ADVERTISEMENT

ರಾಣಿ ಚನ್ನಮ್ಮ ಬದುಕು ನಮಗೆಲ್ಲಾ ಸ್ಪೂರ್ತಿ: ಉಪವಿಭಾಗಾಧಿಕಾರಿ ಗೋಟೂರು

ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮ, ಉಪವಿಭಾಗಾಧಿಕಾರಿ ಗೋಟೂರು

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2025, 7:30 IST
Last Updated 24 ಅಕ್ಟೋಬರ್ 2025, 7:30 IST
ಯಾದಗಿರಿ ನಗರದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶ್ರೀಧರ ಗೋಟೂರು ಮಾತನಾಡಿದರು.
ಯಾದಗಿರಿ ನಗರದಲ್ಲಿ ಗುರುವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಶ್ರೀಧರ ಗೋಟೂರು ಮಾತನಾಡಿದರು.   

ಯಾದಗಿರಿ: ‘ಇಂದಿನ ಸಮಾಜದಲ್ಲಿನ ಸಾಮಾಜಿಕ ದೌರ್ಜನ್ಯ, ಭ್ರಷ್ಟಾಚಾರ ಮತ್ತು ಅನ್ಯಾಯದ ವಿರುದ್ಧ ಹೋರಾಟಕ್ಕೆ ಕಿತ್ತೂರು ರಾಣಿ ಚನ್ನಮ್ಮ ಅವರ ಬದುಕು, ಬ್ರಿಟಿಷರ ವಿರುದ್ಧದ ಅವರ ಹೋರಾಟ ನಮಗೆಲ್ಲಾ ಸ್ಪೂರ್ತಿಯಾಗಲಿ’ ಉಪವಿಭಾಗಾಧಿಕಾರಿ ಶ್ರೀಧರ ಗೋಟೂರು ಅಭಿಪ್ರಾಯಪಟ್ಟರು.

ನಗರದ ಜಿಲ್ಲಾ ಕಸಾಪ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಸಭೆ ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮ ಜಯಂತ್ಯುತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ಕಿತ್ತೂರು ರಾಣಿ ಚನ್ನಮ್ಮ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ರಾಣಿ ಚನ್ನಮ್ಮ ಅವರು ಕುದುರೆ ಸವಾರಿ, ಕತ್ತಿವರಸೆ ಕಲಿತು ಬ್ರಿಟಿಷರ ವಿರುದ್ಧ ಹೋರಾಡಿದರು. ನಾವೀಗ ನಮ್ಮ ದೇಶದಲ್ಲಿನ ಸಂಕಷ್ಟಗಳು, ದೌರ್ಜನ್ಯಗಳ ವಿರುದ್ಧ ಹೋರಾಡುವ ಅಗತ್ಯವಿದೆ’ ಎಂದರು.

ADVERTISEMENT

ನಿವೃತ್ತ ಪ್ರಾಂಶುಪಾಲ ಗುರುಸಿದ್ದಪ್ಪಗೌಡ ಪಾಟೀಲ ಉಪನ್ಯಾಸ ನೀಡಿ, ‘ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ್ದ ಮೊದಲ ಹೋರಾಟಗಾರ್ತಿ ಕಿತ್ತೂರು ರಾಣಿ ಚನ್ನಮ್ಮ. ಅವರು ಪಂಚಮಸಾಲಿ ಸಮುದಾಯದ ಹೆಮ್ಮೆ’ ಎಂದರು.

‘ಭಾರತದ ಇತಿಹಾಸದಲ್ಲಿ ಚನ್ನಮ್ಮಾಜಿ ಅವರು ನಕ್ಷತ್ರದಂತೆ ಹೊಳೆಯತ್ತಾರೆ. ಆದರೆ, ಅವರ ಅರಮನೆಯ ಭ್ರಷ್ಟ ಮಲ್ಲಪ್ಪ ಶೆಟ್ಟಿಯಿಂದಾಗಿ ಮೋಸಕ್ಕೊಳಗಾದರು. ಈಗಲೂ ಮಲ್ಲಪ್ಪ ಶೆಟ್ಟಿಯಂತಾ ಭ್ರಷ್ಟರಿದ್ದಾರೆ’ ಎಂದು ಹೇಳಿದರು.

ಇತರ ಸಂಸ್ಥಾನಗಳಂತೆ ಬ್ರಿಟೀಷರೊಂದಿಗೆ ಒಪ್ಪಂದ ಮಾಡಿಕೊಂಡು ಅರಾಮವಾಗಿರಬಹುದಿತ್ತು. ಆದರೆ, ನಾಡಿನ ಸ್ವಾತಂತ್ರ್ಯಕ್ಕಾಗಿ ಅವರು ಹೋರಾಟದ ಹಾದಿ ಹಿಡಿದರು. ಕಿತ್ತೂರಿನ ಸೈನ್ಯ ಬ್ರಿಟೀಷರನ್ನು ಸೋಲಿಸಿತ್ತು. ಬ್ರಿಟೀಷರು ಮನವಿ ಮಾಡಿದಾಗ ಸೆರೆಸಿಕ್ಕ ಬ್ರಿಟೀಷ ಸೈನಿಕರನ್ನು ಬಿಡುಗಡೆ ಮಾಡಿದ್ದರು’ ಎಂದು ವಿವರಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಾಬುರಾವ ಕಾಡ್ಲೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಉತ್ತಾರದೇವಿ, ಪಂಚಮಸಾಲಿ ಸಮಾಜದ ಜಿಲ್ಲಾಧ್ಯಕ್ಷ ಮಲ್ಲಣ್ಣಗೌಡ ಪಾಟೀಲ ಉಪಸ್ಥಿತರಿದ್ದರು.

Quote - ಯುವಕರು ಮಹನೀಯರ ಬದುಕಿನಿಂದ ಪ್ರೇರಣೆಯಾಗಿ ದೌರ್ಜನ್ಯಗಳ ವಿರುದ್ಧ ಧ್ವನಿ ಎತ್ತಿ ಹೋರಾಟದ ಪರಂಪರೆಯನ್ನ ಉಳಿಸಿದರೆ ಜಯಂತಿ ಆಚರಣೆಗೆ ಅರ್ಥ ಮತ್ತು ಬದುಕಿಗೂ ಗೌರವ ಕೊಟ್ಟಂತೆ. ಶ್ರೀಧರ ಗೋಟೂರು ಯಾದಗಿರಿ ಉಪವಿಭಾಗಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.