ADVERTISEMENT

ಕೆಂಭಾವಿ | ನಿರಂತರ ಮಳೆಗೆ ಹಾಳಾದ ರಸ್ತೆಗಳು: ಪರದಾಟ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 6:16 IST
Last Updated 29 ಆಗಸ್ಟ್ 2025, 6:16 IST
ಕೆಂಭಾವಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ರಸ್ತೆಯಲ್ಲಿ ನೀರು ನಿಂತಿರುವುದು
ಕೆಂಭಾವಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ರಸ್ತೆಯಲ್ಲಿ ನೀರು ನಿಂತಿರುವುದು   

ಕೆಂಭಾವಿ: ‘ನಿರಂತರ ಮಳೆಯಿಂದಾಗಿ ಪಟ್ಟಣ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಆರೋಗ್ಯ, ಶಿಕ್ಷಣ, ವ್ಯವಹಾರ ಸೇರಿದಂತೆ ಹಲವಾರು ಕೆಲಸಗಳಿಗೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಸಾವಿರಾರು ಜನರು ಬಂದು ಹೋಗುತ್ತಾರೆ. ಆದರೆ ಮಳೆಯಿಂದಾಗಿ ರಸ್ತೆಗಳು ಹಾಳಾಗಿದ್ದು ಜನರು ಪ್ರಾಣ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.
ಕೆಂಭಾವಿ ಪುರಸಭೆ ವ್ಯಾಪ್ತಿಯಲ್ಲಿ 23 ವಾರ್ಡ್‌ಗಳಿದ್ದು, ಅದರಲ್ಲಿ ಕೆಲವು ಬಡಾವಣೆಗಳಲ್ಲಿ ಸಿಸಿರಸ್ತೆಗಳು ಕಿತ್ತುಹೋಗಿದ್ದು ಚರಂಡಿ ನೀರು ರಸ್ತೆಯ ಮೇಲೆ ಹರಿದಾಡುತ್ತಿದೆ.

ಜಲಧಾರೆ ಕಾಮಗಾರಿಗಾಗಿ ಪಟ್ಟಣದ ರಸ್ತೆಗಳನ್ನು ಅಗೆದು ಹಾಕಲಾಗಿದೆ. ಆದರೆ, ಸದ್ಯ ಮಳೆಗಾಲ ಇರುವುದರಿಂದ ಅಗೆದಿರುವ ಮಣ್ಣು ಚರಂಡಿ ಸೇರಿದ ಪರಿಣಾಮ ಮಳೆ ನೀರಿನಿಂದ ರಸ್ತೆಗಳು ಕೆರೆಗಳಾಗಿವೆ. ಇನ್ನೊಂದೆಡೆ ಒಳಗಿರುವ ಮಣ್ಣು ಮತ್ತಷ್ಟು ಕುಸಿದು ರಸ್ತೆಯಲ್ಲಿ ಗುಂಡಿ ಹಾಗೂ ಕಂದಕ ಸೃಷ್ಟಿಯಾಗಿ ಜೀವ ಭಯದಲ್ಲಿ ವಾಹನ ಸವಾರರು ಸಂಚಾರ ಮಾಡುವಂತಾಗಿದೆ. ಕುಂಬಾರ ಬಡಾವಣೆ, ಪ್ರೌಢಶಾಲೆ ಹತ್ತಿರ, ಹಳೇಬಸ್ ನಿಲ್ದಾಣ ಪ್ರದೇಶಗಳಲ್ಲಿ ರಸ್ತೆಗಳು ಗುಂಡಿಗಳಿಂದ ಕೂಡಿದ್ದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.

ADVERTISEMENT

ಹಾಳಾದ ಗ್ರಾಮೀಣ ರಸ್ತೆಗಳು: ಇಲ್ಲಿಗೆ ಸಮೀಪದ ನಗನೂರು, ಯಡಿಯಾಪು, ಪರಸನಹಳ್ಳಿ- ನಡಕೂರ ರಸ್ತೆ ಸೇರಿದಂತೆ ಅನೇಕ ಗ್ರಾಮೀಣ ರಸ್ತೆಗಳಲ್ಲಿ ಸತತವಾಗಿ ಸುರಿದ ಮಳೆಯಿಂದಾಗಿ ದೊಡ್ಡದೊಡ್ಡ ಗುಂಡಿಗಳು ನಿರ್ಮಾಣವಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ. 

