ADVERTISEMENT

ಕೆಡಿಪಿ ಮಾಸಿಕ ಸಭೆ: ವೈದ್ಯ ವರದಿ ವಿಳಂಬ; ತೆಗ್ಗಳ್ಳಿಗೆ ನೀರಿಲ್ಲ!

ಡಿಎಚ್‌ಒ ಡಾ.ಹಬೀಬ್‌ ಉಸನ್ಮಾನ್‌ ಪಟೇಲ್ ಅವರಿಗೆ ಅಧ್ಯಕ್ಷರಿಂದ ತರಾಟೆ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2019, 13:51 IST
Last Updated 11 ಫೆಬ್ರುವರಿ 2019, 13:51 IST
ಯಾದಗಿರಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಡಿಪಿಐ ಇಲಾಖೆಯ ಪ್ರಗತಿ ವಿವರಿಸಿದರು
ಯಾದಗಿರಿಯಲ್ಲಿ ಸೋಮವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡಿಡಿಪಿಐ ಇಲಾಖೆಯ ಪ್ರಗತಿ ವಿವರಿಸಿದರು   

ಯಾದಗಿರಿ: ‘ಮುದನೂರು ತೆರೆದಬಾವಿಯ ವಾಲ್ವ್‌ಗೆ ವಿಷ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರು ಪರೀಕ್ಷಾರ್ಥ ವರದಿ ಬರುವವರೆಗೂ ಮುದನೂರು ಮತ್ತು ತೆಗ್ಗಳ್ಳಿ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವಂತಿಲ್ಲ’ ಎಂದು ಗ್ರಾಮೀಣ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ರಾಜ್‌ಕುಮಾರ್ ಪತ್ತಾರ್‌ ಸೋಮವಾರ ಜಿಲ್ಲಾ ಪಂಚಾಯಿತಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷರ ಗಮನಕ್ಕೆ ತರುತ್ತಿದ್ದಂತೆ ಸಭೆ ಗಂಭೀರ ಚರ್ಚೆಯತ್ತ ತೆರೆದುಕೊಂಡಿತು.

‘ತೆಗ್ಗಳ್ಳಿ ಪ್ರಕರಣ ಘಟಿಸಿ ಎಷ್ಟು ದಿನಗಳಾಗಿವೆ? ಇದುವರೆಗೂ ನೀರು ಮಾದರಿ ಪರೀಕ್ಷಾ ವರದಿ ಏಕೆ ಬಂದಿಲ್ಲ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ರಾಜಶೇಖರಗೌಡ ಮಾಲಿಪಾಟೀಲ ಡಿಎಚ್‌ಒ ಡಾ.ಹಬೀಬ್‌ ಉಸನ್ಮಾನ್‌ ಪಟೇಲ್ ಅವರನ್ನು ಪ್ರಶ್ನಿಸಿದರು.

ಡಿಎಚ್‌ಒ ಡಾ.ಹಬೀಬ್‌,‘ವರದಿ ತರಿಸಿಕೊಳ್ಳುವುದು ಪೊಲೀಸರ ಕರ್ತವ್ಯ’ ಎಂದು ಉತ್ತರಿಸುತ್ತಿದ್ದಂತೆ ಅಧ್ಯಕ್ಷ ರಾಜಶೇಖರಗೌಡ ಮಾಲಿಪಾಟೀಲ,‘ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೇಕಾದ ವರದಿ ಪೊಲೀಸರು ಪಡೆದುಕೊಳ್ಳುತ್ತಾರೆ. ಶವ ಪರೀಕ್ಷಾ ವರದಿ ಬಂದಿಲ್ಲವೇ? ವರದಿ ಏಕೆ ವಿಳಂಬವಾಗಿದೆ ಎಂಬುದಾಗಿ ಇಲಾಖೆ ಮುಖ್ಯಸ್ಥರಾಗಿ ನೀವೇನು ಮಾಡುತ್ತಿದ್ದೀರಿ ಎಂದು ಡಿಎಚ್‌ಒ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡರು.

ADVERTISEMENT

‘ವೈದ್ಯ ವರದಿ ಬರುವವರೆಗೂ ಗ್ರಾಮಗಳಿಗೆ ನೀರು ಪೂರೈಕೆ ಮಾಡುವಂತಿಲ್ಲ ಎಂಬುದಾಗಿ ಜಿಲ್ಲಾಡಳಿತ ಅಧಿಕಾರಿಗಳಿಗೆ ಎಚ್ಚರಿಕೆ ಸೂಚಿಸಿದೆ. ಈ ಹಿಂದಿನ ಸಾಮಾನ್ಯ ಸಭೆಯಲ್ಲಿಯೇ ನಿಮಗೆ ಸಲಹೆ ನೀಡಿದ್ದೇವೆ. ಆದರೂ, ನೀವು ಏಕೆ ಗಂಭೀರವಾಗಿ ತೆಗೆದುಕೊಂಡಿಲ್ಲ. ಇದೇ ರೀತಿ ಕರ್ತವ್ಯ ನಿರ್ಲಕ್ಷ್ಯ ತೋರಿಸಿದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲೆಯಲ್ಲಿ ಪ್ರತಿ ವರ್ಷಕ್ಕಿಂತ ಈ ಬಾರಿ ಬರದ ತೀವ್ರತೆ ಹೆಚ್ಚಿದೆ. ಫೆಬ್ರುವರಿ ಸೇರಿದಂತೆ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳಲ್ಲಿ ಕುಡಿಯುವ ನೀರಿನ ತೊಂದರೆ ಆಗಬಹುದು. ಆದ್ದರಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.

