ADVERTISEMENT

ತಿಂಥಣಿಗೆ ಪಲ್ಲಕ್ಕಿ ಆಗಮನ

ಸುರಪುರದಿಂದ ಬಂದ ಕಾಳಿಕಾದೇವಿ, ಸೂಗೂರೇಶ್ವರ ಪಲ್ಲಕ್ಕಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 6:28 IST
Last Updated 30 ಜನವರಿ 2026, 6:28 IST
ತಿಂಥಣಿ ಜಾತ್ರಾ ಮಹೋತ್ಸವ ಅಂಗವಾಗಿ ಸುರಪುರದಿಂದ ಬಂದ ಪಲ್ಲಕ್ಕಿಯನ್ನು ಗ್ರಾಮಸ್ಥರು ಬರಮಾಡಿಕೊಂಡರು
ತಿಂಥಣಿ ಜಾತ್ರಾ ಮಹೋತ್ಸವ ಅಂಗವಾಗಿ ಸುರಪುರದಿಂದ ಬಂದ ಪಲ್ಲಕ್ಕಿಯನ್ನು ಗ್ರಾಮಸ್ಥರು ಬರಮಾಡಿಕೊಂಡರು   

ಕಕ್ಕೇರಾ: ತಿಂಥಣಿಯ ಮೌನೇಶ್ವರ ಜಾತ್ರೆ ಅಂಗವಾಗಿ ಸುರಪುರದ ಕಾಳಿಕಾದೇವಿ ದೇವಸ್ಥಾನದಿಂದ ಕಾಳಿಕಾದೇವಿ ಹಾಗೂ ಸೂಗೂರೇಶ್ವರ ಮೂರ್ತಿ ಹೊತ್ತ ಪಲ್ಲಕ್ಕಿ ತಿಂಥಣಿ ಗ್ರಾಮಕ್ಕೆ ಆಗಮಿಸಿದೆ.

ಗ್ರಾಮಸ್ಥರು ವಾದ್ಯಮೇಳದೊಂದಿಗೆ ಸಡಗರ-ಸಂಭ್ರಮದಿಂದ ಪಲ್ಲಕ್ಕಿಯನ್ನು ಬರಮಾಡಿಕೊಂಡರು. ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಹೋಗಲಾಯಿತು. ಅಲ್ಲಿಂದ ಮೌನೇಶ್ವರ ಪಲ್ಲಕ್ಕಿ ಜತೆ  ಗಂಗಾಸ್ನಾನಕ್ಕೆ ತೆರಳಿ ರಾತ್ರಿ ದೇವಸ್ಥಾನ ಪ್ರವೇಶ ಮಾಡಿದವು. 

ಮೌನೇಶ್ವರರ ಹಿನ್ನೆಲೆ: ತಿಂಥಣಿ ಮೌನೇಶ್ವರರು 16ನೇ ಶತಮಾನದಲ್ಲಿ ಹಿಂದೂ-ಮುಸ್ಲಿಮರ ಭಾವೈಕ್ಯಕ್ಕಾಗಿ ಅನೇಕ ಪವಾಡ, ಲೀಲೆ ಮಾಡಿದವರು. ದೇಶದ್ಯಾಂತ ಸಂಚರಿಸಿ, ವಚನಗಳಿಂದ ಲೋಕದ ಅಂಕು-ಡೊಂಕು ತಿದ್ದುವ ಮೂಲಕ ಹಿಂದೂ-ಮುಸ್ಲಿಮರಿಗೆ ದೇವರು ಒಬ್ಬನೇ ಎಂದು ತೋರಿಸಿದ ಮಹಾಪುರುಷ.

ADVERTISEMENT

ವಿಜಯಪುರದ ಅಲಿ ಆದಿಲಶಾಹಿ ಮೌನೇಶ್ವರರ ಪವಾಡದಿಂದ ಆಶ್ಚರ್ಯಚಕಿತನಾಗಿದ್ದ. ಹಿಂದೂ-ಮುಸ್ಲಿಮರ ಸಾಮರಸ್ಯದ ಕುರುಹುಗಳಾಗಿ ಹಸಿರು ಧ್ವಜ, ದೇವಸ್ಥಾನದ ಒಳಗೆ ಹಿಂದೂವಾಸ್ತು ವಿನ್ಯಾಸ, ಹೊರಗೆ ದರ್ಗಾ ರೂಪದ ಮಿಶ್ರಶೈಲಿಯ ವಿನ್ಯಾಸವಿರುವುದನ್ನು ಕಾಣಬಹುದು. ದೇವಸ್ಥಾನದಲ್ಲಿ ಇಂದಿಗೂ ಚಪ್ಗೊಡಲಿ, ಹೂಜಿ, ಪಾದುಕೆಗಳು ಪೂಜೆಗೊಳ್ಳುತ್ತಿವೆ.

ಮೌನೇಶ್ವರರು ದೇಶದ ಉದ್ದಗಲಕ್ಕೂ ಸಂಚರಿಸಿ ಅನೇಕ ಪವಾಡ, ಲೀಲೆ ಮಾಡುತ್ತಾ ವರವಿಯಿಂದ ಕೃಷ್ಣಾ ನದಿಯ ದಂಡೆಯ ಮೇಲೆ ಇರುವ ತಿಂಥಣಿಯ ಅಗ್ರಹಾರಕ್ಕೆ ಬಂದು ನೆಲೆಸುತ್ತಾರೆ.

ದಶಮಿಯಂದು ಸುರಪುರ ಕಾಳಿಕಾದೇವಿ ದೇವಸ್ಥಾನದಿಂದ ಬೆಳ್ಳಿಪಲ್ಲಕ್ಕಿ ತಿಂಥಣಿಗೆ ಬಂದಾಗ ಜಾತ್ರಾ ಕಾರ್ಯಕ್ರಮಗಳು ಪ್ರಾರಂಭವಾಗಿ ಸಾವಿರಾರು ಪುರವಂತರು ತಮ್ಮ ಸೇವೆ ಸಲ್ಲಿಸುತ್ತಾರೆ. 

ಮಾಘ ಶುದ್ಧ ದಶಮಿಯಿಂದ ಹುಣ್ಣಿಮೆವರೆಗೆ ಜರುಗುವ ಮಹಾಜಾತ್ರೆಯಲ್ಲಿ ಲಕ್ಷಾಂತರ ಭಕ್ತರು  ಆಗಮಿಸಿ ಮೌನೇಶ್ವರರ ದರ್ಶನ ಪಡೆಯುತ್ತಾರೆ. 

ತಿಂಥಣಿ ಮೌನೇಶ್ವರ ಜಾತ್ರೆ ಪ್ರತಿ ವರ್ಷದಂತೆ ವಿಜೃಂಭಣೆಯಿಂದ ಜರಲಿದ್ದು ಲಕ್ಷಾಂತರ ಭಕ್ತರು ಆಗಮಿಸಿ ಮೌನೇಶ್ವರ ದರ್ಶನ ಪಡೆದುಕೊಳ್ಳುತ್ತಾರೆ 
ಸಂಜೀವನಾಯಕ ತಿಂಥಣಿ ಸ್ಥಳೀಯ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.