ಕೆಂಭಾವಿ: ಇಬ್ಬರು ಸಹೋದರರು ಸಾವಿನಲ್ಲೂ ಒಂದಾದ ಹೃದಯ ವಿದ್ರಾವಕ ಘಟನೆ ಸೋಮವಾರ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ನೂರುದ್ದೀನ್ ಪೇಶಮಾಮ ಅವರ ಪುತ್ರರಾದ ಶಂಶುದ್ದೀನ್ ಪೇಶಮಾಮ (45) ಹಾಗೂ ಇರ್ಫಾನ್ ಪೇಶಮಾಮ (36) ಮೃತಪಟ್ಟಿದ್ದಾರೆ.
ಹಿರಿಯ ಸಹೋದರ ಶಂಶುದ್ದೀನ್ ಅವರಿಗೆ ಹಠಾತ್ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಪ್ರಾಣಪಕ್ಷಿ ಹಾರಿ ಹೋಗಿದೆ ಎಂದು ವೈದ್ಯರು ಹೇಳುತ್ತಿದ್ದಂತೆ, ಇತ್ತ ಕಿರಿಯ ಸಹೋದರ ಇರ್ಫಾನ್ ಪೇಶಮಾಮ ಅವರಿಗೆ ಅಣ್ಣನ ಸಾವಿನ ಸುದ್ದಿ ತಡೆಯಲಾಗದೆ ಹಠಾತ್ ಹೃದಯಾಘಾತವಾಗಿದೆ. ಕೂಡಲೇ ಪ್ರಥಮ ಚಿಕಿತ್ಸೆ ನೀಡಿದರೂ ಫಲಕಾರಿಯಾಗದೆ ಇಬ್ಬರೂ ಇಹಲೋಕ ತ್ಯಜಿಸಿದರು.
ಹಠಾತ್ ಸಾವಿನ ಸುದ್ದಿ ಕೇಳಿ ಮನೆಯಲ್ಲಿ ಮೌನ ಮಡುಗಟ್ಟಿದ್ದು, ತಂದೆ-ತಾಯಿಗಳ ಆಕ್ರಂದನ ಮುಗಿಲು ಮುಟ್ಟಿತ್ತು. ನೂರಾರು ಜನರ ಮಧ್ಯೆ ಸೋಮವಾರ ಅಂತ್ಯಕ್ರಿಯೆ ನೆರವೇರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.