ADVERTISEMENT

ತೆಲಂಗಾಣದ ‘ನೆರಡಗಂ’ನಲ್ಲಿ ಕನ್ನಡ ಡಿಂಡಿಮ

ತೆಲಂಗಾಣದಲ್ಲಿ ಕನ್ನಡ ಪ್ರೇಮ, ವಿರಕ್ತಮಠದ ಎಲ್ಲ ಕಾರ್ಯಕ್ರಮ ಕನ್ನಡಮಯ

ಬಿ.ಜಿ.ಪ್ರವೀಣಕುಮಾರ
Published 6 ಆಗಸ್ಟ್ 2021, 16:05 IST
Last Updated 6 ಆಗಸ್ಟ್ 2021, 16:05 IST
ಯಾದಗಿರಿ ಸಮೀಪದ ತೆಲಂಗಾಣ ರಾಜ್ಯದ ನಾರಾಯಣಪೇಟ ಜಿಲ್ಲೆಯ ಮಾಗನೂರ ಮಂಡಲಂನ ನೆರಡಗಂನಲ್ಲಿರುವ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠ
ಯಾದಗಿರಿ ಸಮೀಪದ ತೆಲಂಗಾಣ ರಾಜ್ಯದ ನಾರಾಯಣಪೇಟ ಜಿಲ್ಲೆಯ ಮಾಗನೂರ ಮಂಡಲಂನ ನೆರಡಗಂನಲ್ಲಿರುವ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠ   

ಯಾದಗಿರಿ: ಜಿಲ್ಲೆಯ ಗಡಿ ಗ್ರಾಮಗಳಲ್ಲಿ ‘ಪಲ್ಲಿ’ಗಳಿದ್ದು, ನವೆಂಬರ್‌ 1ಕ್ಕೆ ಮಾತ್ರ ‘ಹಳ್ಳಿ’ಗಳು ಮಾಡಿ ಎಂದು ಕನ್ನಡಪರ ಹೋರಾಟಗಾರರು ಒತ್ತಾಯಿಸುತ್ತಾರೆ. ಆದರೆ, ನೆರೆಯ ತೆಲಂಗಾಣ ರಾಜ್ಯದ ಮಠದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳುಕನ್ನಡಮಯವಾಗಿವೆ.

ನೆರೆಯ ತೆಲಂಗಾಣ ರಾಜ್ಯದ ನಾರಾಯಣಪೇಟ ಜಿಲ್ಲೆಯ ಮಾಗನೂರ ಮಂಡಲಂನ ನೆರಡಗಂನಲ್ಲಿರುವ ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠದಲ್ಲಿ ಕನ್ನಡವೇ ಮಾತೃಭಾಷೆಯಾಗಿದೆ. ಇಲ್ಲಿ ನಡೆಯುವ ಪ್ರವಚನ, ಶಿವಾನುಭವಗೋಷ್ಠಿ, ಆರ್ಚನೆ ಎಲ್ಲವೂ ಕನ್ನಡದಲ್ಲೇ ನಡೆಯುತ್ತವೆ.

ವಿಶೇಷವೆಂದರೆ ವಿರಕ್ತಮಠದಲ್ಲಿ ಕರ್ನಾಟಕ ರಾಜ್ಯದ ಪೀಠಾಧಿಪತಿ ಇದ್ದಾರೆ. ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠ ನೆರಡಗಂ ಮತ್ತು ವಡಗೇರಾ ತಾಲ್ಲೂಕಿನ ಕೋಡಾಲ್ ಶಾಖಾ ಮಠದ ಪಂಚಮ ಸಿದ್ಧಲಿಂಗ ಸ್ವಾಮೀಜಿ ಕನ್ನಡ ಡಿಂಡಿಮ ಮೊಳಗಿಸುತ್ತಿದ್ದಾರೆ.

ADVERTISEMENT

ಮಠವೂ ಭೌಗೋಳಿಕವಾಗಿ ತೆಲಂಗಾಣದಲ್ಲಿದ್ದರೂ ಕರ್ನಾಟಕದ ಭಕ್ತರೇ ಹೆಚ್ಚು ಇದ್ದಾರೆ. ಮಠದಲ್ಲಿರುವ ನಾಮಫಲಕಗಳು ಕನ್ನಡದಲ್ಲಿ ಇವೆ.

ಐವರು ಪೀಠಾಧಿಪತಿಗಳು:ಮಠ ಸ್ಥಾಪನೆಯಾಗಿ 300ಕ್ಕೂ ಹೆಚ್ಚು ವರ್ಷಗಳಾಗಿದ್ದು, ಇಲ್ಲಿಯವರೆಗೆ 5 ಪೀಠಾಧಿಪತಿಗಳು ಕಾರ್ಯಾಭಾರ ಮಾಡಿದ್ದಾರೆ. ಇದರಲ್ಲಿ ಮೂವರು ಕನ್ನಡದ ಪೀಠಾಧಿಪತಿಗಳಾಗಿರುವುದು ವಿಶೇಷವಾಗಿದೆ.1–7ರ ತನಕ ಆಂಗ್ಲ ಮಾಧ್ಯಮ ಶಾಲೆಯು ಮಠದ ವತಿಯಿಂದ ನಿರ್ವಹಿಸಲ್ಪಡುತ್ತಿದೆ.

