ADVERTISEMENT

ಗುರುಮಠಕಲ್‌ ಕ್ಷೇತ್ರ ಸ್ಥಿತಿ–ಗತಿ: ಜೆಡಿಎಸ್‌ ಅಭ್ಯರ್ಥಿ ಎದುರಾಳಿ ಯಾರು?

ಗುರುಮಠಕಲ್‌; ಜೆಡಿಎಸ್‌ ಅಭ್ಯರ್ಥಿ ಘೋಷಣೆ, ಕಾಂಗ್ರೆಸ್‌, ಬಿಜೆಪಿಯಲ್ಲಿ ಗೊಂದಲ

ಬಿ.ಜಿ.ಪ್ರವೀಣಕುಮಾರ
Published 11 ಫೆಬ್ರುವರಿ 2023, 19:31 IST
Last Updated 11 ಫೆಬ್ರುವರಿ 2023, 19:31 IST
ನಾಗನಗೌಡ ಕಂದಕೂರ
ನಾಗನಗೌಡ ಕಂದಕೂರ   

ಯಾದಗಿರಿ: ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಗುರುಮಠಕಲ್‌ ಮತಕ್ಷೇತ್ರ 2018ರ ಚುನಾವಣೆಯಲ್ಲಿ ತೆನೆಹೊತ್ತ ಮಹಿಳೆ ಪಾಲಾಗಿದ್ದು, ಈ ಬಾರಿಯೂ ಮತ್ತೊಮ್ಮೆ ಜಯದ ನಗೆ ಬೀರಲು ಸಿದ್ಧತೆ ಮಾಡಿಕೊಂಡಿದೆ.

ನಾಗನಗೌಡ ಕಂದಕೂರ ಜಿಲ್ಲೆಯ ಏಕೈಕ ಜೆಡಿಎಸ್‌ ಶಾಸಕರಾಗಿದ್ದಾರೆ. ಗುರುಮಠಕಲ್‌ ಮತಕ್ಷೇತ್ರವು ಗುರುಮಠಕಲ್ ಮತ್ತು ಯಾದಗಿರಿ ತಾಲ್ಲೂಕಿನ ಗ್ರಾಮಗಳನ್ನು ಹೊಂದಿದೆ. 2018ರ ಚುನಾವಣೆಯಲ್ಲಿ ಗುರುಮಠಕಲ್‌ ಮತಕ್ಷೇತ್ರದಲ್ಲಿ 12 ಮಂದಿ ಸ್ಪರ್ಧಿಸಿದ್ದರು.

ಜೆಡಿಎಸ್‌ ಅಭ್ಯರ್ಥಿ ಬದಲು: ಶಾಸಕ ನಾಗನಗೌಡ ಕಂದಕೂರ 2018ರಲ್ಲಿ ಮೊದಲ ಬಾರಿಗೆ ಜೆಡಿಎಸ್‌ ಶಾಸಕರಾಗಿ ಆಯ್ಕೆಯಾಗಿದ್ದು, ಈ ಬಾರಿ ಸ್ಪರ್ಧಿಸಲು ಆರೋಗ್ಯದ ಕಾರಣವೊಡ್ಡಿದ್ದು ಶಾಸಕರ ಬದಲಾಗಿ ಅವರ ಪುತ್ರ ಶರಣಗೌಡ ಕಂದಕೂರ ಅವರನ್ನು ಸಂಭನೀಯ ಅಭ್ಯರ್ಥಿ ಎಂದು ಘೋಷಿಸಿದೆ. ಈಗಾಗಲೇ ಕ್ಷೇತ್ರದಲ್ಲಿ ಕುರುಬ, ಎಸ್‌ಸಿ ಸಮಾಜದ ಸಭೆ, ಸಮಾರಂಭ ಮಾಡಿದ್ದು, ಮುಂದಿನ ದಿನಗಳಲ್ಲಿ ಪಂಚರತ್ನ ಯಾತ್ರೆಗಾಗಿ ಸಿದ್ಧತೆ ನಡೆದಿದೆ. ಯುವ ಮುಖಂಡ ಶರಣಗೌಡ ಕಂದಕೂರ ಈಗಾಗಲೇ ಕ್ಷೇತ್ರಾದ್ಯಂತ ಗ್ರಾಮಗಳಲ್ಲಿ ಓಡಾಡಿ, ಯುವಕಜನರನ್ನು ಜೆಡಿಎಸ್‌ಗೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ.