15 ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಕೆ:
ಜಿಲ್ಲೆಯಾದ್ಯಂತ 246 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉಂಟಾಗಬಹುದು ಎಂದು ಅಂದಾಜಿಸಲಾಗಿದೆ. ಕುಡಿಯುವ ನೀರು ಪೂರೈಕೆಗೆ ಹಣದ ಕೊರತೆ ಇಲ್ಲ. ಪ್ರಸ್ತುತ ಸುರಪುರ ತಾಲ್ಲೂಕಿನ 11 ಗ್ರಾಮ, ಶಹಾಪುರ ತಾಲ್ಲೂಕಿನ 4 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಎಂಜಿನಿಯರ್ ರಾಜ್‌ಕುಮಾರ್ ಪತ್ತಾರ್ ಮಾಹಿತಿ ನೀಡಿದರು.

ಗ್ರಾಮೀಣ ಪ್ರದೇಶದ ಆಸ್ಪತ್ರೆ, ಶಾಲೆ, ವಸತಿನಿಲಯ, ಅಂಗನವಾಡಿ ಕೇಂದ್ರಗಳು ಸೇರಿದಂತೆ ಆಯಾ ಇಲಾಖೆಗಳ ವ್ಯಾಪ್ತಿಯಲ್ಲಿ ಬರುವ ಕಚೇರಿಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಪ್ರಾಮಾಣಿಕವಾಗಿ ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿ ಅರಿತು ಕೆಲಸ ಮಾಡಬೇಕು. ಇದರಿಂದ ಅಂಕಿ-ಅಂಶಗಳ ವರದಿ ಮತ್ತು ಭೌತಿಕ ಪ್ರಗತಿ ಎರಡೂ ತಾಳೆಯಾಗುತ್ತವೆ. ಅಲ್ಲದೆ, ಸಾರ್ವಜನಿಕರಿಗೆ ಸರಿಯಾದ ಸೌಲಭ್ಯ ಒದಗಿಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು ಸಲಹೆ ನೀಡಿದರು.

ಜಿಲ್ಲೆಯಲ್ಲಿ ವಿದ್ಯಾರ್ಥಿ ವಸತಿನಿಲಯಗಳ ಬೇಡಿಕೆ ಇದೆ. ಅದರಂತೆ ಕ್ರಮ ಕೈಗೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಎಂ.ಎಸ್.ಅಲ್ಲಾಬಕಷ ಅವರಿಗೆ ಸೂಚಿಸಿದ ಜಿ.ಪಂ ಅಧ್ಯಕ್ಷರು, ಜಿಲ್ಲೆಯಲ್ಲಿ ಮೀನುಗಾರಿಕೆಗೆ ಉತ್ತೇಜನ ನೀಡಬೇಕು. ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ, ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಗಳ ಅಡಿಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕು ’ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಅಕ್ಷರ ದಾಸೋಹ ಶಿಕ್ಷಣಾಧಿಕಾರಿ ಹೊಸಮನಿ,‘ ಅಕ್ಷರ ದಾಸೋಹ ಮತ್ತು ಕ್ಷೀರಭಾಗ್ಯ ಯೋಜನೆಯಡಿ 2018–19ನೇ ಸಾಲಿನಲ್ಲಿ ಜಿಲ್ಲೆಗೆ ನಿಗದಿಪಡಿಸಿದ 55.63 ಕೋಟಿ ಅನುದಾನದಲ್ಲಿ ₹ 41.75 ಕೋಟಿ ಬಿಡುಗಡೆಯಾಗಿದೆ. ಈಗಾಗಲೇ ₹ 22.78 ಕೋಟಿ ಖರ್ಚಾಗಿದೆ’ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 1023 ದೇವದಾಸಿಯರಿದ್ದು, ಅವರಲ್ಲಿ 1010 ಜನರಿಗೆ ವಿವಿಧ ಯೋಜನೆಗಳಡಿ ಸೌಲಭ್ಯ ಕಲ್ಪಿಸಲಾಗಿದೆ. 837 ಜನರಿಗೆ ಮಾಸಾಶನ ನೀಡಲಾಗುತ್ತಿದೆ ಎಂಬುದಾಗಿ ದೇವದಾಸಿ ಪುನರ್ವಸತಿ ಯೋಜನಾಧಿಕಾರಿ ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಗಿರಿಜಮ್ಮ ಸದಾಶಿವಪ್ಪಗೌಡ ರೊಟ್ನಡಗಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವಸಂತ ವಿ.ಕುಲಕರ್ಣಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಗುರುನಾಥ ಗೌಡಪ್ಪನೋರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.