ಹಿರಿಯರು ಕನ್ನಡ ಮಾತು:ಗ್ರಾಮದಲ್ಲಿ 50 ವರ್ಷಕ್ಕೂ ಹೆಚ್ಚು ವಯಸ್ಸಿನವರು ಕನ್ನಡದಲ್ಲೇ ವ್ಯವಹರಿಸುತ್ತಾರೆ. ಅಲ್ಲದೆ ಅವರ ಮಾತೃಭಾಷೆಯೂ ಕನ್ನಡವಾಗಿದೆ. ಇದರಿಂದ ಬೇರೆ ರಾಜ್ಯದಲ್ಲಿದ್ದೇವೆ ಎನ್ನುವ ಭಾವನೆಯೆ ಇಲ್ಲವೆಂದು ಇಲ್ಲಿಯ ಸ್ಥಳೀಯರು ಹೇಳುತ್ತಾರೆ.

ಅಲ್ಲದೇ ಇಲ್ಲಿನವರು ಕನ್ನಡ ಭಾಷೆ, ಓದು, ಬರಹ ಕೂಡ ಬಲ್ಲರು. ಈ ಹಿಂದೆ ಇಲ್ಲಿ ಕನ್ನಡ ಶಾಲೆಗಳು ಇದ್ದವು. ಕಾಲಂತರದಿಂದ ಈಗ ಕನ್ನಡ ಶಾಲೆಗಳು ಇಲ್ಲ.

ಶಾಖಾ ಮಠಗಳು:ಕೋಡಲಾ, ಬೋರಬಂಡಾ, ಮಾಚನೂರು, ಲಿಂಗೇರಿ, ಶಿವನೂರು, ಗುರ್ಜಲಾ, ಕೊಲ್ಲಂಪಲ್ಲಿ, ಇಡಜಿಂತ, ನೇರಂಡಂಬ, ರಾಯಚೂರು ಜಿಲ್ಲೆಯಲ್ಲಿ ರಾಮಗಡ್ಡಿ ಸೇರಿದಂತೆ ವಿವಿಧ ಕಡೆ ಶಾಖಾ ಮಠಗಳು ಇವೆ.

ಪ್ರತಿ ವರ್ಷ ಹೋಳಿ ಹುಣ್ಣಿಮೆ ಮೂರು ದಿನದ ನಂತರ ಇಲ್ಲಿ ಜಾತ್ರೆಯಾಗುತ್ತದೆ. ಎರಡು ರಾಜ್ಯಗಳ ಲಕ್ಷಾಂತರ ಭಕ್ತರು ಭಾಗವಹಿಸುತ್ತಾರೆ.

ಶ್ರಾವಣ ಮಾಸ, ಬಸವ ಜಯಂತಿ, ಸಾಮೂಹಿಕ ಮದುವೆ ಕಾರ್ಯಕ್ರಮಗಳನ್ನು ಮಠದಿಂದ ಮಾಡಿಕೊಂಡು ಬರಲಾಗಿದೆ. ಬಸವ ಜಯಂತಿಯಂದು ರಕ್ತದಾನ ಶಿಬಿರ, ಮುತೈದೆಯರಿಗೆ ಉಡಿತುಂಬುವ ಕಾರ್ಯಕ್ರಮ ನಡೆಯುತ್ತದೆ.

‘ಮಠಕ್ಕೆ ಹೈದರಾಬಾದ್‌ನವಾಬರು 800 ಎಕರೆ ಸೇರಿದಂತೆ ವಿವಿಧ ಭಕ್ತರು ಸುಮಾರು 5,000 ಎಕರೆ ಜಮೀನು ಮಠಕ್ಕೆ ದಾನವಾಗಿ ನೀಡಿದ್ದರು. ಉಳುವವನೆ ಭೂಒಡೆಯ ಕಾಯ್ದೆಯಡಿ ಎಲ್ಲ ಭೂಮಿ ಹೋಗಿದೆ.115ಗ್ರಾಮ,ನಾಲ್ಕು ಜಿಲ್ಲೆಗಳಲ್ಲಿ ಮಠದ ಜಾಗದ ಇತ್ತು. ಈಗ100 ಎಕರೆ ಭೂಮಿ ಮಾತ್ರ ಇದೆ ಎನ್ನುತ್ತಾರೆ’ ಸಿದ್ಧಲಿಂಗ ಸ್ವಾಮೀಜಿ.

ಮೋಟ್ನಳ್ಳಿ ಹಸನ ಸಾಬ್ ಅವರು ಮಠದ ಬಗ್ಗೆ ನೆರಡಪುರ ಪದ್ಯ ಬರೆದಿದ್ದಾರೆ ಎಂದು ಸ್ವಾಮೀಜಿ ಸ್ಮರಿಸುತ್ತಾರೆ.

ಮಠಕ್ಕೆ ಬಂದು 12 ವರ್ಷಗಳಾಗಿದೆ. ಶಿವಾನುಭವಗೋಷ್ಠಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಕನ್ನಡದಲ್ಲಿ ಮಾಡಲಾಗುತ್ತಿದೆ. ಇಲ್ಲಿ ಭಾಷೆ ಸಮಸ್ಯೆ ಬಂದಿಲ್ಲ.

- ಪಂಚಮ ಸಿದ್ಧಲಿಂಗ ಸ್ವಾಮೀಜಿ, ಪೀಠಾಧಿಪತಿ, ಪಶ್ಚಿಮಾದ್ರಿ ಸಂಸ್ಥಾನ ವಿರಕ್ತಮಠ ನೆರಡಗಂ

ಮಠದಲ್ಲಿ ಕನ್ನಡ ಅಸ್ಮಿತೆ ಅಡಗಿದೆ. ಕನ್ನಡಿಗರೆ ಕನ್ನಡವನ್ನು ಮರೆಯುವಾಗ ಪಕ್ಕದ ರಾಜ್ಯದಲ್ಲಿ ಕನ್ನಡಮಯವಾಗಿರುವುದು ಸಂತೋಷದ ಸಂಗತಿ.
- ನಂದಗೋಕುಲ ಪಟವಾರಿ, ಮಠದ ಭಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.