ADVERTISEMENT

‘ರ‍್ಯಾಗಿಂಗ್ ಮಾಡುವುದು ಅಪರಾಧ’

ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ ಅಭಿಮತ

​ಪ್ರಜಾವಾಣಿ ವಾರ್ತೆ
Published 19 ಜನವರಿ 2019, 20:09 IST
Last Updated 19 ಜನವರಿ 2019, 20:09 IST
ಯಾದಗಿರಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ ಉದ್ಘಾಟಿಸಿದರು
ಯಾದಗಿರಿಯ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ ಉದ್ಘಾಟಿಸಿದರು   

ಯಾದಗಿರಿ: ‘ರ‍್ಯಾಗಿಂಗ್ ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಅಪರಾಧ. ಕಾಲೇಜು ವಿದ್ಯಾರ್ಥಿಗಳು ಈ ಕೃತ್ಯದಲ್ಲಿ ಭಾಗಿಯಾಗಬಾರದು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಪ್ರಕಾಶ ಅರ್ಜುನ ಬನಸೊಡೆ ಹೇಳಿದರು.

ನಗರದ ಸರ್ಕಾರಿ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಹಮ್ಮಿಕೊಂಡಿದ್ದ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಒಂದು ದೇಶ ಪ್ರಗತಿ ಸಾಧಿಸಬೇಕಾದರೆ ಆ ರಾಷ್ಟ್ರದ ಯುವ ಸಮುದಾಯದ ಪಾತ್ರ ಬಹಳ ಮುಖ್ಯವಾಗುತ್ತದೆ. ದೇಶದ ಯುವಕರಲ್ಲಿ ಪ್ರಗತಿಗೆ ಪೂರಕವಾದ ಅಗಾಧ ಶಕ್ತಿ ಇದೆ. ಅಮೆರಿಕದಂತಹ ದೇಶಗಳ ಅಭಿವೃದ್ಧಿಯಲ್ಲಿಯೂ ಭಾರತೀಯ ಯುವಕರ ಶ್ರಮವಿದೆ. ಈ ನಿಟ್ಟಿನಲ್ಲಿ ಯುವಸಮುದಾಯ ಗುಣಮಟ್ಟದ ಶಿಕ್ಷಣ ಪಡೆದು ರಾಷ್ಟ್ರಕ್ಕೆ ಕೊಡುಗೆ ನೀಡಬೇಕು’ ಎಂದು ಅವರು ಸಲಹೆ ನೀಡಿದರು.

ADVERTISEMENT

ವಕೀಲ ಆರ್.ಎಸ್.ಪಾಟೀಲ ಮಾತನಾಡಿ,‘ರಾಷ್ಟ್ರ ವಿರೋಧಿ, ರಾಷ್ಟ್ರಕ್ಕೆ ಮಾರಕವಾಗುವ ಚಟುವಟಿಕೆಗಳ ಕುರಿತು ಕಾನೂನು ಸೇವೆಗಳ ಪ್ರಾಧಿಕಾರವು ಅರಿವು ಮೂಡಿಸುತ್ತಿದೆ. ಮನುಷ್ಯನಿಗೆ ಜನನದಿಂದ ಮರಣದವರೆಗೆ ಕಾನೂನಿನ ಅವಶ್ಯಕತೆಯಿದೆ. ಆದ್ದರಿಂದ ಕಾನೂನಿನ ಚೌಕಟ್ಟಿನಲ್ಲಿ ಯಾರು ಬದುಕುತ್ತಾರೆಯೊ ಅವರಿಗೆ ಸಮಾಜ ಗೌರವ ನೀಡುತ್ತದೆ’ ಎಂದರು.

ನಮ್ಮಲ್ಲಿ ಸಾಕಷ್ಟು ನೈಸರ್ಗಿಕ ಸಂಪತ್ತು ಇದೆ. ಆದರೆ, ಯುವ ಸಮುದಾಯದಲ್ಲಿ ಅದರ ಬಳಕೆಯ ಬಗ್ಗೆ ಹೆಚ್ಚಿನ ಅರಿವಿಲ್ಲ. ಮೆಡಿಕಲ್, ಇಂಜಿನೀಯರಿಂಗ್‌ನಂತಹ ಉನ್ನತ ಶಿಕ್ಷಣದ ಕಾಲೇಜುಗಳಲ್ಲಿ ಹೊಸದಾಗಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಹೆಸರಿನಲ್ಲಿ ಮಾನಸಿಕ ಮತ್ತು ದೈಹಿಕವಾಗಿ ಹಿಂಸೆ ನೀಡುವುದು ಒಂದು ಪಿಡುಗಾಗಿ ಪರಿಣಮಿಸಿದೆ. ಇಂತಹ ಪ್ರವೃತ್ತಿಯನ್ನು ಅಳವಡಿಸಿಕೊಳ್ಳ್ಳುತ್ತಿರುವುದು ನಮ್ಮ ದೇಶದ ಪ್ರಗತಿಗೆ ಮಾರಕವಾಗುತ್ತದೆ’ ಎಂದು ಅವರು ಹೇಳಿದರು.

ಪ್ರಭಾರ ಪ್ರಾಂಶುಪಾಲರಾದ ನಿರ್ಮಲಾ ಶಿರೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯಸಿ.ಎಸ್. ಮಾಲಿಪಾಟೀಲ್, ಜಿಲ್ಲಾ ವಕೀಲರ ಸಂಘದ ಉಪಾಧ್ಯಕ್ಷ ಸುರೇಶ ಬಾಬು ಕಲಾಲ್, ಕಾರ್ಯದರ್ಶಿ ಶಾಂತಪ್ಪ ಎಸ್.ಖಾನಹಳ್ಳಿ, ಜಂಟಿ ಕಾರ್ಯದರ್ಶಿ ಭೀಮರಾಯ ಅಚೋಲಾ ಇದ್ದರು.

ವಿದ್ಯಾರ್ಥಿನಿ ಸುರಭಿ ಪ್ರಾರ್ಥಿಸಿದರು. ಉಪನ್ಯಾಸಕ ಚಂದ್ರಕಾಂತ ಹಂಪಿನ್ ಸ್ವಾಗತಿಸಿದರು. ಉಪನ್ಯಾಸಕ ದಶರಥ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.