ಕಕ್ಕೇರಾ: ಪಟ್ಟಣದಲ್ಲಿ ಬಸ್ ನಿಲ್ದಾಣ, ಪೊಲೀಸ್ ಠಾಣೆ, ಡಿಗ್ರಿ ಕಾಲೇಜು, ವಿದ್ಯುತ್ ಸಮಸ್ಯೆ, ಚರಂಡಿ, ಬಾಲಕಿಯರ ಶಾಲೆ, ವಸತಿ ಶಾಲೆ, ತಾಲ್ಲೂಕು ಕೇಂದ್ರವನ್ನಾಗಿದಲು ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳ ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ಸಾಮೂಹಿಕ ಸಂಘಟನೆಗಳಿಂದ ಕಕ್ಕೇರಾ ಪಟ್ಟಣ ಬಂದ್ ಮಾಡಿ, ನಂತರ ಮನವಿ ಸಲ್ಲಿಸಲಾಯಿತು.
ವಿವಿಧ ಸಂಘಟನೆಗಳ ಮುಖಂಡರು ಮಾತನಾಡಿ, ಕಕ್ಕೇರಾ ಉಪ ಪೊಲೀಸ್ ಮೇಲ್ದರ್ಜೆಗೇರಿಸಬೇಕು. ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕು. ಬಡ ಮಕ್ಕಳ ಹಿತದೃಷ್ಟಿಯಿಂದ ಸರ್ಕಾರಿ ಪದವಿ ಪೂರ್ವ ವಿಜ್ಞಾನ ಕಾಲೇಜು ಸ್ಥಾಪನೆ ಮಾಡಬೇಕು ಎಂದು ಆಗ್ರಹಿಸಿದರು.
‘44 ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದುವ ಮೂಲಕ ರಾಜ್ಯದಲ್ಲಿಯೇ ಅತೀ ದೊಡ್ಡ ಗ್ರಾಮ ಪಂಚಾಯತಿಯಾಗಿದ್ದ ಕಕ್ಕೇರಾ ಪಟ್ಟಣವು. ಕಳೆದ 11ವರ್ಷಗಳಿಂದ ಪುರಸಭೆಯಾಗಿದ್ದರೂ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದಾಗಿ ಮತ್ತು ಅಧಿಕಾರಿಗಳ ಅಸಡ್ಡೆಯಿಂದಾಗಿ ನಮ್ಮ ಕಕ್ಕೇರಾ ಪಟ್ಟಣವು ತೀರಾ ಹಿಂದುಳಿದಿದೆ ಎಂದು ಆಕ್ರೋಶವ್ಯಕ್ತಪಡಿಸಿದರು.
ಪ್ರತಿಭಟನೆ ಸಮಯದಲ್ಲಿ ಸಂಚರಿಸುತ್ತಿದ್ದ ವಾಹನಗಳ ನಿಲ್ಲಿಸುವ ಕಾರಣಕ್ಕಾಗಿ ಕೆಲಕಾಲ ಪ್ರತಿಭಟನಾಕಾರರ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಗೊಂದಲ ಉಂಟಾದಾಗ ಹುಣಸಗಿ ಸಿಪಿಐ ಮಧ್ಯ ಪ್ರವೇಶಿಸಿ ಗೊಂದಲ ತಿಳಿಗೊಳಿಸಿದರು.
ಮೂರು ಗಂಟೆಗಳ ಕಾಲ ಪ್ರತಿಭಟನೆಗೆ ವ್ಯಾಪಾರಿಗಳು ಸ್ವತ: ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಯಲ್ಲಿ ಹಾಜರಿದ್ದರು.
ಮುಖ್ಯಮಂತ್ರಿಗಳಿಗೆ ಬರೆದ ಪತ್ರವನ್ನು ತಹಶೀಲ್ದಾರ್ ಮಲ್ಲಯ್ಯ ದಂಡು ಅವರಿಗೆ ಸಲ್ಲಿಸಲಾಯಿತು. ಉಪತಹಶೀಲ್ದಾರ ರೇವಪ್ಪ ತೆಗ್ಗಿನಮನಿ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ತೇಲಂಗಿ, ಕಂದಾಯ ನಿರೀಕ್ಷಕ ಮಲಕಾಜಪ್ಪ, ಗ್ರಾಮಾಡಳಿತಾಧಿಕಾರಿ ಬಸವರಾಜ ಶೆಟ್ಟಿ ಇದ್ದರು.
ಪ್ರತಿಭಟನೆಯಲ್ಲಿ ನಿಂಗಯ್ಯಗೌಡ ಬೂದಗುಂಪಿ, ರಮೇಶಶೆಟ್ಟಿ, ದೇವಿಂದ್ರಪ್ಪ ಬಳಿಚಕ್ರ, ಸುನೀಲ್ ಶೆಟ್ಟಿ, ಚಂದ್ರು ವಜ್ಜಲ್, ಬುಚ್ಚಪ್ಪನಾಯಕ, ತಿಪ್ಪಣ್ಣ ಜಂಪಾ, ಬೈಲಪುರಗೌಡ, ಸೋಮನಿಂಗಪ್ಪ ಪೂಜಾರಿ, ಚಂದ್ರು ಸಕ್ರಿ, ಮರೆಪ್ಪ ಕಾಂಗ್ರೆಸ್, ಚಂದ್ರು ನಡುಗೇರಿ, ಅಯೂಬ್, ಸಂಗಣ್ಣ ಹಡಗಲ್, ಮೌನೇಶ ಗುರಿಕಾರ, ಬಸವರಾಜ ಹೊಸಮನಿ, ಸೋಮು ಬಂದೊಡ್ಡಿ, ಪರ್ಮಣ್ಣ ಭಜಂತ್ರಿ, ಗೈಯಪ್ಪ ಚನ್ನಪಟ್ಟಣ, ಆನಂದ ಭೋಯಿ, ಪರಮಣ್ಣ ಜಂಪಾ, ಸೇರಿದಂತೆ ಅನೇಕರಿದ್ದರು.
ಡಿಎವೈಎಸ್‌ಪಿ ಜಾವೇದ್ ಇನಾಮದಾರ್, ಸಿಪಿಐಗಳಾದ ಉಮೇಶ, ರವಿಕುಮಾರ ನಾಯಿಕೋಡಿ, ಪಿಎಸ್ಐಗಳಾದ ಅಯ್ಯಪ್ಪ, ಚಂದ್ರಶೇಖರ, ಹಣಮಂತ್ರಾಯ ದೊರೆ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.