ADVERTISEMENT

ಕೇಂದ್ರೀಯ ವಿದ್ಯಾಲಯ: ತಾತ್ಕಾಲಿಕ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲು ಗುರುತು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 7:03 IST
Last Updated 20 ನವೆಂಬರ್ 2025, 7:03 IST
ಯಾದಗಿರಿ ನಗರ ಹೊರವಲಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಾದರಿಯ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ
ಯಾದಗಿರಿ ನಗರ ಹೊರವಲಯದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಾದರಿಯ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ   

ಯಾದಗಿರಿ: ನಗರದ ಹೊರವಲಯದಲ್ಲಿ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮಾದರಿಯ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡದಲ್ಲಿ ಕೇಂದ್ರೀಯ ವಿದ್ಯಾಲಯದ ತರಗತಿಗಳನ್ನು ತಾತ್ಕಾಲಿಕವಾಗಿ ನಡೆಸಲು ಗುರುತಿಸಲಾಗಿದೆ.

ಕಳೆದ ವರ್ಷದ ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರದ ಸಚಿವ ಸಂಪುಟವು ಕರ್ನಾಟಕದ ಮೂರು ಸೇರಿದಂತೆ ದೇಶದಾದ್ಯಂತ 85 ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲು ಅನುಮೋದನೆ ನೀಡಿತ್ತು. ಅವುಗಳ ಪೈಕಿ ಯಾದಗಿರಿ ಸಹ ಒಳಗೊಂಡಿತ್ತು. ಹೊಸ ಜಿಲ್ಲೆಯಾಗಿ ವರ್ಷಗಳು ಕಳೆದ ಬಳಿಕ ಕೇಂದ್ರೀಯ ವಿದ್ಯಾಲಯದ ಭಾಗ್ಯ ತಡವಾಗಿಯಾದರೂ ಲಭ್ಯವಾಗಿದೆ. ‘ಯಿಮ್ಸ್‌’ ಸಮೀಪದಲ್ಲಿಯೇ ಜಾಗವನ್ನು ಸಹ ಗುರುತು ಮಾಡಲಾಗಿದೆ.

ಕೆಲವು ತಿಂಗಳ ಹಿಂದೆ ಕೇಂದ್ರೀಯ ವಿದ್ಯಾಲಯದ ದೆಹಲಿಯ ತಂಡವೊಂದು ಜಿಲ್ಲೆಗೆ ಭೇಟಿ ನೀಡಿತ್ತು. ಸ್ವಂತ ಕಟ್ಟಡ ನಿರ್ಮಾಣ ಆಗುವವರೆಗೂ ತಾತ್ಕಾಲಿಕ ಕಟ್ಟಡದಲ್ಲಿ ತರಗತಿಗಳನ್ನು ನಡೆಸಿಲು ಹಲವು ಕಟ್ಟಡಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು.

ADVERTISEMENT

ಸ್ಥಳೀಯ ಅಧಿಕಾರಿಗಳು ಸಾಕಷ್ಟು ಕಟ್ಟಡಗಳನ್ನು ದೆಹಲಿಯ ತಂಡಕ್ಕೆ ತೋರಿಸಿದ್ದರು. ಅಂತಿಮವಾಗಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡವೇ ಸೂಕ್ತವಾಗಿದೆ ಎಂದು ಅವರು ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ, ಜಿಲ್ಲಾಡಳಿತವು ಪ್ರಥಮ ದರ್ಜೆ ಕಾಲೇಜಿನ ಕಟ್ಟಡದಲ್ಲಿ ತರಗತಿಗಳನ್ನು ನಡೆಸಬಹುದು ಎಂಬ ಪ್ರಸ್ತಾವನೆಯನ್ನು ಕಳುಹಿಸಿದ್ದು, ಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದೆ.

ಕಾಲೇಜು ಶಿಕ್ಷಣ ಇಲಾಖೆಯು ಬಹುಕೋಟಿ ವೆಚ್ಚದಲ್ಲಿ 2019ರ ಜುಲೈನಲ್ಲಿ ಎಸ್‌ಸಿ/ಎಸ್‌ಟಿ ಮಾದರಿಯ ವಸತಿಯುಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡವನ್ನು ನಿರ್ಮಾಣ ಮಾಡಿತ್ತು. ಕೆಳ ಮತ್ತು ಮೇಲಿನ ಮಹಡಿ ಹೊಂದಿರುವ ಈ ಕಟ್ಟಡದಲ್ಲಿ ಪ್ರಸ್ತುತ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ತರಗತಿಗಳು ನಡೆಯುತ್ತಿವೆ. ಮೂರು ವಿಭಾಗಗಳಿಂದ ಸುಮಾರು 110 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ.