ಕೆಂಭಾವಿಯಿಂದ ನಗನೂರಿಗೆ ಸಂಪರ್ಕಿಸುವ ರಸ್ತೆಯ ದುಸ್ಥಿತಿ
ಕೆಂಭಾವಿ ಪಟ್ಟಣದ ಕೃಷ್ಣಾ ಕಾಲುವೆಯ ಮೇಲೆ ನೀರು ನಿಂತು ಕೆರೆಯಂತಾಗಿದ್ದು ಸುರಪುರ-ಹುನಗುಂದ ರಾಜ್ಯ ಹೆದ್ದಾರಿ ಕೆಲಕಾಲ ಬಂದಾಗಿತ್ತು 
ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಕೆಲವೆಡೆ ಗ್ರಾಮಿಣ ರಸ್ತೆಗಳು ಹಾಳಾಗಿವೆ. ಇವುಗಳನ್ನು ದುರಸ್ತಿಗೊಳಿಸಲು ತ್ವರಿತಗತಿಯಲ್ಲಿ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿ ಸೂಚನೆ ನೀಡಲಾಗಿದೆ
ಶರಣಬಸಪ್ಪಗೌಡ ದರ್ಶನಾಪುರ ಜಿಲ್ಲಾ ಉಸ್ತುವಾರಿ ಸಚಿವ
ಮನೆಮನೆಗೆ ನಿರಂತರ ನೀರು ಪೂರೈಸುವ ಪೈಪ್‌ಲೈನ್‌ ಹಾಕಲು ಗುಂಡಿಗಳನ್ನು ತೋಡಲಾಗಿದ್ದು ಅವುಗಳನ್ನು ಸರಿಯಾಗಿ ಮುಚ್ಚದ ಪರಿಣಾಮ ರಸ್ತೆಗಳಲ್ಲಿ ಓಡಾಡದಂತಾಗಿದೆ
ಶಿವಯೋಗಿ ಕುಂಬಾರ ಸ್ಥಳೀಯ ನಿವಾಸಿ
ಪ್ರಸಕ್ತ ಮಳೆ ಬರುತ್ತಿದ್ದು ಮಳೆ ನಿಂತ ತಕ್ಷಣ ಪಟ್ಟಣದ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಲಾಗುವುದು
ರಹೆಮಾನ ಪಟೇಲ ಯಲಗೋಡ ಪುರಸಭೆ ಅಧ್ಯಕ್ಷ

ಕೆಂಭಾವಿ- ನಗನೂರು 10 ಕಿ.ಮೀ ರಸ್ತೆ ಸಂಪೂರ್ಣ ಹಾಳಾಗಿದ್ದು ರಸ್ತೆಯುದ್ದಕ್ಕೂ ಗುಂಡಿಗಳು ನಿರ್ಮಾಣವಾಗಿದ್ದು ನಿತ್ಯ ಅನೇಕ ಕೆಲಸಕ್ಕೆ ಸಂಚರಿಸುವ ಜನತೆ ಹಿಡಿಶಾಪ ಹಾಕುತ್ತಿದ್ದಾರೆ. ಮೊದಲೇ ಇಕ್ಕಟ್ಟಾದ ರಸ್ತೆ ಇದಾಗಿದ್ದು ರಸ್ತೆತುಂಬೆಲ್ಲ ತಗ್ಗುದಿನ್ನೆಗಳು ನಿರ್ಮಾಣವಾಗಿದ್ದು ಆಯತಪ್ಪಿ ದ್ವಿಚಕ್ರವಾಹನ ಸವಾರರು ಬಿದ್ದು ಆಸ್ಪತ್ರೆ ಸೇರಿದ ಉದಾಹರನೆಗಳು ಉಂಟು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.