ADVERTISEMENT

ಕಾಂಗ್ರೆಸ್‌ನಲ್ಲಿ ಆಕಾಂಕ್ಷಿಗಳ ದಂಡು: ಗುರುಮಠಕಲ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ 8 ಮಂದಿ ಟಿಕೆಟ್‌ಗಾಗಿ ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಕೋಲಿ ಸಮಾಜ, ಹಿಂದುಳಿದ, ರೆಡ್ಡಿ ಸಮಾಜದಿಂದ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಲಾಗಿದೆ. ಆದರೆ, ಕಾಂಗ್ರೆಸ್‌ನಲ್ಲಿ ಪಕ್ಷ ಸಂಘಟನೆ ಹೇಳಿಕೊಳ್ಳುವ ಮಟ್ಟಿಗೆ ಇಲ್ಲ. ಯಾದಗಿರಿ, ಗುರುಮಠಕಲ್‌ ಮತಕ್ಷೇತ್ರದಲ್ಲಿ ಡಜನ್‌ಗಟ್ಟಲೇ ಟಿಕೆಟ್‌ ಆಕಾಂಕ್ಷಿಗಳಿದ್ದರೆ ಪಕ್ಷ ಸಂಘಟನೆ ಮಾತ್ರ ಸೊರಗಿದೆ ಎಂದು ಆ ಪಕ್ಷದ ಮುಖಂಡರೆ ಒಪ್ಪಿಕೊಳ್ಳುತ್ತಾರೆ.

ಬಿಜೆಪಿಯಲ್ಲಿ ಮಹಿಳೆಯರು ಆಕಾಂಕ್ಷಿಗಳು: ಮತಕ್ಷೇತ್ರದಲ್ಲಿ ಬಿಜೆಪಿ ಯಿಂದ ಮಹಿಳೆಯರು ಆಕಾಂಕ್ಷಿಗಳಾಗಿದ್ದಾರೆ. ನಾಗರತ್ನ ಕುಪ್ಪಿ, ಲಲಿತಾ ಅನಪುರ ಪ್ರಬಲ ಆಕಾಂಕ್ಷಿಗಳು ಎಂದು ಹೇಳಿ ಕೊಂಡಿದ್ದಾರೆ. ಕಾಡಾ ಮಾಜಿ ಅಧ್ಯಕ್ಷ ಗಿರೀಶ್‌ ಮಟ್ಟೆಣ್ಣನವರ್‌ ತಮಗೆ ಟಿಕೆಟ್‌ ನೀಡಬೇಕು ಎಂದು ಕೋರಿದ್ದಾರೆ. ಪರಿಷತ್‌ ಸದಸ್ಯ ಬಾಬುರಾವ ಚಿಂಚನಸೂರ ಬಿಜೆಪಿ ಟಿಕೆಟ್‌ ತಮ್ಮ ಜೇಬಿನಲ್ಲಿದೆ ಎಂದು ಹಲವಾರು ಬಾರಿ ಹೇಳಿಕೊಂಡಿದ್ದಾರೆ.

ಕ್ಷೇತ್ರದಲ್ಲಿ ನದಿಗಳಿಲ್ಲ. ಗುಳೆ ಹೋಗುವುದು ಇಲ್ಲಿ ಸಾಮಾನ್ಯ. ತೆಲಂಗಾಣ ಗಡಿ ಹೊಂದಿರುವುದರಿಂದ ಗಡಿ ಗ್ರಾಮಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಅನಕ್ಷರತೆ, ಕಾರ್ಖಾನೆಗಳಿಲ್ಲರುವುದು ಗುಳೆಗೆ ಪ್ರಮುಖ ಕಾರಣವಾಗಿದೆ. ಕಡೇಚೂರು– ಬಾಡಿಯಾಳ ಪ್ರದೇಶದಲ್ಲಿ ಕೈಗಾರಿಕಾ ವಲಯ ಸ್ಥಾಪನೆಗೆ ಸಾವಿರಾರು ಎಕರೆ ಭೂಮಿ ವಶಪಡಿಸಿಕೊಂಡಿದ್ದರೂ ಸ್ಥಾಪನೆಯಾದ ಕೆಲ ಕಂಪನಿಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶವಿಲ್ಲ.

ಕೋಲಿ, ಹಿಂದುಳಿದ ಸಮಾಜದ ಹೆಚ್ಚು ಮತ

ಗುರುಮಠಕಲ್‌ ಮತಕ್ಷೇತ್ರದಲ್ಲಿ ಕೋಲಿ ಸಮಾಜ, ಇತರೆ ಹಿಂದುಳಿದ ವರ್ಗಗಳ ಮತಗಳು ಜಾಸ್ತಿ ಇವೆ.