ಕಾಲೇಜಿನ ಕಟ್ಟಡದ ಆವರಣದಲ್ಲಿಯೇ 380 (ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ) ಮಕ್ಕಳ ಸಾಮರ್ಥ್ಯದ ವಸತಿ ಸಹಿತ ಕಟ್ಟಡವೂ ಇದೆ. ಆದರೆ, ನಿರ್ವಹಣೆ ಇಲ್ಲದೆ ಪಾಳು ಬಿದ್ದಿದೆ.

ಕೇಂದ್ರೀಯ ವಿದ್ಯಾಯಲಯದ ತರಗತಿಗಳನ್ನು ನಡೆಸಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡವು ಸೂಕ್ತವಾಗಿದೆ. ಮುದ್ನಾಳ ಗ್ರಾಮ ವ್ಯಾಪ್ತಿಯಲ್ಲಿ ಇರುವುದರಿಂದ ಸುತ್ತಲೂ ಪ್ರಶಾಂತವಾದ ವಾತಾವರಣವಿದೆ. ಬೋಧನೆಗೆ ಸೂಕ್ತವಾದ ತರಗತಿಯ ಕೋಣೆಗಳು, ಶಿಕ್ಷಕರ, ಪ್ರಾಂಶುಪಾಲರ, ಗ್ರಂಥಾಲಯಕ್ಕೂ ಅನುಕೂಲಕರವಾದ ಕೊಠಡಿಗಳನ್ನು ಹೊಂದಿ ಸುಸಜ್ಜಿತವಾಗಿದೆ.

‘ಕೇಂದ್ರೀಯ ವಿದ್ಯಾಲಯವನ್ನು ನಡೆಸಲು ಕಾಲೇಜಿನ ಇಡೀ ಕಟ್ಟಡವನ್ನು ಬಿಟ್ಟುಕೊಡುವಂತೆ ಮನವಿ ಮಾಡಿದ್ದರು. ಕಟ್ಟಡ ಬಿಟ್ಟುಕೊಟ್ಟರೆ ನಮ್ಮ ಮಕ್ಕಳಿಗೆ ತೊಂದರೆ ಆಗುತ್ತದೆ ಎಂದು ಅದಕ್ಕೆ ಒಪ‍್ಪಲಿಲ್ಲ. ಪಕ್ಕದಲ್ಲಿರುವ ಹಾಸ್ಟೆಲ್‌ನ ಕಟ್ಟಡದಲ್ಲಿ ತರಗತಿಗಳನ್ನು ನಡೆಸಲು ಕೋರಿದ್ದೆವು. ಸುಮಾರು 60 ವಿದ್ಯಾರ್ಥಿಗಳು ಕೂರುವಷ್ಟು ತರಗತಿ ಕೋಣೆಗಳು ಬೇಕಾಗುತ್ತದೆ. ಹಾಸ್ಟೆಲ್‌ನ ಕಟ್ಟಡ ಹೊಂದಿಕೆ ಆಗುವುದಿಲ್ಲ. ಅದರ ಬದಲು ಕಾಲೇಜಿನ ಕಟ್ಟಡದ ಮೇಲೆ ದೆಹಲಿ ತಂಡ ಒಲವು ವ್ಯಕ್ತಪಡಿಸಿತ್ತು’ ಎಂದು ಕಾಲೇಜಿನ ಪ್ರಾಂಶುಪಾಲ ಪಿ.ಅಶೋಕ ಕುಮಾರ ಮಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.

ಹರ್ಷಲ್ ಭೋಯರ್
ಕಾಲೇಜಿನ ಮೊದಲನ ಮಹಡಿಯಲ್ಲಿ ತರಗತಿಗಳನ್ನು ನಡೆಸಲು ಕೇಂದ್ರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಅನುಮೂದನೆ ಕೊಟ್ಟ ಬಳಿಕ ತರಗತಿ ನಡೆಸಲು ಅಗತ್ಯವಾದ ವ್ಯವಸ್ಥೆಯನ್ನು ಕಲ್ಪಿಸಲಾಗುವುದು
ಹರ್ಷಲ್ ಭೋಯಾರ್ ಜಿಲ್ಲಾಧಿಕಾರಿ

