
ಕೆಂಭಾವಿ ಪುರಸಭೆಗೆ ಮಂಗಳವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾದರು.
ಕೆಂಭಾವಿ: ಪಟ್ಟಣದ ಪುರಸಭೆಗೆ ಎರಡನೆ ಅವಧಿಗೆ ಅಧ್ಯಕ್ಷೆಯಾಗಿ ನಿರೀಕ್ಷೆಯಂತೆ 11ನೇ ವಾರ್ಡಿನ ಕಾಂಗ್ರೆಸ್ ಸದಸ್ಯೆ ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ ಅವರು ಅವಿರೋಧವಾಗಿ ಆಯ್ಕೆಯಾದರು.
ಮಂಗಳವಾರ ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ ಅವರು ಒಬ್ಬರೆ ನಾಮಪತ್ರ ಸಲ್ಲಿಸಿದ್ದರಿಂದ ಮಧ್ಯಾಹ್ನದ ನಂತರ ಪ್ರಿಯಾ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಶ್ರೀಧರ ಗೊಟೂರ ಘೋಷಣೆ ಮಾಡಿದರು.
ಪಕ್ಷೇತರರಾಗಿ ಸ್ಪರ್ಧಿಸಿ ಅವಿರೋಧವಾಗಿ ಆಯ್ಕೆಯಾಗಿದ್ದ ಪ್ರಿಯಾ ಅವರು ಬದಲಾದ ರಾಜಕೀಯ ವಿದ್ಯಮಾನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡು ಮೊದಲ ಅವಧಿಯಲ್ಲಿ ಕಾಂಗ್ರೆಸ್‌ಗೆ ತಮ್ಮ ಬೆಂಬಲ ಸೂಚಿಸಿದ್ದರು. ಬಿಸಿಎ ಗೆ ಮೀಸಲಿರುವ ಅಧ್ಯಕ್ಷರ ಗಾದಿಗೆ ಮೊದಲ ಒಂಬತ್ತು ತಿಂಗಳ ಅವಧಿಗೆ ರಹೆಮಾನ ಪಟೇಲ ಯಲಗೋಡ ಅಧ್ಯಕ್ಷರಾಗಿದ್ದು ನಂತರ ಅವರಿಂದ ತೆರವಾದ ಸ್ಥಾನಕ್ಕೆ ಮಂಗಳವಾರ ಚುನಾವಣೆ ನಡೆದು ಪ್ರಿಯಾ ರಾಮನಗೌಡ ಅಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು.
ಸಂಭ್ರಮಾಚರಣೆ: ಪ್ರಿಯಾ ರಾಮನಗೌಡ ಪೊಲೀಸ್ ಪಾಟೀಲ ನೂತನ ಅಧ್ಯಕ್ಷರಾಗುತ್ತಿದ್ದಂತೆ ಇತ್ತ ಪುರಸಭೆ ಹೊರಗೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿದ್ಧನಗೌಡ ಪೊಲೀಸ್ ಪಾಟೀಲ, ವಾಮನರಾವ ದೇಶಪಾಂಡೆ, ಆಶ್ರಯ ಸಮಿತಿ ಅಧ್ಯಕ್ಷ ಶರಣಬಸ್ಸು ಡಿಗ್ಗಾವಿ, ಶಿವಮಾಂತ ಚಂದಾಪುರ, ಬಾಪುಗೌಡ ಪಾಟೀಲ ಹುಣಸಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮಹಿಪಾಲರೆಡ್ಡಿ ಡಿಗ್ಗಾವಿ, ಶಾಂತಗೌಡ ನೀರಲಗಿ, ವಾಯ್.ಟಿ ಪಾಟೀಲ, ಖಾಜಾಪಟೇಲ ಕಾಚೂರ, ಸಾಹೇಬಲಾಲ ಆಂದೇಲಿ, ರಾಮನಗೌಡ ಪೊಲೀಸ್ ಪಾಟೀಲ, ಸಿದ್ದನಗೌಡ ಮಾಲಿಪಾಟೀಲ ಐಕೂರ, ರಂಗಪ್ಪ ವಡ್ಡರ್ ಸೇರಿದಂತೆ ಪುರಸಭೆ ಸದಸ್ಯರು, ಪಕ್ಷದ ಹಲವು ಕಾರ್ಯಕರ್ತರು, ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.