2008ರಲ್ಲಿ ಕ್ಷೇತ್ರ ಮರುವಿಂಗಡಣೆ ನಂತರ ಕಾಂಗ್ರೆಸ್‌, ಬಿಜೆಪಿ ಕೋಲಿ ಸಮಾಜಕ್ಕೆ ಟಿಕೆಟ್ ನೀಡುತ್ತಾ ಬಂದಿವೆ. ಅಲ್ಪಸಂಖ್ಯಾತರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಯಾದಗಿರಿ ತಾಲ್ಲೂಕಿನ ಸೈದಾಪುರ, ಬಳಿಚಕ್ರ ಹೋಬಳಿ ವ್ಯಾಪ್ತಿಯ ಗ್ರಾಮಗಳನ್ನು ಕ್ಷೇತ್ರ ಹೊಂದಿದೆ.

ಚಿಂಚನಸೂರ ನಡೆ ಕುತೂಹಲ

ವಿಧಾನ ಪರಿಷತ್‌ ಸದಸ್ಯ ಮತ್ತು ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ ಚಿಂಚನಸೂರ ಸದ್ಯ ಬಿಜೆಪಿಯಲ್ಲಿದ್ದು, ಆ ಪಕ್ಷ ತೊರೆಯುತ್ತಾರೆ ಎನ್ನುವ ಗುಸುಗುಸು ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಚುನಾವಣೆ ವೇಳೆ ಕಾಂಗ್ರೆಸ್‌ ಸೇರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕಳೆದ ಬಾರಿ ಚುನಾವಣೆ ಹತ್ತಿರವಿದ್ದಾಗ ಕ್ಷೇತ್ರಾದ್ಯಂತ ಸುತ್ತಾಡಿದ್ದರು. ಈ ಬಾರಿ ಚುನಾವಣೆ ಸಮೀಪಿಸುತ್ತಿದ್ದರೂ ಕ್ಷೇತ್ರದಲ್ಲಿ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದಾರೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.

ಕಾಂಗ್ರೆಸ್‌ನಲ್ಲಿ ಹಿರಿಯರನ್ನು ಕಡೆಗಣಿಸಲಾಗುತ್ತಿದೆ. ಕಾಂಗ್ರೆಸ್‌ ಸೋಲಿಸಬೇಕು ಎಂಬ ದೃಷ್ಟಿಯಿಂದ 2018ರಲ್ಲಿ ಸೋತ ಬಳಿಕ ಬಿಜೆಪಿ ಸೇರಿದ್ದರು. ಐದು ಬಾರಿ ಶಾಸಕರಾಗಿರುವ ಇವರು ಸಪ್ತಖಾತೆಗಳ ಸಚಿವ ಎಂದೇ ಖ್ಯಾತಿ ಪಡೆದಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ನಮ್ಮ ಮಾತು ಅಧಿಕಾರಿಗಳು ಕೇಳುತ್ತಿಲ್ಲ ಎಂದು ಹಲವಾರು ಬಾರಿ ಕೆಡಿಪಿ ಸಭೆಗಳಲ್ಲಿ ಅಧಿಕಾರಿಗಳ ವಿರುದ್ಧ ಅಕ್ರೋಶ ವ್ಯಕ್ತಪಡಿಸಿದ್ದರು.

ಎಂಎಲ್‌ಸಿಗಿಂತ ಶಾಸಕರಾಗಬೇಕು ಎನ್ನುವುದು ಅವರ ಇಚ್ಛೆ ಆಗಿದೆ. ಹೀಗಾಗಿ ಬಿಜೆಪಿ ಬಿಡುತ್ತಾರೆ ಎಂದು ಕ್ಷೇತ್ರದ ಜನ ಆಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್‌ ಸೇರುತ್ತಾರೆ ಅಥವಾ ಬಿಜೆಪಿಯಲ್ಲೇ ಇರುತ್ತಾರೆ ಎನ್ನುವ ಕುತೂಹಲ ಮನೆ ಮಾಡಿದೆ.

ಗುರುಮಠಕಲ್‌

ಗುರುಮಠಕಲ್‌ ಮತಕ್ಷೇತ್ರ

ಹಾಲಿ ಶಾಸಕ: ನಾಗನಗೌಡ ಕಂದಕೂರ (ಜೆಡಿಎಸ್‌)

ಮತದಾರರ ವಿವರ

ಪುರುಷರು ಮಹಿಳೆಯರು ಒಟ್ಟು
1,20,852 1,21,382 2,42,234

2018ರ ಚುನಾವಣಾ ಫಲಿತಾಂಶ

ಜೆಡಿಎಸ್‌ ಕಾಂಗ್ರೆಸ್‌ ಬಿಜೆಪಿ
79,627 55,147 8,995

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.