ಹಲವು ಕಟ್ಟಡಗಳ ಪರಿಶೀಲನೆ

ದೆಹಲಿಯ ತಂಡವು ತಾತ್ಕಾಲಿಕ ತರಗತಿಗಳನ್ನು ನಡೆಸಲು ನಗರ ಹಾಗೂ ನಗರದ ಸುತ್ತಲಿನ ಸರ್ಕಾರದ ಅಧೀನದಲ್ಲಿರುವ ಹಲವಾರು ಕಟ್ಟಡಗಳಿಗೆ ಭೇಟಿ ಕೊಟ್ಟಿತ್ತು. ಎಲ್ಲಾ ಆಯಾಮಗಳಿಂದ ಪರಿಶೀಲನೆಯೂ ನಡೆಸಿತ್ತು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಆದರ್ಶ ವಿದ್ಯಾಲಯದ ಕಟ್ಟಡದಲ್ಲಿ 1ರಿಂದ 5ನೇ ತರಗತಿವರೆಗೆ ಕ್ಲಾಸ್‌ಗಳನ್ನು ನಡೆಸಲು ಆರಂಭದಲ್ಲಿ ಒಪ್ಪಿಕೊಂಡಿತ್ತು.

ಆ ನಂತರ 6ನೇ ತರತಿಗಳನ್ನು ನಡೆಸುವುದಾಗಿ ಹೇಳಿ ಇಡೀ ಕಟ್ಟಡವನ್ನು ಬಿಟ್ಟು ಕೊಡಬೇಕು. ಆದರ್ಶ ವಿದ್ಯಾಲಯವನ್ನು ಬೇರೆ ಕಡೆ ಸ್ಥಳಾಂತರ ಮಾಡುವಂತೆ ಕೋರಿತ್ತು. ಇದಕ್ಕೆ ಒಪ್ಪಿಗೆ ಸಿಗಲಿಲ್ಲ ಎಂದರು. ‌ಮುಂಡರಗಿ ಸಮೀಪದ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಕಟ್ಟಡವನ್ನು ತೋರಿಸಿದರೂ ಒಪ್ಪಲಿಲ್ಲ. ಅಲ್ಲಿಯೇ ಬೆಟ್ಟದ ಮೇಲಿನ ಭೂಮಿಗೂ ಸಹಮತ ನೀಡಿಲಿಲ್ಲ. ಅಂತಿಮವಾಗಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡವನ್ನು ಆಯ್ಕೆ ಮಾಡಿಕೊಂಡರು. ಕಟ್ಟಡಕ್ಕೆ ಎರಡು ಪ್ರವೇಶ ದ್ವಾರಗಳಿದ್ದು ಒಂದುಕಡೆ ಕಾಲೇಜು ಮತ್ತೊಂದು ಕಡೆ ವಿದ್ಯಾಲಯದ ಮೊದಲನೇ ಮಹಡಿಯಲ್ಲಿ 1ರಿಂದ 5ನೇ ತರಗತಿಗಳನ್ನು ನಡೆಸಲಿದೆ ಎಂದು ಹೇಳಿದರು. ಈ ಹಿಂದೆ ಕಾಲೇಜಿನ ಈ ಕಟ್ಟಡವನ್ನು ‘ಯಿಮ್ಸ್‌’ಗೆ ನೀಡಲಾಗಿತ್ತು. ಕಾಮಗಾರಿ ಪೂರ್ಣಗೊಂಡ ಬಳಿಕ ಯಿಮ್ಸ್‌ ಸ್ಥಳಾಂತರಗೊಂಡಿತ್ತು.

ರಸ್ತೆ ಸಂಪರ್ಕ ಇಲ್ಲದ ಕಾಲೇಜು

ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ತೆರಳಲು ಸರಿಯಾದ ರಸ್ತೆಯೇ ಇಲ್ಲ. ಯಾದಗಿರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯವರೆಗೆ (ಯಿಮ್ಸ್‌) ರಸ್ತೆ ಇದೆ. ಆಸ್ಪತ್ರೆಯ ಬದಿಯಲ್ಲಿನ ಖಾಸಗಿ ಜಮೀನುಗಳ ಪಕ್ಕದಲ್ಲಿ ಕಾಲೇಜಿನ ಕಟ್ಟಡವಿದೆ. ಆಸ್ಪತ್ರೆಯಿಂದ ಕಾಲೇಜಿಗೆ ಹೋಗಲ ರಸ್ತೆಯೇ ಇಲ್ಲ. ಖಾಸಗಿ ಜಮೀನುಗಳ ನಡುವಿನಲ್ಲಿ ಹಾದು ಹೋಗುವಂತಿದೆ. ಜಮೀನುಗಳ ಮಧ್ಯದಲ್ಲಿ ಕಾಲು ರಸ್ತೆ ಇದ್ದು ಮಳೆಗಾಲದಲ್ಲಿ ಕೆಸರುಮಯ ಆಗಿರುತ್ತದೆ. ಕಟ್ಟಡದ ಸುತ್ತಲೂ ಕಾಂಪೌಂಡ್ ಸಹ ಇಲ್ಲ.