
ಕಕ್ಕೇರಾ: ಪಟ್ಟಣದ ಮುಖ್ಯ ರಸ್ತೆಗಳು, ವಿವಿಧ ವಾರ್ಡ್‌ಗಳಿಗೆ ಹೋಗುವ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿದ್ದು, ಅಧಿಕಾರಿಗಳು, ಜನಪ್ರತಿನಿಧಿಗಳ ಜಾಣ ಕುರುಡುತನಕ್ಕೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಈಚೆಗೆ ಸುರಿದ ಮಳೆಯಿಂದ ರೈತರ ಬೆಳೆಗಳು ಹಾನಿಯಾಗಿರುವುದರ ಜೊತೆಗೆ, ಪಟ್ಟಣ ಸೇರಿದಂತೆ ಸುತ್ತಲಿನ ಮುಖ್ಯ ರಸ್ತೆಗಳಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಪಟ್ಟಣದ ವಿವಿಧ ವಾರ್ಡಗಳಲ್ಲಿ ಡಾಂಬರ್, ಸಿಸಿ ರಸ್ತೆಗಳೇ ಇಲ್ಲ. ಮಳೆ ಬಂದಾಗ ಅನೇಕ ವಿವಿಧ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುತ್ತಾರೆ ಮುಖಂಡ ಮುತ್ತಣ್ಣ ಕುರಿ.
ಏದಲಭಾವಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಮುಳ್ಳು ಕಂಟಿಗಳು ಬೆಳೆದಿದೆ. ಊರಿನ ಸಮೀಪ ಮಿನಿ ಸೇತುವೆಯಿದ್ದು, ಈಚೆಗೆ ಸುರಿದ ಮಳೆಯಿಂದ ರಸ್ತೆ ಕಾಣದಷ್ಟು ನೀರು ಹರಿಯುತ್ತಿತ್ತು. ತಗ್ಗು ಗುಂಡಿಗಳನ್ನು ಲೆಕ್ಕಿಸದೇ ಅದೇ ದಾರಿಯಲ್ಲಿ ಸಂಚಾರ ಮಾಡುವ ದುಸ್ತಿತಿ ಎದುರಾಗಿತ್ತು. ಸಂಬಂಧಿಸಿದ ಅಧಿಕಾರಿಗಳು ಮಿನಿ ಸೇತುವೆ ದುರಸ್ತಿಗೆ ಮುಂದಾಗಬೇಕು ಎಂದು ಹಣಮಂತ್ರಾಯ ಬಾಚಾಳ, ಅಮರೇಶ ಹಡಪದ ಒತ್ತಾಯಿಸಿದರು.
ಶಾಂತಪುರ ಕ್ರಾಸ್ ರಾಷ್ಟ್ರೀಯ ಹೆದ್ದಾರಿಯಲ್ಲಿದ್ದು, ರಸ್ತೆ ಅಗಲೀಕರಣವಿಲ್ಲದ ಕಾರಣ ಅನೇಕ ಅಪಘಾತಗಳಾಗುತ್ತಿದೆ. ಕೂಡಲೇ ಸಮಸ್ಯೆಗಳನ್ನು ಬಗೆಹರಿಸಬೇಕು ಎನ್ನುತ್ತಾರೆ ಗ್ರಾಮಸ್ಥರು.
ಇಲ್ಲಿನ ರಸ್ತೆಗಳು ಅಧೋಗತಿಗೆ ತಲುಪಿದೆ. ನಮ್ಮೂರು ಗಜೇಂದ್ರಗಡದಿಂದ ಇಲ್ಲಿನ ಮಾರುಕಟ್ಟೆಗೆ ಬರುವಾಗ ತಗ್ಗುಗುಂಡಿಯಿಂದಾಗಿ ಬಿದ್ದು, ಆಸ್ಪತ್ರೆಗೆ ದಾಖಲಾಗಿದ್ದೆ. ರಸ್ತೆಗಳ ದುಸ್ತಿತಿ ಮನೆಯಿಂದ ಹೊರಗೆ ಬರಬಾರದು ಎನ್ನುತ್ತಾರೆ ಚಿನ್ನಮ್ಮ ಕೊಟಗಿ ಗಜೇಂದ್ರಗಡ.