ಕೆಂಭಾವಿ ಪಟ್ಟಣದ ಪುರಸಭೆ ಆವರಣದಲ್ಲಿ ಗುರುವಾರ ದಸರಾ ಉತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಬಡ್ಡಿ ಪಂದ್ಯಾವಳಿಗೆ ಅತಿಧಿಗಳು ಆಟವಾಡುವುದರ ಮೂಲಕ ಚಾಲನೆ ನೀಡಿದರು.
ಕೆಂಭಾವಿ: ಅತ್ತ ಆಟಗಾರರು ಏಕ ಉಸಿರಿನಲ್ಲಿ ಕಬಡ್ಡಿ... ಕಬಡ್ಡಿ... ಕಬಡ್ಡಿ... ಎನ್ನುತ್ತ ಎದುರಾಳಿ ತಂಡದ ಮೇಲೆ ದಾಳಿ ಮಾಡುತ್ತಿದ್ದರೇ, ಇತ್ತ ನೆರೆದಿದ್ದ ಸಾವಿರಾರು ಪ್ರೇಕ್ಷಕರು ಎದೆಯುಸಿರು ಬಿಗಿಹಿಡಿದು ರೋಚಕ ಕ್ಷಣಗಳನ್ನು ಕಣ್ತುಂಬಿಕೊಳ್ಳುತ್ತಿದ್ದರು.
ಗ್ರಾಮೀಣ ಕ್ರೀಡೆಗಳು ನಶಿಸುತ್ತಿವೆ ಎಂಬ ಮಾತಿಗೆ ಪಟ್ಟಣದಲ್ಲಿ ದಸರಾ ಉತ್ಸವ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಕಬಡ್ಡಿ ಪಂದ್ಯಾವಳಿ ಅಪವಾದದಂತಿತ್ತು. ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳ ಕ್ರೀಡಾಪ್ರೇಮಿಗಳ ಮನರಂಜಿಸಿತು.
ಪಟ್ಟಣದ ಪುರಸಭೆ ಆವರಣದಲ್ಲಿ ಗುರುವಾರ ದಸರಾ ಉತ್ಸವ ಸಮಿತಿ ವತಿಯಿಂದ ಅಚ್ಚುಕಟ್ಟಾಗಿ ಹಮ್ಮಿಕೊಂಡಿದ್ದ ಕಬಡ್ಡಿ ಪಂದ್ಯಾವಳಿಗಳು ಜನಮನ ಸೆಳೆದವು.
ಪುರಸಭೆ ಅಧ್ಯಕ್ಷ ರಹೆಮಾನ್ ಪಟೇಲ ಯಲಗೋಡ ಉದ್ಘಾಟಿಸಿ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯೆ ಕುಳಿತು ಮೊಬೈಲ್‌ನಲ್ಲಿ ಹಲವು ಆಟಗಳನ್ನು ಆಡಿ ಆತ್ಮಸ್ಥೈರ್ಯ ಕಳೆದುಕೊಳ್ಳುವ ಬದಲು ಇಂಥಾ ಹೊರಜಗತ್ತಿನ ಬಯಲು ಪಂದ್ಯಾಟಗಳನ್ನು ಆಡುವ ಮೂಲಕ ಯುವ ಪೀಳಿಗೆ ಮತ್ತೊಬ್ಬರಿಗೆ ಮಾದರಿಯಾಗಬೇಕು
ಎಂದರು.
ದಸರಾ ಉತ್ಸವ ಸಮಿತಿ ಅಧ್ಯಕ್ಷ ಮಹಿಪಾಲರಡ್ಡಿ ಡಿಗ್ಗಾವಿ, ಸಮಿತಿ ಗೌರವಾಧ್ಯಕ್ಷ ಬಾಬುಗೌಡ ಮಾಲಿ ಪಾಟೀಲ, ಆದಿತ್ಯಾಗೌಡ ಪೊಲೀಸಪಾಟೀಲ, ಪುರಸಭೆ ಸದಸ್ಯ ರವಿ ಸೊನ್ನದ, ಆರೀಫ್ ಖಾಜಿ, ನರಸಿಂಹ ವಡ್ಡೆ, ರಂಗಪ್ಪ ವಡ್ಡರ, ಸಿಆರ್‌ಪಿ ಬಂದೇನವಾಜ್ ನಾಲತವಾಡ, ಸುಗುರಯ್ಯ ಇಂಡಿ, ಪರುಶುರಾಮ ನಾರಾಯಣಕರ್, ಅಜಯ ಚೌಧರಿ, ಡಿ.ಸಿ. ಪಾಟೀಲ, ಸಾಹೇಬಲಾಲ್ ನಾಶಿ ಇದ್ದರು.
ದೈಹಿಕ ಶಿಕ್ಷಣ ಶಿಕ್ಷಕ ರಾಜಅಹ್ಮದ್ ಹುಳಬುತ್ತಿ, ಶ್ರೀನಿವಾಸ, ರವಿ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು. ಗುಡದಯ್ಯ ದಾವಣಗೆರೆ ನಿರೂಪಿಸಿದರು. ಪಟ್ಟಣದ 14 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.