ADVERTISEMENT

ಸುರಪುರ | ಹಾಲುಮತ ಸಮಾಜಕ್ಕೆ ₹8.79 ಕೋಟಿ; ರಾಜೂಗೌಡ

​ಪ್ರಜಾವಾಣಿ ವಾರ್ತೆ
Published 26 ಜನವರಿ 2023, 5:31 IST
Last Updated 26 ಜನವರಿ 2023, 5:31 IST
ಸುರಪುರದಲ್ಲಿ ಶಾಸಕ ರಾಜೂಗೌಡ ಕುರುಬರಗಲ್ಲಿಯಲ್ಲಿ ನಿರ್ಮಿಸಿರುವ ಕನಕ ಭವನವನ್ನು ಬುಧವಾರ ಉದ್ಘಾಟಿಸಿದರು
ಸುರಪುರದಲ್ಲಿ ಶಾಸಕ ರಾಜೂಗೌಡ ಕುರುಬರಗಲ್ಲಿಯಲ್ಲಿ ನಿರ್ಮಿಸಿರುವ ಕನಕ ಭವನವನ್ನು ಬುಧವಾರ ಉದ್ಘಾಟಿಸಿದರು   

ಸುರಪುರ: ‘ಕನಕ ಭವನಕ್ಕೆ ₹1.25 ಕೋಟಿ ಸೇರಿ ಕ್ಷೇತ್ರದ ಹಾಲುಮತ ಸಮಾಜಕ್ಕೆ ಸೇರಿದ ವಿವಿಧ ಮಠ, ಮಂದಿರ, ಯಾತ್ರಿ ನಿವಾಸ, ಭವನಗಳಿಗೆ ನನ್ನ ಅಧಿಕಾರಾವಧಿಯಲ್ಲಿ ಇದುವರೆಗೂ ₹8.79 ಕೋಟಿ ಅನುದಾನ ಒದಗಿಸಿದ್ದೇನೆ’ ಎಂದು ಶಾಸಕ ರಾಜೂಗೌಡ ಹೇಳಿದರು.

ಕುರುಬರ ಗಲ್ಲಿಯಲ್ಲಿ ಪ್ರದೇಶಾಭಿವೃದ್ಧಿ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಕನಕ ಭವನವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಹುಣಸಗಿಯ ನೂತನ ಕನಕ ಭವನಕ್ಕೆ ₹2 ಕೋಟಿ ಮಂಜೂರಾಗಿದ್ದು ನಿರ್ಮಿತ ಕೇಂದ್ರದವರಿಗೆ ಕಾಮಗಾರಿ ವಹಿಸಲಾಗಿದೆ. ಕುರುಬರಗಲ್ಲಿಯ ಕನಕ ಭವನದ ಮೇಲ್ಮಹಡಿ ನಿರ್ಮಾಣಕ್ಕೆ ₹60 ಲಕ್ಷ ಮಂಜೂರಾಗಿದೆ. ಅಮೃತ್ ಜಲಧಾರೆ ಯೋಜನೆಯಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ₹2 ಸಾವಿರ ಕೋಟಿ ಅನುದಾನ ಕೊಡಿಸುವ ಕೆಲಸ ಮಾಡಿರುವೆ ಎಂದು ತಿಳಿಸಿದರು.

ADVERTISEMENT

₹210 ಕೋಟಿ ವೆಚ್ಚದ ಸುರಪುರ ಕುಡಿವ ನೀರಿನ ಕಾಮಗಾರಿ ಶೇ.90 ರಷ್ಟು ಪೂರ್ಣಗೊಂಡಿದ್ದು ಇನ್ನೂ 15-20 ದಿನಗಳಲ್ಲಿ ಸಂಪೂರ್ಣಗೊಳುತ್ತದೆ. ನಗರಸಭೆ ವ್ಯಾಪ್ತಿಯ ಪ್ರತಿಯೊಂದು ಮನೆಗಳಿಗೆ ನೀರು ಮುಟ್ಟಿಸಿದ ನಂತರವಷ್ಟೇ ಕಾಮಗಾರಿ ಉದ್ಘಾಟಿಸಲಾಗುವುದು ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಯಲ್ಲಪ್ಪ ಕುರುಕುಂದಿ, ಜಿವೈಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಸುರೇಶ್ ಸಜ್ಜನ್, ನಿಂಗಣ್ಣ ಚಿಂಚೋಡಿ, ನಗರಸಭೆ ಅಧ್ಯಕ್ಷೆ ಸುಜಾತಾ ಮಾತನಾಡಿದರು.

ಕುರುಬ ಸಮಾಜದ ವಿವಿಧ ಮಠಗಳ ಪೂಜ್ಯರು, ಸಮಾಜದ ಅಧ್ಯಕ್ಷ, ಪದಾಧಿಕಾರಿಗಳು, ಮುಖಂಡರು, ಪ್ರಮುಖರು ವೇದಿಕೆಯಲ್ಲಿದ್ದರು. ಕಕ್ಕೇರಾ ಪುರಸಭೆ ಸದಸ್ಯ ಮಲ್ಲು ದಂಡಿನ್ ಪ್ರಾಸ್ತಾವಿಕ ಮಾತನಾಡಿದರು. ರಂಗನಗೌಡ ಪಾಟೀಲ ದೇವಿಕೇರಾ ಸ್ವಾಗತಿಸಿದರು. ಮಾಳಪ್ಪ ಸಿದ್ದಾಪೂರ ನಿರೂಪಿಸಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.