವುದೇ ನೇಮಕಾತಿಯನ್ನು ಮಾಡಿಲ್ಲ. 2025-26ನೇ ಸಾಲಿಗೆ ರಾಜ್ಯದ 43 ಇಲಾಖೆಗಳಲ್ಲಿ 2.84 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ’ ಎಂದರು.

'ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ 59,454 ಹುದ್ದೆಗಳು ಭರ್ತಿಗಾಗಿ ಕಾಯುತ್ತಿವೆ. ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳಲ್ಲಿ 21,381 ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ 9.79 ಲಕ್ಷ ಹುದ್ದೆಗಳು ಖಾಲಿ ಬಿದ್ದಿವೆ. ನೇಮಕಾತಿ ಮಾಡುವುದನ್ನು ಬಿಟ್ಟು ಉದ್ಯೋಗ ರದ್ದತಿ ಮಾಡಲು ಮುಂದಾಗಿರುವುದನ್ನು ಖಂಡನೀಯ’ ಎಂದು ಹೇಳಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯಲ್ಲಿ ಸಮಿತಿಯ ಸದಸ್ಯರಾದ ಸಂತೋಷ್ ರಾಠೋಡ, ಮಹೇಶ್ ಲಿಂಗೇರಿ, ಬಾಗಪ್ಪ ರಾಂಪುರ, ಮಾಳಪ್ಪ ಯಾದವ್, ಪರಮ ಸುರಪುರ, ದೇವರಾಜ, ಕರಣ್, ಅನಿಲ್‌ಕುಮಾರ್, ರಾಜು, ರೋಹಿತ್, ಮೌನೇಶ್, ಸಂಗಮೇಶ್, ಯಲ್ಲಾಲಿಂಗ, ವಿಶ್ವನಾಥ್, ಹಣಮಂತ ಶಹಾಪುರ, ಐಲಿಂಗ, ಮಲ್ಲಮ್ಮ, ಬಸಮ್ಮ, ಭೀಮಮ್ಮ ಸೇರಿ ಹಲವರು ಪಾಲ್ಗೊಂಡಿದ್ದರು.

ಅರ್ಜಿ ಶುಲ್ಕ ಕೈಬಿಡಲು ಮನವಿ

ಕೇಂದ್ರದ ವಿವಿಧ ನೇಮಕಾತಿಗಳ ಅರ್ಜಿ ಶುಲ್ಕ ಸಂಪೂರ್ಣ ಕೈಬಿಟ್ಟು ಸ್ಪರ್ಧಾತ್ಮಕ ಪರೀಕ್ಷೆ ಸಂದರ್ಶನಕ್ಕೆ ಹಾಜರಾಗಲು ಬಸ್ ರೈಲುಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು ಸರ್ಕಾರಿ ಇಲಾಖೆಗಳಲ್ಲಿ ದಿನಗೂಲಿ ಗುತ್ತಿಗೆ ಹೊರಗುತ್ತಿಗೆ ಪದ್ಧತಿ ಕೈ ಬಿಟ್ಟು ಎಲ್ಲಾ ಹುದ್ದೆಗಳನ್ನು ಕಾಯಂ ಆಧಾರದಲ್ಲಿ ನೇಮಕಾತಿ ಮಾಡಬೇಕು. ಹಲವು ವರ್ಷಗಳಿಂದ ರದ್ದುಗೊಳಿಸಿರುವ ಲಕ್ಷಾಂತರ ಹುದ್ದೆಗಳನ್ನು ಪುನರ್ ಸ್ಥಾಪಿಸಬೇಕು. ವಿಲೀನಗೊಳಿಸಿ ರದ್ದುಗೊಳಿಸುವ ಪ್ರಕ್ರಿಯೆಯನ್ನು ಕೈಬಿಡಬೇಕು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಖಾಸಗೀಕರಣವನ್ನು ನಿಲ್ಲಿಸಬೇಕು ಎಂದರು.